ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ವಿದ್ಯುತ್ ನಿಗಮಗಳನ್ನು ಖಾಸಗೀಕರಣ ಮಾಡದಿರುವ ವಿಚಾರವಾಗಿ ನಾನು ಒಬ್ಬನೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ನಿಮ್ಮ ಅಭಿಪ್ರಾಯದ ಮೇರೆಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು," ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.ಬೆಂಗಳೂರು ಅರಮನೆ ಮೈದಾನದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಹಾಗೂ ಅಸೋಸಿಯೇಷನ್ ಒಕ್ಕೂಟ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಖಾಸಗೀಕರಣ ಪ್ರಸ್ತಾಪಕ್ಕೆ ಇತಿಹಾಸವಿದೆ:
ಕಾನೂನು ತಂದಿದ್ದು ಬಿಜೆಪಿ: 2003ರಲ್ಲಿ ಈ ಕುರಿತ ಕಾನೂನನ್ನು ತಂದಿದ್ದು ಬಿಜೆಪಿ ಸರ್ಕಾರ. ಆಗ ಯಾರೂ ಇದರ ವಿರುದ್ಧ ಧ್ವನಿ ಎತ್ತಲಿಲ್ಲ, ಹೋರಾಟ ಮಾಡಲಿಲ್ಲ. ಈಗ ನನ್ನ ಮತ್ತು ಜಾರ್ಜ್ ಅವರ ಬಳಿ ಬಂದು ಖಾಸಗೀಕರಣಕ್ಕೆ ಅವಕಾಶ ನೀಡಬೇಡಿ ಎನ್ನುತ್ತಿದ್ದೀರಿ. ತಪ್ಪು ಮಾಡಿದಾಗ ಧಿಕ್ಕಾರ ಹಾಗೂ ಒಳ್ಳೆಯ ಕೆಲಸ ಮಾಡಿದಾಗ ಜೈಕಾರ ಹಾಕಿದರಷ್ಟೇ ಅದಕ್ಕೆ ಗೌರವ ಸಿಗುತ್ತದೆ.
ಶ್ರಮ ನಿಮ್ಮದು, ಲಾಭ ಖಾಸಗಿಯವರದ್ದೇ?: ನೂರಾರು ವರ್ಷಗಳಿಂದ ಕಷ್ಟಪಟ್ಟು ವಿದ್ಯುತ್ ಲೈನ್ ಎಳೆದವರು ನೀವು, ಅದಕ್ಕೆ ಬೆಂಬಲ ನೀಡಿದ್ದು ಸರ್ಕಾರ. ಈಗ ಖಾಸಗಿ ಕಂಪನಿಗಳು ದುಡ್ಡು ಮಾಡಲು ಸಂಪರ್ಕ ನೀಡುವ ಅಧಿಕಾರವನ್ನು ಅವರಿಗೆ ಕೊಡಬೇಕೇ? ಎಂದು ಸಿಎಂ ಪ್ರಶ್ನಿಸಿದರು.
ನಮ್ಮದು 'ಗಿವ್ ಅಂಡ್ ಟೇಕ್' ನೀತಿ:
"ನೀವು ಡಿಕೆ, ಡಿಕೆ ಎಂದು ಕೂಗಿದಾಕ್ಷಣ ನಾನು ಹಿಗ್ಗುವುದಿಲ್ಲ, ಜಗ್ಗುವುದಿಲ್ಲ. ನಮ್ಮದು ಏನಿದ್ದರೂ ಕೊಡು-ಕೊಳ್ಳುವ, ಶೇರಿಂಗ್ ಅಂಡ್ ಕೇರಿಂಗ್ ಪದ್ಧತಿ. 2028ರಲ್ಲಿ ನಿಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕು ತಾನೆ? ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ನಾನು ಉಳಿಸಿಕೊಳ್ಳುತ್ತೇನೆ. ಆದರೆ ನೀವು ಮೋಸ ಮಾಡಿದರೆ ನಾನು ವಾಜಪೇಯಿ ಸರ್ಕಾರದ ತೀರ್ಮಾನದ ಕಡೆ ಮುಖ ಮಾಡಬೇಕಾಗುತ್ತದೆ."
ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ.
