ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಹಾಗು ಆ.10ರಂದು ದೆಹಲಿಯಲ್ಲಿ ನಡೆಯ ಬೇಕಿದ್ದ ಪ್ರತಿಭಟನೆಯನ್ನು ತಡೆದಿರುವ ಕ್ರಮ ಖಂಡಿಸಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಸಿಪಿಐಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಸಿಪಿಐ (ಎಂ) ಜಿಲ್ಲಾ ಮುಖಂಡ ಆರ್. ಚಂದ್ರ ತೇಜಸ್ವಿ ಮಾತನಾಡಿ ಎಸ್ ಐ ಆರ್ ನೆಪದಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಸಂವಿಧಾನ ಬದ್ಧವಾದ ಅಧಿಕಾರವನ್ನು ಮೀರಿ ಸರ್ವಾಧಿಕಾರಿ ರೀತಿ ನಿಯಮಗಳನ್ನು ರೂಪಿಸಿದ್ದಾರೆ. ಇದರಿಂದ ಹಲವು ನಾಗರಿಕರು ತಮ್ಮ ಮತದಾನದ ಹಕ್ಕು ಕಳೆದುಕೊಂಡಿದ್ದು, ಅತಂತ್ರ ಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ
ಎಸ್.ಐ.ಆರ್ ಹೇಗೆ ನಡೆಯುತ್ತಿದೆ ಎನ್ನುವುದನ್ನು ನಾಗರಿಕರು, ರಾಜಕೀಯ ಪಕ್ಷಗಳ ಮುಖಂಡರಷ್ಟೇ ಅಲ್ಲದೆ ಕೇಂದ್ರ ಚುನಾವಣಾ ಆಯೋಗದಲ್ಲಿನ ಇಬ್ಬರು ಆಯುಕ್ತರೆ ಬರೆದಿರುವ ಪತ್ರಗಳಿಂದ ಈಗ ಬಹಿರಂಗವಾಗಿದೆ. ಹೀಗಿದ್ದೂ ಸಹ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡುವುದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ ಎ ಸರ್ಕಾರವೇ ತಡೆಯುತ್ತಿರುವುದು ನಾಚಿಕೆ ಗೇಡಿನ ಸಂಗತಿ. ಪ್ರಧಾನ ಮಂತ್ರಿಗಳ ಈ ನಡೆಯನ್ನು ಗಮನಿಸಿದರೆ ಎಸ್.ಐ.ಆರ್ ನಡೆಯುತ್ತಿರುವುದೇ ಪ್ರಧಾನ ಮಂತ್ರಿ ನರೇಂದ್ರಮೋದಿ, ಗೃಹ ಸಚಿವ ಅಮೀತ್ ಶಾ ನಿರ್ದೇಶನದಂತೆ ಎನ್ನುವುದು ಈಗ ಎಲ್ಲರಿಗೂ ತಿಳಿದಿದೆ. ಹಾಗಾಗಿ ಜ್ಞಾನೇಶ್ ಕುಮಾರ್ ಅವರಷ್ಟೇ ಅಲ್ಲದೆ ಇವರಿಗೆ ನಿರ್ದೇಶನ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ,ಗೃಹ ಸಚಿವ ಅಮೀತ್ ಶಾ ಅವರು ಸಹ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಸಿಪಿಐಎಂ ಜಿಲ್ಲಾ ಸಂಘಟನಾ ಸಮಿತಿ ಸದಸ್ಯೆ ಪ್ರಭಾ ಬೆಳವಂಗಲ ಮಾತನಾಡಿ, ದೇಶದಲ್ಲಿ ಈಗ ಇರವುದು ಸರ್ವಾಧಿಕಾರಿ ಆಡಳಿತ. ದೆಹಲಿಯಲ್ಲಿ ಸಂವಿಧಾನ ಬದ್ದವಾಗಿ ನಾಗರಿಕರಿಗೆ ನೀಡಲಾಗಿರುವ ಹಕ್ಕಿನ ಅನ್ವಯದಂತೆ ಸರ್ಕಾರ ನಿಗಧಿಪಡಿಸಿರುವ ಸ್ಥಳದಲ್ಲೂ ಪ್ರತಿಭಟನೆ ನಡೆಸಲು ಅವಕಾಶಇಲ್ಲದಂತೆ ಆಗಿದೆ. ಇದರಿಂದ ನಾಗರಿಕರು ಸರ್ಕಾರ ಹೇಳಿದ್ದನ್ನು ಬಲವವಾಗಿ ಒಪ್ಪಿಕೊಳ್ಳುವಂತೆ ಮಾಡಲಾಗುತ್ತಿದೆ. ವಿಶ್ವದಲ್ಲೇ ಧರ್ಮ,ಜಾತಿಲಿಂಗ ತಾರತಮ್ಯ ಇಲ್ಲದೇ ಎಲ್ಲರಿಗೂ ನೀಡಲಾಗಿದ್ದ ಮತದಾನದ ಹಕ್ಕನ್ನು ಸುಳ್ಳು ನೆಪಗಳನ್ನು ಹೇಳುವ ಮೂಲಕ ಅಧಿಕಾರದ ಆಸೆಗಾಗಿ ಕಸಿದುಕೊಳ್ಳಲಾಗುತ್ತಿದೆ ಎಂದರು.
ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಈ ದೇಶದ ಬಡವರು, ಅಲ್ಪಸಂಖ್ಯಾತರು, ಬುಡಕಟ್ಟು ಜನರ ಮತದಾನದ ಹಕ್ಕನ್ನು ಅಸ್ಥಿರ ಗೊಳಿಸಲು ಈ ಯತ್ನಗಳು ನೆಡೆಯುತ್ತಿವೆ ಅದರ ವಿರುದ್ಧ ಎಲ್ಲಾ ಪ್ರಜ್ಞಾವಂತರು ಧ್ವನಿ ಎತ್ತದೇ ಇದ್ದರೆ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲು ಸಾಧ್ಯವೇ ಇಲ್ಲದಂತಾಗಲಿದೆ ಎಂದರು.
ಪ್ರತಿಭಟನೆಯಲ್ಲಿ ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ರುದ್ರಾರಾಧ್ಯ, ತಾಲೂಕು ಸಮಿತಿ ಮುಖಂಡ ಚೌಡಯ್ಯ, ಗೌಡಪ್ಪ, ಪತಿ, ಮಣಿಶರ್ಮ ಪ್ರಜಾವಿ ಮೋಚನ ಚಳವಳಿ ಮುಖಂಡ ಗೂಳ್ಯ ಹನುಮಣ್ಣ ಬೀದಿ ಬದಿ ವ್ಯಾಪಾರಿಗಳ ಸಂಘದ ನರೇಶ್ ಕುಮಾರ್, ಆಟೋ ಯೂನಿಯನ್ ಮುಖಂಡ ಸಾಧಿಕ್ ಇದ್ದರು.




