ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ಒಂದು ರಾಷ್ಟ್ರ, ಒಂದು ಚುನಾವಣೆ" ಎಂಬುದು ಕೇವಲ ಚುನಾವಣಾ ಸುಧಾರಣೆಯಲ್ಲ, ಇದು ದೇಶದ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿ, ಸ್ಥಿರ ಹಾಗೂ ಅಭಿವೃದ್ಧಿ ಕೇಂದ್ರಿತವಾಗಿಸುವ ದೂರದೃಷ್ಟಿಯ ಪರಿಕಲ್ಪನೆಯಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತಿಳಿಸಿದ್ದಾರೆ.
ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಲೋಕಸಭಾ ಸದಸ್ಯ ಪಿ.ಪಿ. ಚೌಧರಿ ಅವರ ಅಧ್ಯಕ್ಷತೆಯಲ್ಲಿ "ಒಂದು ರಾಷ್ಟ್ರ, ಒಂದು ಚುನಾವಣೆ" ಚುನಾವಣಾ ಸುಧಾರಣೆಗೆ ಸಂಬಂಧಪಟ್ಟ ಸಾಂವಿಧಾನಿಕ ತಿದ್ದುಪಡಿ ಮಸೂದೆಯ ಪರಿಶೀಲನೆ ನಡೆಸುತ್ತಿರುವ ಸಂಸತ್ತಿನ ಜಂಟಿ ಸಂಸದೀಯ ಸಮಿತಿಯು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಮಹತ್ವದ ಸಮಾಲೋಚನಾ ಸಭೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ನಿರಂತರ ಚುನಾವಣೆಗಳಿಂದ ಅಭಿವೃದ್ಧಿಗೆ ತೊಡಕು: ದೇಶದಲ್ಲಿ ನಿರಂತರವಾಗಿ ವಿವಿಧ ಚುನಾವಣೆಗಳು ನಡೆಯುತ್ತಿರುವುದರಿಂದ ಸರ್ಕಾರಗಳು, ಆಡಳಿತ ಯಂತ್ರ ಮತ್ತು ಅಪಾರ ಸಾರ್ವಜನಿಕ ಸಂಪನ್ಮೂಲಗಳು ಸದಾ ಚುನಾವಣಾ ಪ್ರಕ್ರಿಯೆಯಲ್ಲೇ ಮುಳುಗಿರಬೇಕಾಗುತ್ತದೆ. ಇದರಿಂದಾಗಿ ಅಭಿವೃದ್ಧಿ ಕಾಮಗಾರಿಗಳು ಮತ್ತು ಜನಪರ ಆಡಳಿತಕ್ಕೆ ದೊಡ್ಡ ಮಟ್ಟದ ಅಡಚಣೆ ಉಂಟಾಗುತ್ತಿದೆ.
ಸಾರ್ವಜನಿಕ ಹಣದ ಉಳಿತಾಯ ಮತ್ತು ಕಾರ್ಯಕ್ಷಮತೆ: ದೇಶಾದ್ಯಂತ ಏಕಕಾಲದಲ್ಲಿ ಚುನಾವಣೆಗಳು ನಡೆದರೆ ಸಾರ್ವಜನಿಕ ಹಣದ ಅನಗತ್ಯ ವೆಚ್ಚಕ್ಕೆ ಬ್ರೇಕ್ ಬೀಳಲಿದೆ. ಆಡಳಿತದ ಕಾರ್ಯಕ್ಷಮತೆ ಹೆಚ್ಚಲಿದ್ದು, ಸರ್ಕಾರಗಳು ಸಂಪೂರ್ಣವಾಗಿ ಅಭಿವೃದ್ಧಿ ಮತ್ತು ಜನಸೇವೆಯತ್ತ ಗಮನಹರಿಸಲು ಸಾಧ್ಯವಾಗುತ್ತದೆ.
ಆರ್ಥಿಕ ಶಿಸ್ತು ಮತ್ತು ರಾಜಕೀಯ ಸ್ಥಿರತೆ: ಭಾರತವು ಜಾಗತಿಕ ಆರ್ಥಿಕ ಶಕ್ತಿಯಾಗಿ ಮುನ್ನಡೆಯುತ್ತಿರುವ ಈ ಸಂದರ್ಭದಲ್ಲಿ ಆಡಳಿತಕ್ಕೆ ವೇಗ ಮತ್ತು ಸ್ಥಿರತೆ ನೀಡುವ ಇಂತಹ ಸುಧಾರಣೆಗಳು ಇಂದಿನ ಅಗತ್ಯವಾಗಿದೆ. ಈ ಪರಿಕಲ್ಪನೆಯು ದೇಶದಲ್ಲಿ ರಾಜಕೀಯ ಸ್ಥಿರತೆ, ಆರ್ಥಿಕ ಶಿಸ್ತು ಮತ್ತು ವೇಗವಾದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿದೆ ಎಂಬ ಬಲವಾದ ನಂಬಿಕೆಯನ್ನು ಬಿಜೆಪಿ ಹೊಂದಿದೆ.
ಇದೇ ಸಂದರ್ಭದಲ್ಲಿ, ಕರ್ನಾಟಕಕ್ಕೆ ಭೇಟಿ ನೀಡಿ ಎಲ್ಲಾ ಪಾಲುದಾರರ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಪ್ರಜಾಸತ್ತಾತ್ಮಕವಾಗಿ, ಸಮಗ್ರವಾಗಿ ಆಲಿಸಿದ ಸಂಸತ್ತಿನ ಜಂಟಿ ಸಮಿತಿಗೆ ಆರ್. ಅಶೋಕ್ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.



