Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ನೂತನ ವರ್ಷಾರಂಭವನು ವಚನ ಗಾಯನದ ಮೂಲಕ ಸ್ವಾಗತಿಸಿದ ಪರಿ

 ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ
ಚೈತ್ರಮಾಸ ಆರಂಭಗೊಂಡು ನಿಸರ್ಗದ ಸಸ್ಯರಾಶಿ ಹಣ್ಣೆಲೆಯನ್ನುದುರಿಸಿ ಹೊಸ ಚಿಗುರನ್ನು ಪಡೆದು ಮರ ಗಿಡ ಬಳ್ಳಿಗಳು ಹೂಬಿಟ್ಟು ಪರಿಮಳವನ್ನು ಬೀರುತ್ತಿದ್ದು ಈ ಸಂದರ್ಭ ಭಾರತೀಯರಾದ ನಮಗೆ ನೂತನ ವರ್ಷಾರಂಭ. ಆ ನೂತನ ವರ್ಷಾರಂಭದ ಯುಗಾದಿ ಪಾಡ್ಯದ ದಿನದಂದು ಜಗತ್ತಿಗೆ ಪ್ರಥಮ ಮಾದರಿ ಎನ್ನುವ ಅನುಭವ ಮಂಟಪ ಸ್ಥಾಪಿಸಿದ ಕೀರ್ತಿ ೧೨ನೇ ಶತಮಾನದ ಬಸವಾದಿ ಶಿವಶರಣರಿಗೆ ಸಲ್ಲುತ್ತದೆ.


ಅಂದಿನ ಅನುಭವ ಮಂಟಪ ಶೂನ್ಯಪೀಠದ ಹಾಗೆಯೇ ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮೂಲಪುರುಷರೂ ಆದ ಅಲ್ಲಮಪ್ರಭುದೇವರ ಜಯಂತಿಯೂ ಬರುವುದರಿಂದ ಚಿತ್ರದುರ್ಗದ ಶ್ರೀ ಮುರುಘಾಮಠದಲ್ಲಿ ಮಾರ್ಚ್ ೧೭ ರಿಂದ ೨೦ರವರೆಗೆ ನಾಲ್ಕು ದಿನಗಳ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಶೇಷವಾಗಿ ಅಲ್ಲಮಪ್ರಭುದೇವರ ವ್ಯಕ್ತಿತ್ವ ಸಾಧನೆಯ ಕುರಿತಾಗಿ ರಾಜ್ಯಮಟ್ಟದ ಸ್ವರಚಿತ ಕವನ ವಾಚನವು ನಡೆದು ವಿಶೇಷ ಗಮನಸೆಳೆಯಿತು.

ಮುಖ್ಯವಾಗಿ ವಿಶೇಷ ಕಾರ್ಯಕ್ರಮ ಸಮಾರೋಪ ಸಮಾರಂಭವು ಶ್ರೀಮಠ ಮೂಲಕರ್ತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ತಾಣದ ಸನ್ನಿಧಾನದಲ್ಲಿ ಅಲ್ಲಮಪ್ರಭುಗಳ ವ್ಯಕ್ತಿತ್ವ ಸಾಧನೆಯ ಜತೆಗೆ ಬಸವಾದಿ ಶಿವಶರಣರ ತತ್ವಚಿಂತನೆಯ ಬಗೆಗೆ ಬೆಳಕು ಚೆಲ್ಲುವ ಸಮಾರಂಭ ಅದರೊಂದಿಗೆ ಅಲ್ಲಮಪ್ರಭುಗಳು ಸೇರಿದಂತೆ ನೂತನ ವರ್ಷದ ಯುಗಾದಿ ಬಗ್ಗೆ ಕವಿಗಳ ರಚನೆಯ ಕವನ ಸೇರಿದಂತೆ ಶೋತೃವರ್ಗಕ್ಕೆ ವಚನ ಗಾಯನ ಕೇಳಿಸುವ ರಸ ನಿಮಿಷಗಳಿಗೆ ಸಾಕ್ಷಿಯಾಯಿತು.

