ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಬ್ಬದ ಹೆಸರಿನಲ್ಲಿ ನಡುರಾತ್ರಿವರೆಗೂ ಪಟಾಕಿ ಸಿಡಿಸಿ ಮತ್ತು ಜೋರಾಗಿ ಹಾಡುಗಳನ್ನು ಹಾಕಿ ಸುತ್ತಲಿನ ವಾತಾವರಣವನ್ನು ಹಾಳು ಮಾಡಲಾಗಿದೆ ಎಂದು ಆರೋಪಿಸಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಸಾಮಾಜಿಕ ಜಾಲತಾಣಗಳ ಮೂಲಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪೊಲೀಸ್ ಆಯುಕ್ತರಿಗೆ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ದೂರು ನೀಡಿರುವುದಾಗಿ ಅವರು ತಿಳಿಸಿದ್ದಾರೆ.
ತಡರಾತ್ರಿ ನಡೆದ ಈ ಘಟನೆಯಿಂದ ಉಂಟಾದ ತೊಂದರೆಯ ಬಗ್ಗೆ ಇನ್ಸ್ಟಾಗ್ರಾಮ್ ಹಾಗೂ ಎಕ್ಸ್ (ಟ್ವಿಟರ್) ಖಾತೆಗಳಲ್ಲಿ ವಿಡಿಯೋ ಸಹಿತ ವಿವರ ಹಂಚಿಕೊಂಡಿರುವ ಅವರು, ರಾತ್ರಿ 2:30ರ ಸುಮಾರಿಗೆ ತುರ್ತು ಸಹಾಯವಾಣಿ '112'ಕ್ಕೂ ಕರೆ ಮಾಡಿ ದೂರು ದಾಖಲಿಸಿದ್ದಾಗಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ: ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಪಟಾಕಿ ಸಿಡಿಸುವುದನ್ನು ಹಾಗೂ ಮಧ್ಯರಾತ್ರಿಯ ನಂತರ ಲೌಡ್‌ಸ್ಪೀಕರ್ ಬಳಸಿ ಜೋರಾಗಿ ಸಂಗೀತ ನುಡಿಸುವುದನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ. ಆದರೆ ಇಲ್ಲಿ ಬೆಳಿಗ್ಗೆ 6 ಗಂಟೆಯವರೆಗೂ ಈ ಅಕ್ರಮ ಚಟುವಟಿಕೆ ಮುಂದುವರಿದಿತ್ತು.
ಸಾರ್ವಜನಿಕರಿಗೆ ತೊಂದರೆ: ಹತ್ತಿರದಲ್ಲೇ ಆಸ್ಪತ್ರೆಗಳಿದ್ದು, ಸುತ್ತಮುತ್ತ ಹಿರಿಯ ನಾಗರಿಕರು ಮತ್ತು ಮಕ್ಕಳು ವಾಸಿಸುತ್ತಿದ್ದಾರೆ. ಮರುದಿನ ಕೆಲಸದ ದಿನವಾಗಿದ್ದು ಶಾಲೆಗಳೂ ಪುನರಾರಂಭಗೊಂಡಿದ್ದರಿಂದ ಈ ಶಬ್ದಮಾಲಿನ್ಯದಿಂದ ಉದ್ಯೋಗಸ್ಥರು ಹಾಗೂ ಮಕ್ಕಳಿಗೆ ತೀವ್ರ ತೊಂದರೆಯಾಗಿದೆ.
ಹೊಂದಾಣಿಕೆಗೆ ಮಿತಿ: ವಿಶೇಷ ಸಂದರ್ಭಗಳಲ್ಲಿ ಸ್ವಲ್ಪ ಮಟ್ಟಿನ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ತಮ್ಮ ಅಭ್ಯಂತರವಿಲ್ಲ, ಆದರೆ ಇಂತಹ ಅಸಮಂಜಸ ಹಾಗೂ ತಡರಾತ್ರಿಯ ಸಮಯದಲ್ಲಿ ಈ ರೀತಿ ಗದ್ದಲ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ.
ಗಂಭೀರ ಕ್ರಮಕ್ಕೆ ಆಗ್ರಹ: ಕಾನೂನನ್ನು ಎಲ್ಲರೂ ಗೌರವಿಸಬೇಕು. ಈ ವಿಷಯವನ್ನು ಸರ್ಕಾರ ಮತ್ತು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಭಾವಿಸುವುದಾಗಿ ರಮ್ಯಾ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.



