ಚಂದ್ರವಳ್ಳಿ ನ್ಯೂಸ್, ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ತಮ್ಮ ಗೃಹಕಚೇರಿಯಲ್ಲಿ ಸಾರ್ವಜನಿಕರನ್ನು ಭೇಟಿಯಾಗಿ, ಅವರ ಸಮಸ್ಯೆ ಹಾಗೂ ಕುಂದುಕೊರತೆಗಳನ್ನು ಆಲಿಸಿದರು.
ಕ್ಷೇತ್ರದ ವಿವಿಧ ಭಾಗಗಳಿಂದ ಆಗಮಿಸಿದ್ದ ಹಿರಿಯ ನಾಗರಿಕರು, ಮಹಿಳೆಯರು ಸೇರಿದಂತೆ ನೂರಾರು ಸಾರ್ವಜನಿಕರು ಸಂಸದರನ್ನು ಖುದ್ದಾಗಿ ಭೇಟಿಯಾಗಿ ತಮ್ಮ ಭಾಗದ ಸಮಸ್ಯೆಗಳ ಕುರಿತು ಚರ್ಚಿಸಿದರು. ಇದೇ ಸಂದರ್ಭದಲ್ಲಿ ಸಾರ್ವಜನಿಕರಿಂದ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರಗಳನ್ನು ಸಂಸದರು ಸ್ವೀಕರಿಸಿದರು.
ಬಳಿಕ ಮಾತನಾಡಿದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು, "ಕ್ಷೇತ್ರದ ಪ್ರತಿಯೊಬ್ಬ ನಾಗರಿಕರ ಸಮಸ್ಯೆಯೂ ನಮಗೆ ಮುಖ್ಯವಾಗಿದೆ. ಇಂದು ಸಾರ್ವಜನಿಕರು ನೀಡಿರುವ ಎಲ್ಲಾ ಅಹವಾಲುಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು," ಎಂದು ಭರವಸೆ ನೀಡಿದರು.
ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಂಸದರ ಈ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮವು ಕ್ಷೇತ್ರದ ಜನರಲ್ಲಿ ಧನಾತ್ಮಕ ಆಶಾವಾದವನ್ನು ಮೂಡಿಸಿದೆ.