ಗೂಧೋಳಿಯ ಸಂದರ್ಭ. ಸೂರ್ಯ ಜಾರಿ ಚಂದ್ರ ಮೇಲೆ ಬರುವ ಹೊತ್ತಿಗೆ ಅಲ್ಲಲ್ಲಿನ ಗಿಡ ಮರಗಳಲ್ಲಿನ ಪುಷ್ಪ ಸುಗಂಧ ಬೀರಿ ಸುವಾಸನೆ ಮೂಗಿಗೆ ತಾಗಿಸುತ್ತಿದ್ದರೆ ಇಳಿ ವೇಳೆಗೆ ವಚನ ಸಂಗೀತದ ಅಲೆಯೂ ತೇಲಿ ಭಕ್ತಿ ಭಾವದಿಂದ ಆಲಿಸುತ್ತಿದ್ದ ಶೋತೃವರ್ಗದ ಮನಕೆ ಮುದ ನೀಡುತ್ತಿತ್ತು. ಈ ನಡುವೆ ಮಠದ ಆವರಣ ತಳಿರು ತೋರಣಗಳಿಂದ ಶೋಭಿಸುತ್ತಿದ್ದರೆ ಶ್ರೀಮಠದ ಕಾರ್ಯಕರ್ತರು ಬಂದ ಅಭಿಮಾನಿ ಭಕ್ತರುಗಳಿಗೆ ಪ್ರೀತಿಯಿಂದ ಸ್ವಾಗತಿಸಿ ಪಾನಕ ಹಾಗೂ ಕೋಸಂಬರಿ ಪ್ರಸಾದವನ್ನು ನೀಡಿ ಕಳಿಸುತ್ತಿದ್ದರು.



ಅದನ್ನು ಸವಿದವರು ಶ್ರೀಮಠದ ಮೂಲಕರ್ತೃವಿನ ದರ್ಶನ ಪಡೆದು ಮೇಲುಪ್ಪರಿಗೆಯಲ್ಲಿ ನಡೆಯುತ್ತಿದ್ದ ಸಂಗೀತ ಸುಧೆ ಕೇಳಲು ಧಾವಿಸುತ್ತಿದ್ದರು. ಕೇಳುತ್ತ ಕೇಳುತ್ತ ಕತ್ತಲಾವರಿಸುತ್ತಿದ್ದಂತೆ ಪಶ್ಚಿಮ ದಿಗಂತದೆಡೆಗೆ ಎಲ್ಲರ ಕಣ್ಣು ಮನ ನೆಟ್ಟು ತದೇಕ ಚಿತ್ತದಿಂದ ಚಂದ್ರದರ್ಶನ ಮಾಡಿದವರನ್ನು ಎಲ್ಲಿ ಎಲ್ಲಿ ಎಂದು ಕೇಳುತ್ತ ಅಗೋ ಅಲ್ಲಿ ಕೆಂಪು ಮೋಡದ ಮರ ಗಿಡದ ಕೆಳಗೆ ಹಾಗೆ ನೋಡ್ತಾ ಬನ್ನಿ ಎಂದು ಹೇಳುತ್ತಿದ್ದ ಪರಿ. ಚಂದ್ರ ದರ್ಶನ ಮಾಡಿದವರು ಅಲ್ಲಿದ್ದ ಶ್ರೀಗಳವರಿಗೆ ನಮಸ್ಕರಿಸಿ ಅವರಿಂದ ಬೇವು-ಬೆಲ್ಲದ ಪಾಕೆಟ್ ಅದರೊಂದಿಗೆ ಅಲ್ಲಮಪ್ರಭುಗಳವರ ಆಯ್ದ ವಚನಗಳ ಕಿರುಹೊತ್ತಿಗೆಯನ್ನು ಪಡೆದು ಕಂಡವರಿಗೆ ಶುಭಾಶಯ ಹೇಳುತ್ತ ಕಿರಿಯರು ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ದೃಶ್ಯ ಸಂಸ್ಕಾರದ ಪ್ರಭಾವಳಿಯನ್ನು ಅನಾವರಣಗೊಳಿಸಿದರೆ ಇದು ಹೀಗೆ ಸಾಗಲಿ ಎನ್ನುವ ಆಶಯವೂ ಅಡಗಿತ್ತು.

