ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಶಿಕ್ಷಣದ ಜೊತೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕಲಿಸುವಂತೆ ದೈಹಿಕ ಶಿಕ್ಷಣಾಧಿಕಾರಿ ಚಿದಾನಂದಸ್ವಾಮಿ ಸ್ಕೌಟ್ ಮತ್ತು ಗೈಡ್ಸ್ ಶಿಕ್ಷಕರುಗಳಿಗೆ ಕರೆ ನೀಡಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಮುರುಘಾಮಠದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಸ್ಕೌಟ್ಸ್ ಮತ್ತು ಗೈಡ್ಸ್, ಕಬ್ಸ್, ಬುಲ್ ಬುಲ್ ವಿಭಾಗಗಳ ರಾಜ್ಯ ಮಟ್ಟದ ಮೂಲ ತರಬೇತಿ ಉದ್ಘಾಟಿಸಿ ಮಾತನಾಡಿದರು.
ಇಂತಹ ಶಿಬಿರದಿಂದ ನಾಯಕತ್ವದ ಗುಣ ಬೆಳೆಯುತ್ತದೆ. ಇಲ್ಲಿ ನೀವುಗಳು ಕಲಿಯುವ ವಿಚಾರವನ್ನು ಶಾಲೆಯಲ್ಲಿ ಮಕ್ಕಳಿಗೆ ತಲುಪಿಸಿ. ಅಂಕವೇ ಮಾನದಂಡವಾಗಬಾರದು. ಶಿಕ್ಷಣ ಎಡವಲು ಬಿಡುವುದಿಲ್ಲ. ಸಂಸ್ಕಾರದಿಂದ ಬದುಕು ಕೆಡುವುದಿಲ್ಲ. ಸೇವಾದಳ, ಎನ್‌ಎಸ್‌ಎಸ್, ಎನ್‌ಸಿಸಿ, ಸ್ಕೌಟ್ ಅಂಡ್ ಗೈಡ್ಸ್, ರೆಡ್‌ಕ್ರಾಸ್ ಇವುಗಳ ಧ್ಯೇಯೋದ್ದೇಶ ಒಂದೆ ಆಗಿರುತ್ತದೆ. ಆತ್ಮವಿಶ್ವಾಸ, ಪ್ರಾಮಾಣಿಕತೆ, ಶಿಸ್ತು ಜೀವನದಲ್ಲಿ ಮುಖ್ಯ. ನಿಮ್ಮ ಮೇಲೆ ಗುರುತರವಾದ ಜವಾಬ್ದಾರಿಯಿದೆ. ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳು ತಿಳಿಸುವ ವಿಚಾರವನ್ನು ಗಮನ ಕೊಟ್ಟು ಕೇಳಿ ಮಕ್ಕಳಿಗೆ ತಲುಪಿಸಬೇಕು. ಚಟುವಟಿಕೆ ಆಧಾರಿತ ಶಿಕ್ಷಣ ಬೇಕು. ದೈಹಿಕ ಚಟುವಟಿಕೆಯನ್ನು ಮಕ್ಕಳಲ್ಲಿ ಅನುಷ್ಠಾನಗೊಳಿಸಿ ಎಂದು ತಿಳಿಸಿದರು.
ರಾಜ್ಯ ತರಬೇತಿ ಆಯಕ್ತರಾದ ನಾಗೇಶ್ ಶಹಪುರ್ ಮಾತನಾಡಿ ಮೂಲ ತರಬೇತಿಯಲ್ಲಿ ನೀವುಗಳು ಕಲಿಯುವ ವಿಷಯ ನಿಮ್ಮ ನಿಮ್ಮ ಶಾಲೆಗಳಲ್ಲಿ ಮಕ್ಕಳಿಗೆ ಮುಟ್ಟಬೇಕು. ಕೊಂಡಜ್ಜಿ ಬಸಪ್ಪ, ಎಸ್.ನಿಜಲಿಂಗಪ್ಪನವರ ಕೊಡುಗೆ ಸಂಸ್ಥೆಗೆ ಬಹಳಷ್ಟಿದೆ. ಸ್ಕೌಟ್ ಮತ್ತು ಗೈಡ್ಸ್ ತರಬೇತಿ ನಿರಂತರವಾಗಿ ನಡೆಯಬೇಕು. ಮಕ್ಕಳಿಗೆ ಹೊರಾಂಗಣ ಚಟುವಟಿಕೆ ಮುಖ್ಯ. ಏನೆ ಕಲಿತರೂ ಭಕ್ತಿ, ನಿಷ್ಟೆ, ಸಮಯ ಪಾಲನೆಯಿರಬೇಕೆಂದು ಹೇಳಿದರು.
