ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಕೆ.ಚೂಡಹಳ್ಳಿ, ಸೋಮನಹಳ್ಳಿ ಸೇರಿದಂತೆ ಕನಕಪುರ ಸುತ್ತಮುತ್ತಲಿನ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವನೆಗೆ ಸ್ಥಳೀಯ ರೈತರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಆತಂಕಗೊಂಡಿರುವ ಗ್ರಾಮಸ್ಥರು ಮತ್ತು ರೈತರು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ವಿಜಯೇಂದ್ರ ಅವರು, ಅಭಿವೃದ್ಧಿಯ ಹೆಸರಿನಲ್ಲಿ ಸಾವಿರಾರು ರೈತ ಕುಟುಂಬಗಳ ಜೀವನೋಪಾಯ, ಕೃಷಿ ಭೂಮಿ ಹಾಗೂ ಪರಿಸರಕ್ಕೆ ಧಕ್ಕೆ ತರುವುದನ್ನು ಎಂದಿಗೂ ಒಪ್ಪಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
"ನಾವು ಅಭಿವೃದ್ಧಿಗೆ ವಿರುದ್ಧವಲ್ಲ, ಆದರೆ ಅಭಿವೃದ್ಧಿಯು ಜನಪರವಾಗಿರಬೇಕು ಮತ್ತು ರೈತರ ಹಿತವನ್ನು ರಕ್ಷಿಸುವಂತಿರಬೇಕು. ರೈತರ ಈ ನ್ಯಾಯಯುತ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ರಾಜ್ಯ ಸರ್ಕಾರ ಈ ವಿಷಯದಲ್ಲಿ ಯಾವುದೇ ದುಡುಕು ನಿರ್ಧಾರ ಕೈಗೊಳ್ಳದೆ, ಕೂಡಲೇ ಈ ಪ್ರಸ್ತಾವನೆಯನ್ನು ಕೈಬಿಡಬೇಕು ಹಾಗೂ ಪರ್ಯಾಯ ಸ್ಥಳವನ್ನು ಗುರುತಿಸಿ ರೈತರ ಆತಂಕವನ್ನು ದೂರಮಾಡಬೇಕು," ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.