ಈ ನಡುವೆ ಜಮುರಾ ಕಲಾಲೋಕದ ಹಿರಿಯ ಕಲಾವಿದರೂ ಗಾನಯೋಗಿ ಸಂಗೀತ ಬಳಗದ ಅಧ್ಯಕ್ಷರಾದ ವಿದ್ವಾನ್ ತೋಟಪ್ಪ ಉತ್ತಂಗಿ ಅವರು ತಮ್ಮದೇ ರಾಗಸಂಯೋಜನೆಯ ಹತ್ತಾರು ವಚನ ತತ್ವಪದ ಹಾಗೂ ಕವನಗಳನ್ನು ಹಾಡಿದರು. ಆ ಗೀತೆಗಳ ರಚನೆ, ರಾಗ ಮತ್ತು ಹಾಡಿದವರ ಪಟ್ಟಿ ಈ ರೀತಿ ಇದೆ. ಮುಖ್ಯ ಕಲಾವಿದರು ತೋಟಪ್ಪ ಉತ್ತಂಗಿ ಅವರೊಂದಿಗೆ ತಬಲಾ ಸಾಥ್ ನೀಡಿದವರು ಕರಿಬಸಪ್ಪ. ಹಿನ್ನೆಲೆಯಲ್ಲಿ ಜ್ಞಾನಮೂರ್ತಿ ಟಿ.ಪಿ., ಬಸವರಾಜ ಕಟ್ಟಿ, ವರದಾ ಶಂಕರ, ಹೆಚ್.ಕೆ. ಮಮತ, ಜ್ಯೋತಿ ಗಿರೀಶ್, ಸುಮ ರಾಜಶೇಖರ್, ರೇಖಾ ವಿಜಯಕುಮಾರ್, ಲತಾ ಕಟ್ಟಿ, ಮಂಗಳಾ ವರದಾಶಂಕರ್ ಇವರಿಗೆ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಸಂಯೋಜಿಸಿದವರು ಕೆ.ಪಿ. ರಾಜು ಹಾಗೂ ನವೀನ್ ಅವರುಗಳು.

ಅಲ್ಲಮಪ್ರಭುಗಳ ವಚನಗಳು ಕಳ್ಳಗಂಜಿ ಕಾಡ ಹೊಕ್ಕರೆ-ಅಹೀರ ಭೈರವ ರಾಗ, ಹೊನ್ನು ಮಾಯೆಯೆಂಬರು-ಕಲಾವತಿ ಖಮಾಜ ಮಿಶ್ರ, ಅದ್ವೈತವ ನುಡಿದು-ದಾನಿ, ಕಲ್ಯಾಣವೆಂಬ ಪ್ರಣತೆಯಲ್ಲಿ-ಮದುಮಾದ ಸಾರಂಗ, ಬಯಲು ಬಯಲನೆ ಬಿತ್ತಿ-ಶೋಭಾವರಿ, ಸಾರೆ ಚೆಲ್ಯಾದೆ ಮುಕುತಿ-ಭೈರವಿ, ಅಕ್ಕಮಹಾದೇವಿಯವರ ವಚನ ತೆರಣಿಯ ಹುಳು ತನ್ನ- ಗೋಪಿಕಾ ವಸಂತ, ಕಡಕೋಳ ಮಡಿವಾಳಪ್ಪರ ಲಿಂಗಪೂಜೆಯ ಮಾಡಲಿಲ್ಲ-ಮದುಮಾದ ಸಾರಂಗ ಹಾಗೂ ಕವಿ ಮೊಳಕಾಲ್ಮೂರು ಶ್ರೀನಿವಾಸಮೂರ್ತಿ ಅವರ ರಚನೆಯ ಮಾವು ಚಿಗಯುತಲೆ ಹಸಿರು ಮೂಡುತಲೆ ಕವನಕ್ಕೆ ದುರ್ಗಾ ಮಿಶ್ರರಾಗ ಸಂಯೋಜನೆಯ ಮಾಧುರ್ಯ ತುಂಬಿದ ಗಾಯನ ಜೀವನವು ಬೇವು ಬೆಲ್ಲದ ಮಿಶ್ರಣ ಅದನ್ನು ಸಮನಾಗಿ ಸ್ವೀಕರಿಸಬೇಕೆಂಬ ಕವಿವರ್ಯರ ಆಶಯವನ್ನು ಗಾಯನದ ಮೂಲಕ ಸಾದರಪಡಿಸಿ ಕೇಳುಗರ ಮನಕ್ಕೆ ಇಂಪನ್ನು ತಂಪನ್ನು ನೀಡಿತು.