ಸ್ಕೌಟ್ ಆಯುಕ್ತ ಪಿ.ವೈ.ದೇವರಾಜ್‌ಪ್ರಸಾದ್ ಮಾತನಾಡುತ್ತ ಮೂಲ ತರಬೇತಿಯಲ್ಲಿ ಭಾಗವಹಿಸುವುದರಿಂದ ಐಕ್ಯತೆ, ಒಗ್ಗಟ್ಟು, ಸಮಾನತೆ ಮೂಡುತ್ತದೆ. ಶಿಬಿರದಲ್ಲಿ ನೀವುಗಳು ಕಲಿಯುವ ಕೌಶಲ್ಯಯುಕ್ತ ಚಟುವಟಿಕೆಗಳನ್ನು ಮಕ್ಕಳಿಗೆ ತಲುಪಿಸಿ. ಇಲ್ಲದಿದ್ದರೆ ಸ್ವಾರ್ಥಿಗಳಾಗುತ್ತೀರಿ. ಜಿಲ್ಲೆಯಲ್ಲಿಯೇ ಮಾದರಿ ಶಿಕ್ಷಕರುಗಳಾದಾಗ ಸಂಸ್ಥೆಗೆ ಕೀರ್ತಿ ಬರುತ್ತದೆ. ಶಿಬಿರಗಳು ಹೆಚ್ಚು ಹೆಚ್ಚು ನಡೆದಷ್ಟು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಗೈಡ್ ಆಯುಕ್ತರಾದ ಸವಿತಾ ಶಿವಕುಮಾರ್ ಮಾತನಾಡಿ ನೀವುಗಳು ತರಬೇತಿಯಲ್ಲಿ ಕಲಿಯುವುದನ್ನು ಶಾಲೆಯಲ್ಲಿ ಮಕ್ಕಳಿಗೆ ಮುಟ್ಟಿಸಿ. ಇದರಿಂದ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಿದಂತಾಗುತ್ತದೆಂದರು.
ಮೂಲ ತರಬೇತಿಯ ಅಧ್ಯಕ್ಷತೆ ವಹಿಸಿದ್ದ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ ಉಪಾಧ್ಯಕ್ಷೆ ಶೀಲಾ ಮಂಜುನಾಥ್ ಮಾತನಾಡುತ್ತ ಪ್ರತಿಯೊಂದು ವಿದ್ಯೆಗೂ ಗುರು ಇರಬೇಕು. ಆಗ ಮಾತ್ರ ಹೆಚ್ಚು ಹೆಚ್ಚು ವಿಚಾರಗಳನ್ನು ತಿಳಿದುಕೊಂಡು ಜ್ಞಾನ ವೃದ್ದಿಸಿಕೊಳ್ಳಬಹುದು. ತರಬೇತಿಯಿಂದ ನೀವುಗಳು ಕಲಿಯುವ ವಿಷಯಗಳನ್ನು ಮಕ್ಕಳ ಮನಸ್ಸಿಗೆ ನಾಟಿಸಿ ಎಂದು ನುಡಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಉಪಾಧ್ಯಕ್ಷ ಪರಮೇಶ್, ಹೆಚ್.ಕ್ಯು.ಸಿ. ಅನಂತರೆಡ್ಡಿ, ರತ್ನ, ಸೌಮ್ಯ, ತಸ್ಮಿಯ, ದೇಶಪಾಂಡೆ, ಭಂಡಾರಿ, ಮಂಜುನಾಥ್ ಇವರುಗಳು ವೇದಿಕೆಯಲ್ಲಿದ್ದರು.




