ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ 200ಕ್ಕೂ ಅಧಿಕ ತಾಲೂಕುಗಳು ಭೀಕರ ಬರಕ್ಕೆ ತುತ್ತಾಗಿದ್ದು, ರೈತರ ಬೆಳೆಗಳು ಸಂಪೂರ್ಣ ನಾಶವಾಗಿವೆ. ಇದರೊಂದಿಗೆ ವಿದ್ಯುತ್ ಉತ್ಪಾದನೆ ಕುಸಿದು ನೀರಿನ ತೀವ್ರ ಅಭಾವ ಉಂಟಾಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಕರ್ನಾಟಕಕ್ಕೆ ನೆರವು ನೀಡುವುದು ಪ್ರಧಾನಮಂತ್ರಿಗಳ ಪ್ರಮುಖ ಕರ್ತವ್ಯ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬರ ಪರಿಹಾರ ಕೋರಿ ದೆಹಲಿಗೆ ಸರ್ವಪಕ್ಷ ನಿಯೋಗ ತೆರಳುವ ಕುರಿತು ಮಾಹಿತಿ ನೀಡಿದರು. ಪ್ರಧಾನಮಂತ್ರಿಗಳ ಭೇಟಿಗಾಗಿ ಸಮಯಾವಕಾಶ ಕೋರಲಾಗಿದ್ದು, ವಿರೋಧ ಪಕ್ಷಗಳ ನಾಯಕರು ಹಾಗೂ ಸಂಸದರು ರಾಜ್ಯದ ಹಿತಾಸಕ್ತಿಗಾಗಿ ಕೇಂದ್ರದಿಂದ ನೆರವು ತರಲು ಕೈಜೋಡಿಸುವ ವಿಶ್ವಾಸವಿದೆ ಎಂದರು. ಅಲ್ಲದೆ, ಕೇಂದ್ರ ಸರ್ಕಾರವು ತಕ್ಷಣವೇ ಮಧ್ಯಂತರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ವಿದ್ಯುತ್ಕೊರತೆ ನೀಗಿಸಲು ಹೈ-ಪವರ್ಕ್ರಮಗಳು:
ರಾಜ್ಯದಲ್ಲಿ ಉಂಟಾಗಿರುವ ವಿದ್ಯುತ್ಕೊರತೆಯನ್ನು ನೀಗಿಸಲು ಸರ್ಕಾರ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಂಡಿದೆ. ಬೇರೆ ರಾಜ್ಯಗಳಿಂದ ಪ್ರತಿ ಯೂನಿಟ್ಗೆ 20 ರಿಂದ 22 ರೂ.ಗಳವರೆಗೆ ಅಧಿಕ ವೆಚ್ಚದಲ್ಲಿ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ನಾಗರಿಕರ ರಕ್ಷಣೆಗಾಗಿ ಇಂಧನ ಇಲಾಖೆಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಇದರ ಜೊತೆಗೆ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಕರೆಯಲಾಗಿದ್ದು, ಅವರು ಉತ್ಪಾದಿಸುವ ವಿದ್ಯುತ್ ಅನ್ನು ಬೇರೆಡೆ ಮಾರಾಟ ಮಾಡುವುದಕ್ಕೆ ನಿರ್ಬಂಧ ಹೇರಿ, ನೇರವಾಗಿ ಸರ್ಕಾರಕ್ಕೆ ನೀಡುವಂತೆ ಸೂಚನೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯ ‘ಚೊಂಬು’ ಪ್ರತಿಭಟನೆಗೆ ತಿರುಗೇಟು:
ಬಿಜೆಪಿಯವರ ವಾಗ್ದಾಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, "ಆರ್ಥಿಕ ಇಲಾಖೆ ಸರ್ಕಾರದ ಆಡಳಿತಕ್ಕೆ ಸಲಹೆ ಹಾಗೂ ಎಚ್ಚರಿಕೆ ನೀಡುವುದು ಸಾಮಾನ್ಯ ಪ್ರಕ್ರಿಯೆ. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಹಿಂದಿನ ಸರ್ಕಾರದ ಅವಧಿಯಲ್ಲೂ ಆರ್ಥಿಕ ಇಲಾಖೆ ಎಚ್ಚರಿಕೆ ನೀಡಿತ್ತು. ಬೇಕಿದ್ದರೆ ಆ ದಾಖಲೆಗಳನ್ನೂ ಬಿಡುಗಡೆ ಮಾಡುತ್ತೇನೆ" ಎಂದರು.
ಬಿಜೆಪಿ ನಾಯಕರು ಕೇವಲ ರಾಜಕೀಯ ಲಾಭಕ್ಕಾಗಿ ಇಂತಹ ಗಿಮಿಕ್ಮಾಡುತ್ತಿದ್ದು, ನನ್ನ ರಾಜೀನಾಮೆ ಬೇಕಾದರೆ ಅವರು ತೆಗೆದುಕೊಳ್ಳಲಿ ಎಂದು ಸವಾಲು ಹಾಕಿದರು.
ರಾಜ್ಯದ ಆರ್ಥಿಕತೆ ಸತ್ತಿದೆ ಎಂದು ಬಿಜೆಪಿ ಶವಯಾತ್ರೆ ನಡೆಸಲು ಮುಂದಾಗಿರುವ ಕುರಿತು ಮಾತನಾಡುತ್ತಾ, "ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಆದರೆ ಅವರ ಅಧಿಕಾರದ ಅವಧಿಯಲ್ಲಿ ನೀರಾವರಿ ಇಲಾಖೆಯಲ್ಲಿದ್ದ ಹಣ ಎಷ್ಟು? ಅವರು ಘೋಷಿಸಿದ ಕಾಮಗಾರಿಗಳೆಷ್ಟು? ಎಂಬುದರ ಸಂಪೂರ್ಣ ಪಟ್ಟಿ ನೀಡಬೇಕೆ?" ಎಂದು ಪ್ರಶ್ನಿಸಿದರು. ಟೀಕೆ ಮಾಡುವುದು ಬಹಳ ಸುಲಭ, ಆದರೆ ಅಧಿಕಾರದಲ್ಲಿರುವಾಗ ಅದನ್ನು ಸಮರ್ಥವಾಗಿ ನಿಭಾಯಿಸುವುದು ಸವಾಲಿನ ಕೆಲಸ ಎಂದ ಅವರು, ನಮ್ಮ ಸರ್ಕಾರಕ್ಕೆ ಜನರ ಬದುಕಿನ ಬಗ್ಗೆ ಕಾಳಜಿ ಇದೆಯೇ ಹೊರತು ಜಾತಿ, ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡುವುದಿಲ್ಲ ಎಂದು ತಿರುಗೇಟು ನೀಡಿದರು.




