ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಶಿಕ್ಷಕರಾಗಿ ಸೇವೆ ಸಲ್ಲಿಸಲು ಪುಣ್ಯ ಮಾಡಿರಬೇಕು, ಪ್ರತಿ ಮಗುವಿನ ಭವಿಷ್ಯ ನಿರ್ಧಾರವಾಗುವುದು ಮಗುವಿನ ಪ್ರಾಥಮಿಕ ಹಂತದಲ್ಲಿ ಉತ್ತಮ ಭವಿಷ್ಯ ರೂಪಿಸಲು ನಿರಂತರ ಶ್ರಮಿಸುತ್ತಿರುವ ಎಲ್ಲಾ ಶಿಕ್ಷಕರಿಗೂ ಇಂದಿನ ಸಮಾರಂಭವನ್ನು ಅರ್ಪಿಸುತ್ತೇನೆ ಎಂದು ಮುಖ್ಯ ಶಿಕ್ಷಕರಾದ ಎಸ್ ಚಿಕ್ಕ ಗಂಗಯ್ಯ ತಿಳಿಸಿದರು.
ನಗರದ ರಾಜೀವ್ ಗಾಂಧಿ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಡಬಲ್ ಪ್ರಮೋಷನ್ ಪಡೆದು ಕೆಪಿಎಸ್ ಬಸವನಹಳ್ಳಿ ನೆಲಮಂಗಲ ತಾಲೂಕು ಇಲ್ಲಿಗೆ ವರ್ಗಾವಣೆಗೊಂಡ ಎಸ್ ಚಿಕ್ಕ ಗಂಗಯ್ಯ ರವರಿಗೆ ಶಾಲಾ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು ಹಾಗೂ ಎಸ್ ಡಿ ಎಂ ಸಿ ಸಮಿತಿ ವತಿಯಿಂದ ಆಯೋಜನೆ ಮಾಡಲಾಗಿದ್ದ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು ತಾಯಿ ತಂದೆಯನ್ನು ಬಿಟ್ಟರೆ ಮಕ್ಕಳನ್ನು ತಿದ್ದಿ ಬುದ್ದಿ ಹೇಳುವ ಮಹತ್ಕಾರ್ಯವು ಶಿಕ್ಷಕರಿಂದ ಮಾತ್ರ ಸಾಧ್ಯ, ಇಂತಹ ಪವಿತ್ರ ಸ್ಥಾನವನ್ನು ಅಲಂಕರಿಸಿ ಪ್ರತಿನಿತ್ಯ ನೂರಾರು ಮಕ್ಕಳಿಗೆ ಪಾಠ ಪ್ರವಚನ ಮಾಡುವ ಮೂಲಕ ಹೇಗೆ ಸಲ್ಲಿಸುತ್ತಿರುವ ಎಲ್ಲಾ ಶಿಕ್ಷಕರಿಗೂ ಈ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ನಡವಳಿಕೆ ಉತ್ತಮವಾಗಿದ್ದರೆ ಮಕ್ಕಳು ಹಾಗೂ ಪೋಷಕರಿಂದ ಗೌರವ ಲಭಿಸುತ್ತದೆ ಎಂದರು.
ಏನು ಅರಿಯದ ಪುಟ್ಟ ಮಕ್ಕಳಿಗೆ ಶಿಕ್ಷಕರೇ ಮಾರ್ಗದರ್ಶಕರು ನಮ್ಮ ಉತ್ತಮ ನಡವಳಿಕೆಗಳು ಮಕ್ಕಳಿಗೆ ಮಾದರಿಯಾಗಬೇಕು ಈ ನಿಟ್ಟಿನಲ್ಲಿ ಶಿಕ್ಷಕರು ಶ್ರಮಿಸಬೇಕು ಎಂದರು.
ರಾಜೀವ್ ಗಾಂಧಿ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿರುವುದು ಸಂತೋಷ ತಂದಿದೆ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ,ಪೋಷಕರ ಸಹಭಾಗಿತ್ವ, ಎಸ್ ಡಿ ಎಂ ಸಿ ಸಮಿತಿಯ ಸಲಹೆಸೂಚನೆಗಳೊಂದಿಗೆ ನನ್ನ ಶಕ್ತಿ ಮೀರಿ ಉತ್ತಮ ಕಲಿಕಾ ವಾತಾವರಣ ನಿರ್ಮಿಸಲು ಸಹ ಶಿಕ್ಷಕರು ವೃಂದದೊಂದಿಗೆ ಶ್ರಮಿಸಿದ್ದೇನೆ. ಮಕ್ಕಳ ಮುಂದಿನ ಭವಿಷ್ಯ ಉತ್ತಮವಾಗಿರಲಿ ಪೋಷಕರ ಹಾಗೂ ಸ್ಥಳೀಯರ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ ಎಂದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯನಿ ಹೆಚ್ ರಂಗಮ್ಮ,ಸಹ ಶಿಕ್ಷಕರು, ಶಾಲೆಯ ನಿಕಟ ಪೂರ್ವ ಶಿಕ್ಷಕರಾದ ರಾಮಚಂದ್ರ ಹಾಗೂ ಎಸ್ ಡಿ ಎಂ ಸಿ ಸದಸ್ಯರು ಉಪಸ್ಥಿತರಿದ್ದರು.




