ಚಂದ್ರವಳ್ಳಿ ನ್ಯೂಸ್, ಬೆಂಗಳೂರು: "ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಶಾಸಕರು ನೀಡಿರುವ ಬೆಂಬಲ ಕೇವಲ ಸರ್ಕಾರಕ್ಕೆ ಸೀಮಿತವಲ್ಲ; ಇದು ರಾಜ್ಯದ ಜನತೆಯ ಹಿತಕ್ಕಾಗಿ ವ್ಯಕ್ತವಾಗಿರುವ ಪಕ್ಷಾತೀತ ಬೆಂಬಲವಾಗಿದೆ" ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ಐದೂ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ, ವಿಧಾನಸೌಧದಲ್ಲಿ ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸಿ ಜಂಟಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಉಪಸ್ಥಿತರಿದ್ದರು.
ಐದೂ ಅಭ್ಯರ್ಥಿಗಳಿಗೆ ಭರ್ಜರಿ ಗೆಲುವು
ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದ ಪ್ರಮುಖ ನಾಯಕರಾದ ಬಿ.ಕೆ. ಹರಿಪ್ರಸಾದ್, ಮಳವಳ್ಳಿ ಶಿವಣ್ಣ, ಪಿ.ವಿ. ಮೋಹನ್, ವಿನಯ್ ಕಾರ್ತಿಕ್ ಹಾಗೂ ತಿಪ್ಪಣ್ಣಪ್ಪ ಕಮಕನೂರ್ ಅವರು ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, "ನಮ್ಮ ಪಕ್ಷದಿಂದ ಐದು ಅಭ್ಯರ್ಥಿಗಳು ಕಣದಲ್ಲಿದ್ದರು. ಸದನದಲ್ಲಿ ನಮ್ಮ ಶಾಸಕರ ಸಂಖ್ಯಾಬಲ ಎಷ್ಟಿತ್ತು ಎಂಬುದು ಮಾಧ್ಯಮಗಳಿಗೆ ತಿಳಿದಿತ್ತು. ಆದರೂ ಐದೂ ಜನ ಗೆಲ್ಲುತ್ತಾರೆ ಎನ್ನುವ ದೃಢ ವಿಶ್ವಾಸ ನಮಗಿತ್ತು, ಅದರಂತೆ ಅಭ್ಯರ್ಥಿಗಳು ಗೆದ್ದು ಬಂದಿದ್ದಾರೆ" ಎಂದರು.
ಆಶ್ಚರ್ಯ ಮೂಡಿಸಿದ ಪಕ್ಷಾತೀತ ವಿಶ್ವಾಸ
"ಚುನಾವಣೆಯಲ್ಲಿ ನಮ್ಮ ಸರ್ಕಾರಕ್ಕೆ ಸಿಕ್ಕ ಶಾಸಕರ ಬೆಂಬಲ ಕಂಡು ನನಗೆ ಆಶ್ಚರ್ಯವಾಗಿದೆ. ನಾವು ಇಡುತ್ತಿರುವ ಪ್ರತಿಯೊಂದು ಪ್ರಗತಿಪರ ಹೆಜ್ಜೆಗೂ 'ನಾವೂ ನಿಮ್ಮ ಜೊತೆಗಿದ್ದೇವೆ' ಎಂದು ಬೇರೆ ಪಕ್ಷಗಳ ಶಾಸಕರೂ ಪಕ್ಷಾತೀತವಾಗಿ ಬೆಂಬಲ ನೀಡಿದ್ದಾರೆ.
ನಮ್ಮ ಪಕ್ಷದ ಶಾಸಕರು ಅತ್ಯಂತ ಒಗ್ಗಟ್ಟಿನಿಂದ ಮತ ಚಲಾಯಿಸಿದ್ದಾರೆ. ಬೇರೆ ಪಕ್ಷಗಳ ಶಾಸಕರು ನಮ್ಮ ಮೇಲಿಟ್ಟಿರುವ ಈ ವಿಶ್ವಾಸವನ್ನು ನಾವು ಖಂಡಿತವಾಗಿಯೂ ಉಳಿಸಿಕೊಳ್ಳುತ್ತೇವೆ. ಈ ವಿಶ್ವಾಸ ಜನತೆಗೆ ನೀಡಿದ ಶಕ್ತಿಯಾಗಿದೆ" ಎಂದು ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಹರ್ಷ ವ್ಯಕ್ತಪಡಿಸಿದರು.
ಶಾಸಕರಿಗೆ ಕೃತಜ್ಞತೆ ಸಲ್ಲಿಸಿದ ಡಿಕೆಶಿ
ಪಕ್ಷದ ಶಾಸಕರ ಒಂದು ಮತವೂ ತಿರಸ್ಕೃತವಾಗಬಾರದು ಎಂಬ ನಿಟ್ಟಿನಲ್ಲಿ ಚುನಾವಣೆಗೆ ಮುನ್ನ ಸೂಕ್ತ ತರಬೇತಿ ನೀಡಲಾಗಿತ್ತು.
ಈ ಪ್ರಕ್ರಿಯೆ ಯಶಸ್ವಿಯಾಗಲು ಸಹಕರಿಸಿದ ಎಲ್ಲಾ ಪದಾಧಿಕಾರಿಗಳು, ಶಾಸಕರು, ನಾಯಕರು ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಇತರ ಕಾರ್ಯದರ್ಶಿಗಳಿಗೆ ಡಿ.ಕೆ. ಶಿವಕುಮಾರ್ ಅವರು ವಿಶೇಷ ಧನ್ಯವಾದಗಳನ್ನು ಅರ್ಪಿಸಿದರು.



