ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಆನ್‌ಲೈನ್ ಗೇಮ್‌ನ ಸೆಳೆತ ಹಾಗೂ ಹಣಕ್ಕಾಗಿ ಸ್ನೇಹಿತರು ನೀಡಿದ ಹಿಂಸೆ ಮತ್ತು ಬೆದರಿಕೆಯಿಂದ ಮನನೊಂದು 8ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಪಾಂಡೊಮಟ್ಟಿ ಗ್ರಾಮದಲ್ಲಿ ನಡೆದಿದೆ.
ಪಾಂಡೊಮಟ್ಟಿ ಗ್ರಾಮದ ಮೃತ ಮನೋಜ್ ಟಿ.ಆರ್. (13) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈ ಘಟನೆಗೆ ಸಂಬಂಧಿಸಿದಂತೆ ಗ್ರಾಮದ ನಾಲ್ವರು ಅಪ್ರಾಪ್ತ ಬಾಲಕರ ವಿರುದ್ಧ ಮೃತ ಮನೋಜನ ಪೋಷಕರು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆಯ ಹಿನ್ನೆಲೆ: ಗ್ರಾಮದ ನಾಲ್ವರು ಅಪ್ರಾಪ್ತ ಬಾಲಕರು ಸೇರಿ ಮನೋಜ್‌ಗೆ ಫ್ರೀ-ಫೈರ್ ಆನ್‌ಲೈನ್ ಗೇಮ್‌ನ ಚಟ ಹಚ್ಚಿದ್ದರು. ಈ ಗೇಮ್‌ನಲ್ಲಿ ಹಣ ಹೂಡಿಕೆ ಮಾಡುವಂತೆ ಬಾಲಕರು ನಿರಂತರವಾಗಿ ಒತ್ತಾಯಿಸಿದ್ದರು. ಸ್ನೇಹಿತರ ಒತ್ತಡಕ್ಕೆ ಮಣಿದು ಮನೋಜ್, ಮನೆಯಿಂದ ಹಂತ ಹಂತವಾಗಿ ಸುಮಾರು 4 ಲಕ್ಷ ರೂ.ಗಳನ್ನು ತೆಗೆದುಕೊಂಡು ಹೋಗಿ ಅವರಿಗೆ ನೀಡಿದ್ದನು.
ಬಳಿಕ ಹಣ ತರುವಂತೆ ಸ್ನೇಹಿತರು ಮತ್ತಷ್ಟು ಒತ್ತಡ ಹೇರಿದ್ದಲ್ಲದೆ, ಹಣ ತರದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ, ಮನೋಜ್ ಮೇಲೆ ಹಲ್ಲೆ ಕೂಡ ನಡೆಸಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ. ತಮ್ಮ ಮಗನಿಗೆ ಹಣಕ್ಕಾಗಿ ಹಿಂಸೆ ನೀಡಿರುವ ಬಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೋಷಕರು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಪೊಲೀಸರ ಸ್ಪಷ್ಟನೆ: ಘಟನೆ ಕುರಿತು ಚನ್ನಗಿರಿ ಠಾಣೆಯ ಪಿಐ ರವೀಶ್ ಮಾಹಿತಿ ನೀಡಿ, "ಅಪ್ರಾಪ್ತ ಬಾಲಕರು ಫ್ರೀ ಫೈರ್ ಗೇಮ್ ಆಡುವ ಮೂಲಕ ಈ ಕೃತ್ಯ ಎಸಗಿದ್ದಾರೆ. ಮನೆಯಿಂದ ಹಣ ತೆಗೆದುಕೊಂಡು ಹೋಗಿರುವ ವಿಷಯ ತಿಳಿದು ಪೋಷಕರು ಬೈದಿರಬಹುದು ಅಥವಾ ಹೊಡೆದಿರಬಹುದು. ಯಾರೋ ಹಣ ತರಲು ಒತ್ತಾಯಿಸಿದ್ದಾರೆ ಎಂದು ಮನೋಜನ ಪೋಷಕರು ಠಾಣೆಗೆ ಬಂದಿದ್ದಾಗ, ಆ ಬಾಲಕರನ್ನು ಕರೆಸಿ ಹಣ ಕೊಡಿಸುವುದಾಗಿ ನಾವು ತಿಳಿಹೇಳಿ ಕಳಿಸಿದ್ದೆವು. ಆದರೆ, ಈ ನಡುವೆ ಬಾಲಕ ಮನೋಜ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಗೆ ಹೋಗುವಾಗ ಪೋಷಕರು ಬೈದಿರುವ ಸಾಧ್ಯತೆಯೂ ಇದೆ. ಆತ್ಮಹತ್ಯೆಗೆ ನಿಖರ ಕಾರಣ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ. ಸದ್ಯ ಮೃತನ ಪೋಷಕರ ದೂರಿನ ಮೇರೆಗೆ ನಾಲ್ವರು ಅಪ್ರಾಪ್ತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.
ಗ್ರಾಮಸ್ಥರ ಕಳಕಳಿ: ಈ ಘಟನೆ ಕುರಿತು ಗ್ರಾಮಸ್ಥ ರವಿ ಮಾತನಾಡಿ, "ಗ್ರಾಮದಲ್ಲಿ ಅತ್ಯಂತ ದುರದೃಷ್ಟಕರ ಘಟನೆ ನಡೆದಿದೆ. ಆನ್‌ಲೈನ್ ಗೇಮ್ ಗೀಳಿನಿಂದಾಗಿ ಬಾಲಕನ ಜೀವ ಕಳೆದುಹೋಗಿದೆ. ಪೋಷಕರು ಮಕ್ಕಳ ಮೇಲೆ ನಿರಂತರ ಕಣ್ಣಿಡಬೇಕು ಮತ್ತು ಅವರು ಯಾರೊಂದಿಗೆ ಒಡನಾಟ ಹೊಂದಿದ್ದಾರೆ ಎಂಬುದನ್ನು ಗಮನಿಸಬೇಕು. ಇಂತಹ ಅಪಾಯಕಾರಿ ಆನ್‌ಲೈನ್ ಗೇಮ್‌ಗಳ ವಿರುದ್ಧ ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಮನವಿ ಮಾಡಿದ್ದಾರೆ.