ಶ್ರೀ ಬೃಹನ್ಮಠದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ ಅವರ ಮಾರ್ಗದರ್ಶನ ಮತ್ತು ಇನ್ನುಳಿದ ಸದಸ್ಯರ ನೇತತ್ವದಲ್ಲಿ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ವಿವಿಧ ಮಠಾಧೀಶರು, ಅಭಿಮಾನಿಗಳು, ಭಕ್ತರು, ಸಾರ್ವಜನಿಕರು, ಕವಿ, ಸಾಹಿತಿಗಳು, ವಿವಿಧ ಸಮಾಜ, ಸಂಘ-ಸಂಸ್ಥೆಗಳವರು ಭಾಗವಹಿಸಿ ಸಮಾರಂಭ ಯಶಸ್ವಿಗೊಳಿಸಿದರು.
ಲೇಖನ-ಎಂ.ಜೆ ರುದ್ರಮೂರ್ತಿ, ಚಿತ್ರದುರ್ಗ.


 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಖ್ಯಮಂತ್ರಿಯವರ ತಾಂತ್ರಿಕ ಸಲಹೆಗಾರರಾಗಿ ನಿವೃತ್ತ ಕಾರ್ಯದರ್ಶಿ ಡಾ. ಕೆ. ಜೈಪ್ರಕಾಶ್ ನೇಮಕಜೆಎನ್‌ಯು ಪ್ರೊಫೆಸರ್ ಹಾಗೂ ಕಾಂಗ್ರೆಸ್ ಸಂಸದರಿಂದ ಲೈಂಗಿಕ ಕಿರುಕುಳ ಆರೋಪ, ಸೇವೆಯಿಂದ ವಜಾಆರ್‌ಬಿಐ ಬಿಗ್ ಶಾಕ್: ರೆಪೋ ದರ ಏರಿಕೆಯಿಂದ ಸಾಲಗಾರರಿಗೆ ಹೆಚ್ಚಳವಾದ ಇಎಂಐ ಬರೆ!ಎಸ್‌ಐಆರ್ ರದ್ದುಪಡಿಸುವಂತೆ ಜನತಾ ನ್ಯಾಯಾಲಯ ಸಮಾವೇಶ: ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹ10 ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ಸುಪಾರಿ - ಶಾಸಕ ಗಣಿಗ ರವಿ ಸ್ಫೋಟಕ ಪೆನ್‌ಡ್ರೈವ್ ಬಾಂಬ್!ಸಚಿವರಿಗೆ ಬಲೆ ಬೀಳಿಸಲು ಯತ್ನ: ಸಿಎಂ ಎಚ್ಚರಿಕೆ ನೀಡಿದ್ದಾರೆ ಎಂದ ಸತೀಶ್ ಜಾರಕಿಹೊಳಿಕೇಂದ್ರದೊಂದಿಗೆ ಜಿಎಸ್‌ಟಿ ಸಭೆ: ರಾಜ್ಯದ ಬಾಕಿ ಹಣದ ಕುರಿತು 'ಸಿಹಿ ಸುದ್ದಿ' ನೀಡಿದ ಸಿಎಂ ಡಿ.ಕೆ ಶಿವಕುಮಾರ್ ಸುಳಿವು!ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಮೊಬೈಲ್ ಪತ್ತೆ ಪ್ರಕರಣ: ಹಿಂಡಲಗಾ ಜೈಲಿಗೆ ಸ್ಥಳಾಂತರಪ್ರತಿಭಟನೆ ಹೆಸರಲ್ಲಿ ಎಲ್ಲವನ್ನೂ ಬಂದ್ ಮಾಡಲು ಆಗದು: ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ದಾವಣಗೆರೆಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ವಕೀಲರ ಪಟ್ಟು: ಮಧ್ಯಕರ್ನಾಟಕದಲ್ಲಿ ತೀವ್ರಗೊಂಡ ಹೋರಾಟ