ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮನೆ ಕೆಲಸದಾಕೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೈಲು ಸೇರಿರುವ ಅಮಾನತುಗೊಂಡ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಪರಪ್ಪನ ಅಗ್ರಹಾರ ಕೇಂದ್ರ ಕಾರಗೃಹದಲ್ಲೂ ತನ್ನ ವಿಕೃತ ಚಾಳಿಯನ್ನು ಮುಂದುವರಿಸಿರುವುದು ಎಫ್ಎಸ್ಎಲ್ ವರದಿಯಿಂದ ಬೆಳಕಿಗೆ ಬಂದಿದೆ.
ಜೈಲಿನೊಳಗೆ ಅಕ್ರಮವಾಗಿ ಮೊಬೈಲ್ ಮತ್ತು ಪೆನ್ ಡ್ರೈವ್ ಬಳಸಿರುವುದು ತನಿಖೆಯಿಂದ ಬಹಿರಂಗಗೊಂಡಿದ್ದು, ತನಿಖಾಧಿಕಾರಿಗಳೇ ದಂಗಾಗುವಂತಹ ಸ್ಫೋಟಕ ಸಂಗತಿಗಳು ಹೊರಬಿದ್ದಿವೆ.
ಪೊಲೀಸರು ನಡೆಸಿದ ತನಿಖೆಯ ವೇಳೆ ಜೈಲಿನಲ್ಲಿದ್ದ ಪ್ರಜ್ವಲ್ ಬಳಸುತ್ತಿದ್ದ ಮೊಬೈಲ್ ಡೇಟಾದ ಎಫ್ಎಸ್ಎಲ್ ವರದಿ ಲಭ್ಯವಾಗಿದೆ. ಈ ವರದಿಯ ಪ್ರಕಾರ, ಪ್ರಜ್ವಲ್ ಬಳಿ ಪತ್ತೆಯಾದ ಪೆನ್ ಡ್ರೈವ್ನಲ್ಲಿ ಬರೋಬ್ಬರಿ 173 ವೀಡಿಯೋ ಫೈಲ್ಗಳು ಪತ್ತೆಯಾಗಿವೆ. ಅದರಲ್ಲಿ ಸ್ವತಃ ಆತನದ್ದೇ 3 ವೀಡಿಯೊಗಳು ಸೇರಿದಂತೆ ನೂರಕ್ಕೂ ಹೆಚ್ಚು ಅಶ್ಲೀಲ ವೀಡಿಯೊಗಳು ಇರುವುದು ಕಂಡುಬಂದಿದೆ. ತನ್ನದೇ ಅಶ್ಲೀಲ ವೀಡಿಯೋಗಳನ್ನು ಜೈಲಿನಲ್ಲಿದ್ದುಕೊಂಡೂ ವೀಕ್ಷಿಸಿ ವಿಕೃತ ಆನಂದ ಪಡೆಯುತ್ತಿದ್ದನಾ ಎಂಬ ಅನುಮಾನ ವ್ಯಕ್ತವಾಗಿದೆ. ಇದರೊಂದಿಗೆ ಕೆಲವು ಮಹಿಳೆಯರ ಜೊತೆ ವೀಡಿಯೋ ಕಾಲ್ ಮಾಡಿರುವುದು ಹಾಗೂ ಹಲವು ಯುವತಿಯರಿಗೆ ಕರೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.
ಜೈಲು ವಾರ್ಡನ್ನಿಂದ ಮೊಬೈಲ್ ಸರಬರಾಜು?: ಪ್ರಜ್ವಲ್ಗೆ ಜೈಲಿನೊಳಗೆ ಮೊಬೈಲ್ ತಲುಪಿಸಿರುವುದು ಜೈಲು ವಾರ್ಡನ್ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಜೈಲಿನಲ್ಲಿ ಮೊಬೈಲ್ ಪಡೆಯಲು ಪ್ರಜ್ವಲ್ ಬರೋಬ್ಬರಿ 1 ಲಕ್ಷ ರೂ. ಹಾಗೂ ಸಿಮ್ ಕಾರ್ಡ್ಖರೀದಿಸಲು 50 ಸಾವಿರ ರೂ.ಗಳನ್ನು ನೀಡಿದ್ದ ಎಂಬ ಮಾಹಿತಿ ಹೊರಬಿದ್ದಿದೆ. ಸದ್ಯ ಎಫ್ಎಸ್ಎಲ್ನಿಂದ ಕೆಲವು ವೀಡಿಯೋಗಳು ಮಾತ್ರ ರಿಟ್ರೀವ್ ಆಗಿದ್ದು, ಮುಂಬರುವ ದಿನಗಳಲ್ಲಿ ಈ ಕುರಿತು ಮತ್ತಷ್ಟು ತನಿಖೆ ಮುಂದುವರಿಯಲಿದೆ.
ಮತ್ತಷ್ಟು ವಿಚಾರಣೆಗೆ ಪೊಲೀಸರ ಸಿದ್ಧತೆ:
ಲಭ್ಯವಾಗಿರುವ ವೀಡಿಯೋಗಳು ಮತ್ತು ಕಾಲ್ ವಿವರಗಳ ಆಧಾರದ ಮೇಲೆ ಪ್ರಜ್ವಲ್ ರೇವಣ್ಣ ಅವರನ್ನು ಪೊಲೀಸರು ಮತ್ತೊಮ್ಮೆ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಯಿದೆ. ಅಲ್ಲದೆ, ವೀಡಿಯೋ ಕಾಲ್ ಮಾಡಿದ ಮಹಿಳೆಯರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲು ಪರಪ್ಪನ ಅಗ್ರಹಾರ ಪೊಲೀಸರು ತೀರ್ಮಾನಿಸಿದ್ದಾರೆ. ಈ ಹಿಂದೆ ಸಿಸಿಬಿ ದಾಳಿ ವೇಳೆ ಮೊಬೈಲ್ ಮತ್ತು ಪೆನ್ ಡ್ರೈವ್ ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ, ಪ್ರಜ್ವಲ್ ವಿರುದ್ಧ ಈಗಾಗಲೇ ಇರುವ ಗಂಭೀರ ಪ್ರಕರಣಗಳಿಗೆ ಈ ಹೊಸ ಕೃತ್ಯವು ಮತ್ತಷ್ಟು ಸಂಕಷ್ಟ ತಂದೊಡ್ಡಿದ್ದು, ಜೈಲು ಆಡಳಿತ ಮತ್ತು ಮೊಬೈಲ್ ಸರಬರಾಜು ಮಾಡಿದ ವಾರ್ಡನ್ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.




