ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ನಮ್ಮ ಜಮೀನು ಉಳಿಸಿಕೊಡಪ್ಪ ಎಂದು ಹಿರಿಯ ಜೀವವೊಂದು ಕಣ್ಣೀರು ಹಾಕಿ ಕೇಳಿದಾಗ ನಾನೂ ಭಾವುಕನಾದೆ. ಅನ್ನ ಕೊಡುವ ಕೈಗಳಿಂದ ಒಂದು ಇಂಚು ಭೂಮಿಯನ್ನೂ ಕಿತ್ತುಕೊಳ್ಳಲು ನಾವು ಬಿಡುವುದಿಲ್ಲ" ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬಿಡದಿ ಟೌನ್‌ಶಿಪ್‌ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಅವರು, ಸಂತ್ರಸ್ತ ಹಳ್ಳಿಗಳಿಗೆ ಭೇಟಿ ನೀಡಿ ರೈತರ ಅಹವಾಲು ಆಲಿಸುವ ವೇಳೆ ಈ ಭಾವುಕ ಪ್ರತಿಕ್ರಿಯೆ ನೀಡಿದ್ದಾರೆ.
ಕಣ್ಣೀರು ಹಾಕಿದ ಹಿರಿಯ ಜೀವ: ಭಾವುಕರಾದ ನಿಖಿಲ್:
ಬಿಡದಿ ಟೌನ್‌ಶಿಪ್‌ವಿರೋಧಿಸಿ ಹಳ್ಳಿ ಹಳ್ಳಿಗಳಿಗೆ ಪ್ರವಾಸ ಕೈಗೊಂಡಿರುವ ನಿಖಿಲ್ ಕುಮಾರಸ್ವಾಮಿ, ಇತ್ತೀಚೆಗೆ ಕೆಂಪಯ್ಯನಪಾಳ್ಯಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಹಿರಿಯ ರೈತರೊಬ್ಬರು ನಿಖಿಲ್ ಅವರ ಕೈ ಹಿಡಿದು, "ಮಗಾ, ನಮ್ಮ ಜಮೀನು ಉಳಿಸಿಕೊಡಪ್ಪ" ಎಂದು ಕಣ್ಣೀರು ಹಾಕಿದ್ದಾರೆ. ಈ ದೃಶ್ಯ ನೆರೆದಿದ್ದವರ ಕಣ್ಣಾಲಿಗಳನ್ನು ತುಂಬಿ ಬರುವಂತೆ ಮಾಡಿತು. ಈ ಘಟನೆಯಿಂದ ಭಾವುಕರಾದ ನಿಖಿಲ್, ರೈತರ ಪರವಾಗಿ ಕೊನೆಯವರೆಗೂ ಹೋರಾಡುವುದಾಗಿ ಶಪಥ ಮಾಡಿದ್ದಾರೆ.
"ಕುರ್ಚಿ ಗಲಾಟೆ ನಿಲ್ಲಿಸಿ, ರೈತರ ಕಷ್ಟ ಆಲಿಸಿ":
ಇದೇ ವೇಳೆ ಆಡಳಿತಾರೂಢ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ನಿಖಿಲ್ ಕುಮಾರಸ್ವಾಮಿ,
"ದಪ್ಪ ಚರ್ಮದ ಸರ್ಕಾರವೇ, ಮೊದಲು ನಿಮ್ಮ ಕುರ್ಚಿ ಗಲಾಟೆಯನ್ನು ನಿಲ್ಲಿಸಿ. ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಇಲ್ಲಿನ ರೈತರ ಕಷ್ಟ ಏನೆಂಬುದನ್ನು ಆಲಿಸಿ." ಎಂದು ಆಕ್ರೋಶ ಹೊರಹಾಕಿದ್ದಾರೆ.
ರೈತರೊಂದಿಗೆ ಕೊನೆಯವರೆಗೂ ಹೋರಾಟ:
ಯಾವುದೇ ಕಾರಣಕ್ಕೂ ಬಿಡದಿ ಟೌನ್‌ಶಿಪ್‌ಹೆಸರಿನಲ್ಲಿ ರೈತರ ಭೂಮಿ ವಶಪಡಿಸಿಕೊಳ್ಳಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, "ರೈತರೊಂದಿಗೆ ನಾನು ಕೊನೆಯವರೆಗೂ ನಿಲ್ಲುತ್ತೇನೆ ಎಂದು ಶಪಥ ಮಾಡಿದ್ದೇನೆ. ಅನ್ನದಾತರ ಭೂಮಿ ರಕ್ಷಿಸಲು ನಮ್ಮ ಹೋರಾಟ ಮುಂದುವರಿಯಲಿದೆ" ಎಂದು ಧೃಢವಾಗಿ ಹೇಳಿದ್ದಾರೆ.
ಬಿಡದಿ ಭಾಗದಲ್ಲಿ ಟೌನ್‌ಶಿಪ್‌ಯೋಜನೆಗೆ ರೈತರಿಂದ ವ್ಯಾಪಕ ಪ್ರತಿರೋಧ ವ್ಯಕ್ತವಾಗುತ್ತಿದ್ದು, ನಿಖಿಲ್ ಕುಮಾರಸ್ವಾಮಿ ಅವರ ಭೇಟಿ ಮತ್ತು ಹೋರಾಟದ ಶಪಥವು ಈ ಚಳುವಳಿಗೆ ಮತ್ತಷ್ಟು ರಾಜಕೀಯ ಬಲ ತಂದಿದೆ.



