ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
೧೯೯೮ರ ಅಪರೂಪದ ನೆನಪು ಮೆಲಕು ಹಾಕಿದ ಸ್ಪೀಕರ್ ಟಿ.ಬಿ ಜಯಚಂದ್ರ: 'ರಾಣಿ ಎಲಿಜಬೆತ್ ಹೊಗಳಿದ್ದ ನಮ್ಮ ವಿಧಾನಸೌಧವೇ ನನಗೆ ಸ್ಪೂರ್ತಿ'...
ಸಂಸದೀಯ ವ್ಯವಸ್ಥೆಯ ಆಳವಾದ ಜ್ಞಾನ, ಅಪಾರ ಶಾಸನೀಯ ಅನುಭವ ಹಾಗೂ ಹಿರಿಯತನದ ಆಧಾರದ ಮೇಲೆ ನೂತನ 'ಪ್ರೊ-ಟೆಂ ಸ್ಪೀಕರ್' (ತಾತ್ಕಾಲಿಕ ಸಭಾಧ್ಯಕ್ಷ) ಆಗಿ ಜವಾಬ್ದಾರಿ ವಹಿಸಿಕೊಂಡಿರುವ ಹಿರಿಯ ನಾಯಕರಾದ ವಿಧಾನಸಭಾಧ್ಯಕ್ಷರಾದ ಟಿ.ಬಿ ಜಯಚಂದ್ರ ಅವರು ತಮ್ಮ ಸಾರ್ವಜನಿಕ ಜೀವನದ ಸುವರ್ಣ ಅಧ್ಯಾಯವೊಂದನ್ನು ಹಂಚಿಕೊಂಡಿದ್ದಾರೆ.
೧೯೯೮ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಬ್ರಿಟಿಷ್ ಸಂಸದೀಯ ಸಮ್ಮೇಳನದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿದ್ದ ಕ್ಷಣಗಳನ್ನು ಸ್ಮರಿಸಿರುವ ಅವರು, ಬ್ರಿಟಿಷ್ ಸಂಸತ್ತಿನ 'ಹೌಸ್ ಆಫ್ ಲಾರ್ಡ್ಸ್' ಮತ್ತು 'ಹೌಸ್ ಆಫ್ ಕಾಮನ್ಸ್' ಕಲಾಪಗಳನ್ನು ಹತ್ತಿರದಿಂದ ವೀಕ್ಷಿಸಿದ ಅನುಭವವನ್ನು ಉಲ್ಲೇಖಿಸಿದ್ದಾರೆ.
ರಾಣಿ ಎರಡನೇ ಎಲಿಜಬೆತ್ ಪ್ರಶಂಸೆ: ಈ ವಿಶೇಷ ಪ್ರವಾಸದ ಸಂದರ್ಭದಲ್ಲಿ ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ಆಗಿನ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರನ್ನು ಭೇಟಿಯಾಗಿದ್ದ ಕ್ಷಣವನ್ನು ಹೆಮ್ಮೆಯಿಂದ ನೆನೆದಿರುವ ಜಯಚಂದ್ರ ಅವರು, "ನಾನು ಬೆಂಗಳೂರಿನಿಂದ ಬಂದಿದ್ದೇನೆ ಎಂದು ಪರಿಚಯಿಸಿಕೊಂಡಾಗ, ರಾಣಿಯವರು 'ನಿಮ್ಮ ಶಾಸನಸಭೆ (ವಿಧಾನಸೌಧ) ಅತ್ಯಂತ ಸುಂದರವಾಗಿದೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆ ಮಾತುಗಳು ಇಂದಿಗೂ ನನ್ನ ಮನಸ್ಸಿನಲ್ಲಿ ಹಸಿರಾಗಿವೆ," ಎಂದಿದ್ದಾರೆ.
ಅನುಭವವೇ ಪ್ರಮುಖ ಬಲ: ಬ್ರಿಟನ್ ಸಂಸದೀಯ ವ್ಯವಸ್ಥೆಯ ನೇರ ಅನುಭವ ಮತ್ತು ದೀರ್ಘಕಾಲದ ರಾಜಕೀಯ ಜೀವನದ ಜ್ಞಾನವೇ ತಮ್ಮನ್ನು ಇಂದು 'ಪ್ರೊ-ಟೆಂ ಸ್ಪೀಕರ್'ನಂತಹ ಗೌರವಯುತ ಹುದ್ದೆಗೆ ತಂದಿಟ್ಟಿದೆ ಎಂದು ಸಭಾಧ್ಯಕ್ಷರಾದ ಟಿ.ಬಿ ಜಯಚಂದ್ರ ಅವರು ತಿಳಿಸಿದ್ದಾರೆ.
ದಶಕಗಳ ಕಾಲದ ಈ ಶಾಸನೀಯ ಪರಿಣತಿ ಮತ್ತು ಜ್ಞಾನವು, ಪ್ರಸ್ತುತ ನೀಡಿರುವ ತಾತ್ಕಾಲಿಕ ಸಭಾಧ್ಯಕ್ಷರ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಕಾರಿಯಾಗಲಿದೆ ಎಂಬ ವಿಶ್ವಾಸವನ್ನು ಅವರ ಕ್ಷೇತ್ರದ ಜನತೆ ಹಾಗೂ ಬೆಂಬಲಿಗರು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಜಯಚಂದ್ರ ಅವರು ತಿಳಿಸಿದ್ದಾರೆ.




