ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರಸಭೆ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ 'ಪಿಎಂ ಸ್ವನಿಧಿ' (ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ) ಅಡಿಯಲ್ಲಿ ಸೋಮವಾರ ಹಿರಿಯೂರು ನಗರಸಭೆ ವತಿಯಿಂದ 'ಲೋಕ ಕಲ್ಯಾಣ ಮೇಳ' ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಹಿರಿಯೂರು ನಗರಸಭೆಯ ಪೌರಾಯುಕ್ತ ಎ. ವಾಸೀಂ ಅವರು ಮಾತನಾಡಿ, ಹೊಸದಾಗಿ ಸಾಲ ಸೌಲಭ್ಯ ಪಡೆಯಲು ಇಚ್ಛಿಸುವ ಅರ್ಹ ಬೀದಿ ಬದಿ ವ್ಯಾಪಾರಿಗಳಿಗೆ ಸಾಲದ ಅರ್ಜಿಗಳನ್ನು ವಿತರಿಸಿದರು. ಇದೇ ಸಂದರ್ಭದಲ್ಲಿ ವ್ಯಾಪಾರಿಗಳಿಂದ ಭರ್ತಿ ಮಾಡಿದ ಅರ್ಜಿಗಳನ್ನು ಕ್ರೂಡೀಕರಿಸುವ ಕಾರ್ಯವನ್ನು ಸಹ ಮಾಡಲಾಯಿತು.
ಪೌರಾಯುಕ್ತರ ಕರೆ:
"ಬೀದಿ ಬದಿ ವ್ಯಾಪಾರಿಗಳು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಪಿಎಂ ಸ್ವನಿಧಿ ಯೋಜನೆ ಅತ್ಯಂತ ಸಹಕಾರಿಯಾಗಿದೆ. ನಗರಸಭೆ ವ್ಯಾಪ್ತಿಯ ಎಲ್ಲಾ ಅರ್ಹ ವ್ಯಾಪಾರಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಂಡು ತಮ್ಮ ವ್ಯವಹಾರವನ್ನು ವೃದ್ಧಿಸಿಕೊಳ್ಳಬೇಕು."
ಎ. ವಾಸೀಂ, ಪೌರಾಯುಕ್ತರು, ನಗರಸಭೆ ಹಿರಿಯೂರು.
ಪಿಎಂ ಸ್ವನಿಧಿ ಯೋಜನೆಯ ಪ್ರಮುಖ ಸೌಲಭ್ಯಗಳು ಮತ್ತು ಅರ್ಹತೆಗಳು:
ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡಿ, ಅವರ ಬೆನ್ನಿಗೆ ನಿಲ್ಲುವ ಉದ್ದೇಶದಿಂದ ಭಾರತ ಸರ್ಕಾರವು ಜಾರಿಗೆ ತಂದಿರುವ ಈ ಮೈಕ್ರೋ-ಕ್ರೆಡಿಟ್ (ಸಣ್ಣ ಸಾಲ) ಯೋಜನೆಯ ಪ್ರಮುಖ ಅಂಶಗಳು ಹೀಗಿವೆ.
ಹಂತ ಹಂತವಾಗಿ ಸಾಲದ ಮೊತ್ತ ಏರಿಕೆ:
ಮೊದಲ ಹಂತ: ಯಾವುದೇ ಗ್ಯಾರಂಟಿ ಇಲ್ಲದೆ ರೂ. 10,000 ವರೆಗೆ ಸಾಲ.
ಮುಂದಿನ ಹಂತಗಳು: ಮೊದಲ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪಾವತಿಸಿದರೆ, 2ನೇ ಹಂತದಲ್ಲಿ ರೂ. 20,000 ಹಾಗೂ 3ನೇ ಹಂತದಲ್ಲಿ ರೂ. 50,000 ವರೆಗೆ ದೊಡ್ಡ ಮೊತ್ತದ ಸಾಲ ಸೌಲಭ್ಯ.
ಬಡ್ಡಿ ಸಬ್ಸಿಡಿ ಮತ್ತು ನಗದು ಬಹುಮಾನ: ಸಾಲವನ್ನು ಸಕಾಲಕ್ಕೆ ಮರುಪಾವತಿಸುವ ಫಲಾನುಭವಿಗಳಿಗೆ ವಾರ್ಷಿಕ ಶೇ. 7 ರಷ್ಟು ಬಡ್ಡಿ ಸಬ್ಸಿಡಿ ಸಿಗಲಿದ್ದು, ಇದು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಸಾಲದ ಮುಂಗಡ ಪಾವತಿಗೆ ಯಾವುದೇ ದಂಡ ಇರುವುದಿಲ್ಲ.
ಡಿಜಿಟಲ್ ವಹಿವಾಟಿಗೆ ಕ್ಯಾಶ್‌ಬ್ಯಾಕ್: ಡಿಜಿಟಲ್ ಪಾವತಿಗಳನ್ನು ಬಳಸುವ ವ್ಯಾಪಾರಿಗಳಿಗೆ ಪ್ರತಿ ತಿಂಗಳು ರೂ. 100 ರವರೆಗೆ ಕ್ಯಾಶ್‌ಬ್ಯಾಕ್ ಪ್ರೋತ್ಸಾಹಧನ ಸಿಗಲಿದೆ.
ಯಾರು ಅರ್ಹರು?: ತಳ್ಳುಗಾಡಿ, ಬುಟ್ಟಿ, ಬೈಸಿಕಲ್ ಅಥವಾ ತಾತ್ಕಾಲಿಕ ಮಳಿಗೆಗಳಲ್ಲಿ ವ್ಯಾಪಾರ ಮಾಡುವವರು ಹಾಗೂ ಹಿರಿಯೂರು ನಗರಸಭೆಯಿಂದ ವಿಕ್ರಯ ಪ್ರಮಾಣಪತ್ರ ಅಥವಾ ಗುರುತಿನ ಚೀಟಿ ಹೊಂದಿರುವ ಎಲ್ಲಾ ಬೀದಿ ಬದಿ ವ್ಯಾಪಾರಿಗಳು ಈ ಸಾಲಕ್ಕೆ ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಕೆ ಎಲ್ಲಿ?:
ಅರ್ಜಿ ಸಲ್ಲಿಸದ ಅರ್ಹ ವ್ಯಾಪಾರಿಗಳು ತಕ್ಷಣವೇ ಹಿರಿಯೂರು ನಗರಸಭೆ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ ಪಿಎಂ ಸ್ವನಿಧಿ ಯೋಜನೆಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲೂ ಅರ್ಜಿ ಸಲ್ಲಿಸಲು ಅವಕಾಶವಿದೆ.



