ಚಂದ್ರವಳ್ಳಿ ನ್ಯೂಸ್, ಮೈಸೂರು:
ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಅತ್ಯಂತ ಭ್ರಷ್ಟರಾಗಿದ್ದು, ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಡಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯ ಹಾಗೂ ಮಾರಣಹೋಮಗಳು ನಡೆಯುತ್ತಿದ್ದರೂ ಗೃಹ ಸಚಿವರು ಈ ಬಗ್ಗೆ ಒಂದೇ ಒಂದು ಹೇಳಿಕೆ ನೀಡಿಲ್ಲ. ಕೇವಲ ಆರ್ ಎಸ್ಎಸ್ ಬಗ್ಗೆ ಮಾತನಾಡುವುದೇ ಇವರ ಕಾಯಕವಾಗಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ದೂರಿದ್ದಾರೆ.
ದಲಿತರ ಕಡೆ ನಿರ್ಲಕ್ಷ್ಯ: ಕಲ್ಯಾಣ ಕರ್ನಾಟಕದಲ್ಲಿ ದಲಿತರ ಮಾರಣಹೋಮ ನಡೆಯುತ್ತಿದ್ದರೂ ಗೃಹ ಸಚಿವರಿಗೆ ಅದರ ಬಗ್ಗೆ ಕಾಳಜಿ ಇಲ್ಲ. ಕೇವಲ ದಲಿತರ ಹೆಸರನ್ನು ಬಳಸಿ ರಾಜಕೀಯ ಆಸ್ತಿ ಮಾಡಿಕೊಂಡಿದ್ದಾರೆ. ಸ್ವತಃ ಗೃಹ ಸಚಿವರ ಭಾಗದಲ್ಲೇ 13 ಅಟ್ರಾಸಿಟಿ ಕೇಸ್ಗಳು ದಾಖಲಾಗಿವೆ.
ಆರ್ ಎಸ್ಎಸ್ ಟೀಕೆಗಳಿಗೆ ತಿರುಗೇಟು: ಗೃಹ ಸಚಿವರಿಗೆ ಬರೀ ಆರ್.ಎಸ್.ಎಸ್. ಚಿಂತೆಯಾಗಿದೆ. ಆರ್.ಎಸ್.ಎಸ್. ಅನ್ನು ಮುಗಿಸಲು ಪ್ರಿಯಾಂಕ್ ಖರ್ಗೆ ಅವರ ಅಪ್ಪನಿಂದಲೂ ಆಗುವುದಿಲ್ಲ. ಸ್ವತಃ ನೀವೇ ಆರ್.ಎಸ್.ಎಸ್. ಮೇಲೆ ಯಾವುದೇ ಕ್ರಿಮಿನಲ್ ಕೇಸ್ ಇಲ್ಲ ಎಂದು ಹೇಳಿದ್ದೀರಿ ಎಂದರು.
ಭ್ರಷ್ಟಾಚಾರ ಆರೋಪ: ಸೋಲಿನ ಭೀತಿಯಿಂದ ಕಾಂಗ್ರೆಸ್ ಪಕ್ಷ ಲೂಟಿ ಮಾಡಲು ಮುಂದಾಗಿದೆ. ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, SCSP-TSP ಅನುದಾನದ ಹಣವನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆ: ಮತ ಕಳ್ಳತನದ ಬಗ್ಗೆ ಮಾತನಾಡಿರುವ ಅವರು, "ಮತ ಕಳ್ಳತನ ಹಿಂದೆ ಆಗಿಲ್ಲ, ಮುಂದೆಯೂ ಆಗುವುದಿಲ್ಲ. ಎಸ್ಐಆರ್ ಎಂಬುದು ಬಿಜೆಪಿ ಅಥವಾ ಕಾಂಗ್ರೆಸ್‌ಗೆ ಸಂಬಂಧಿಸಿದ್ದಲ್ಲ, ಅದು ಚುನಾವಣಾ ಆಯೋಗದ ಕೆಲಸ. ಕಾಂಗ್ರೆಸ್ ಗೆಲ್ಲಲು ಸಾಧ್ಯವಾಗದ ಕಡೆಗಳಲ್ಲಿ ವೋಟ್ ಚೋರಿ ಎಂದು ಸುಳ್ಳು ಆರೋಪ ಮಾಡುತ್ತದೆ" ಎಂದು ತಿರುಗೇಟು ನೀಡಿದರು.




