ಚಂದ್ರವಳ್ಳಿ ನ್ಯೂಸ್, ಮೈಸೂರು:
ಇದೇ ಜೂನ್ 24 ರಂದು (ನಾಡಿದ್ದು) ವೈವಾಹಿಕ ಜೀವನಕ್ಕೆ ಕಾಲಿಡಬೇಕಾಗಿದ್ದ ಯುವತಿಯೊಬ್ಬಳು, ಕಾಮುಕನ ಕಿರುಕುಳ ಹಾಗೂ ಅದರಿಂದ ಉಂಟಾದ ಅವಮಾನ ತಾಳಲಾರದೆ ಹೆತ್ತ ಪೋಷಕರೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಅತ್ಯಂತ ಮನಕಲಕುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಗ್ರಾಮದ ಶಿವಣ್ಣ (54), ಆಕೆಯ ಪತ್ನಿ ನಾಗರತ್ನ (44) ಮತ್ತು ಮಗಳು ರಕ್ಷಿತಾ (21) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು. ಸಾವಿಗೂ ಮುನ್ನ ಮೂವರೂ ಸೇರಿ ಡೆತ್‌ನೋಟ್‌ಬರೆದಿಟ್ಟಿದ್ದು, ತಮ್ಮ ಸಾವಿಗೆ ಅದೇ ಗ್ರಾಮದ ಉಲ್ಲಾಸ್ ಗೌಡ ಎಂಬಾತನೇ ನೇರ ಕಾರಣ ಎಂದು ಉಲ್ಲೇಖಿಸಿದ್ದಾರೆ. ಮದುವೆ ಸಂಭ್ರಮದಲ್ಲಿ ಸಡಗರದಿಂದ ಇರಬೇಕಾಗಿದ್ದ ಮನೆಯಲ್ಲಿ ಸದ್ಯ ಹೆಣಗಳ ರಾಶಿ ಬಿದ್ದಿದ್ದು, ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.
ಘಟನೆಯ ಹಿನ್ನೆಲೆ ಏನು?:
ಮೃತ ರಕ್ಷಿತಾಗೆ ಮೂರು ತಿಂಗಳ ಹಿಂದಷ್ಟೇ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಜೂನ್ 23 ಹಾಗೂ 24ರಂದು ವಿವಾಹ ಮಹೋತ್ಸವ ನೆರವೇರಿಸಲು ಎರಡು ಕುಟುಂಬಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದವು. ರಕ್ಷಿತಾ ನಿಶ್ಚಿತಾರ್ಥದ ವೇಳೆಯೂ ಉಲ್ಲಾಸ್ ಗೌಡ ಎಂಬಾತ ಅವರ ಮನೆಯ ಸುತ್ತಮುತ್ತಲೇ ಓಡಾಡಿಕೊಂಡಿದ್ದ ಎನ್ನಲಾಗಿದೆ.
ಮದುವೆ ನಿಲ್ಲಿಸಲು ಯತ್ನ: ಮದುವೆಗೆ ಕೇವಲ ಒಂದು ವಾರ ಬಾಕಿ ಇರುವಾಗ ಉಲ್ಲಾಸ್ ಗೌಡ, ರಕ್ಷಿತಾ ಹೆತ್ತವರ ಬಳಿ ಹೋಗಿ "ನಾನು ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದೇನೆ, ನನಗೇ ಕೊಟ್ಟು ಮದುವೆ ಮಾಡಿ" ಎಂದು ಹಠ ಹಿಡಿದಿದ್ದ. ಆಗ ಪೋಷಕರು ಆತನಿಗೆ ಬೈದು ಬುದ್ಧಿಮಾತು ಹೇಳಿ ಕಳುಹಿಸಿದ್ದರು.
ಗ್ರಾಮ ಪಂಚಾಯತಿ: ಆದರೂ ಕೇಳದ ಉಲ್ಲಾಸ್ ತಗಾದೆ ತೆಗೆದು ಗಲಾಟೆ ಮಾಡಿದ್ದರಿಂದ, ಭಾನುವಾರ ರಾತ್ರಿ ಗ್ರಾಮದ ಹಿರಿಯರೆಲ್ಲ ಸೇರಿ ಆತನಿಗೆ ಬುದ್ಧಿ ಕಲಿಸಲು ನ್ಯಾಯ ಪಂಚಾಯತಿ ಕೂಡ ಮಾಡಿದ್ದರು.
ಫೋಟೋ, ಮೆಸೇಜ್ ಕಳುಹಿಸಿ ವಿಕೃತಿ!:
ಪಂಚಾಯತಿ ಆದ ಮೇಲೆಯೂ ಉಲ್ಲಾಸ್‌ನ ವಿಕೃತಿ ನಿಂತಿರಲಿಲ್ಲ. ಹಿಂದೆ ರಕ್ಷಿತಾ ತನಗೆ ಕಳುಹಿಸಿದ್ದ ಕೆಲವು ಹಳೆಯ ಮೊಬೈಲ್ ಸಂದೇಶಗಳು ಹಾಗೂ ಫೋಟೋಗಳನ್ನು ಇಟ್ಟುಕೊಂಡು ಆಕೆಗೆ ನಿರಂತರವಾಗಿ ಬ್ಲಾಕ್‌ಮೇಲ್ ಮಾಡಿ ಮಾನಸಿಕ ಹಿಂಸೆ ನೀಡಲಾರಂಭಿಸಿದ್ದ. ಅಷ್ಟಕ್ಕೇ ನಿಲ್ಲಿಸದ ಆತ, ಆ ಫೋಟೋ ಮತ್ತು ಮೆಸೇಜ್‌ಗಳನ್ನು ರಕ್ಷಿತಾ ಮದುವೆಯಾಗಬೇಕಿದ್ದ ಯುವಕನಿಗೂ ಕಳುಹಿಸಿ ವಿಕೃತಿ ಮೆರೆದಿದ್ದಾನೆ.
ಅವಮಾನ ತಾಳಲಾರದೆ ದುರಂತ ಅಂತ್ಯ:
ಮಗಳ ಮದುವೆಯ ಹೊಸ್ತಿಲಿನಲ್ಲಿ ನಿಂತಿದ್ದ ಕುಟುಂಬಕ್ಕೆ ಈ ಘಟನೆ ತೀವ್ರ ಆಘಾತ ನೀಡಿದೆ. ಮದುವೆ ಮುರಿದುಬೀಳುವ ಭೀತಿ ಹಾಗೂ ಸಮಾಜದಲ್ಲಿ ಆಗುವ ತೀವ್ರ ಅವಮಾನಕ್ಕೆ ಹೆದರಿದ ಇಡೀ ಕುಟುಂಬ, ಡೆತ್‌ನೋಟ್‌ಬರೆದಿಟ್ಟು ಒಟ್ಟಿಗೇ ವಿಷ ಸೇವಿಸಿ ಪ್ರಾಣ ಬಿಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ವರುಣಾ ಪೊಲೀಸ್ ಠಾಣಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಡೆತ್‌ನೋಟ್ ಆಧಾರದ ಮೇಲೆ ಆರೋಪಿ ಉಲ್ಲಾಸ್ ಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನ ಪತ್ತೆಗಾಗಿ ಜಾಲ ಬೀಸಿದ್ದಾರೆ.