ಇಂಧನ ಇಲಾಖೆಯಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಗಳು:
ವೇತನ ಪರಿಷ್ಕರಣೆ: ಈ ಹಿಂದೆ 7 ವರ್ಷಕ್ಕೊಮ್ಮೆ ಆಗುತ್ತಿದ್ದ ವೇತನ ಪರಿಷ್ಕರಣೆಯನ್ನು 5 ವರ್ಷಕ್ಕೆ ಇಳಿಸಿ, ನೌಕರರ ಬದುಕಿಗೆ ಅನುಕೂಲ ಮಾಡಿಕೊಡಲಾಗಿದೆ.
ಪಾರದರ್ಶಕ ನೇಮಕಾತಿ: ಒಬ್ಬರಿಂದಲೂ ಒಂದು ರೂಪಾಯಿ ಲಂಚ ಪಡೆಯದೇ ಇಲಾಖೆಯಲ್ಲಿ 25 ಸಾವಿರ ಜನರನ್ನು ನೇಮಕ ಮಾಡಲಾಗಿದೆ.
ಇಂಧನ ಭವನ ನಿರ್ಮಾಣ: ರೇಸ್ ಕೋರ್ಸ್ ರಸ್ತೆ ಬಳಿ ಭವ್ಯವಾದ 'ಇಂಧನ ಭವನ' ಹಾಗೂ ಕ್ರೆಡೆಲ್ ಕಟ್ಟಡವನ್ನು ನಿರ್ಮಿಸಿ ಸಾಕ್ಷಿಗುಡ್ಡೆ ನಿಲ್ಲಿಸಲಾಗಿದೆ. ಆದರೆ ಬಿಜೆಪಿ ಅವಧಿಯಲ್ಲಿ ಇಂಧನ ಉತ್ಪಾದನೆ ಹೆಚ್ಚಿಸಲು ಯಾವುದೇ ಯೋಜನೆ ತರಲಿಲ್ಲ.
ವಿದ್ಯುತ್ ಸೋರಿಕೆ ತಡೆ: ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರದ ಅವಧಿಯಲ್ಲಿ ಶೇ. 19ರಷ್ಟಿದ್ದ ವಿದ್ಯುತ್ ಸೋರಿಕೆಯನ್ನು ಶೇ. 10ಕ್ಕೆ ಇಳಿಸಲಾಗಿದೆ.
ಸೋಲಾರ್ ಪಾರ್ಕ್ ಕ್ರಾಂತಿ: ಒಂದು ಎಕರೆ ಭೂಮಿಯನ್ನೂ ಸ್ವಾಧೀನಪಡಿಸಿಕೊಳ್ಳದೆ, 13 ಸಾವಿರ ಎಕರೆ ಜಮೀನಿನಲ್ಲಿ 2,400 ಮೆ.ವ್ಯಾಟ್ ಸಾಮರ್ಥ್ಯದ ಏಷ್ಯಾದಲ್ಲೇ ದೊಡ್ಡದಾದ ಸೋಲಾರ್ ಪಾರ್ಕ್ ನಿರ್ಮಿಸಲಾಯಿತು. ಇದನ್ನು ನೋಡಿ ಕೇಂದ್ರ ಸರ್ಕಾರ 'ಕುಸುಮ್' ಯೋಜನೆ ಜಾರಿಗೆ ತಂದಿತು.
ನೌಕರರು ಕತ್ತಲೆ ದೂರ ಮಾಡುವ ಕಾಯಕ ಜೀವಿಗಳು:
ಗಡಿಯಲ್ಲಿ ಸೈನಿಕರು, ಹೊಲದಲ್ಲಿ ರೈತರು ಇರುವಂತೆ ಇಡೀ ನಾಡಿಗೆ ಬೆಳಕು ನೀಡುವ ಧೀಮಂತ ಸಿಬ್ಬಂದಿ ನೀವಾಗಿದ್ದೀರಿ. ಜನ ಸಾಮಾನ್ಯರು ಶಾಸಕರ ನಂಬರ್ ಇಟ್ಟುಕೊಂಡಿರುತ್ತಾರೋ ಇಲ್ಲವೋ, ಆದರೆ ಪವರ್ ಮ್ಯಾನ್ ಮತ್ತು ಇಂಜಿನಿಯರ್‌ಗಳ ಸಂಪರ್ಕದಲ್ಲಿರುತ್ತಾರೆ. ಸರ್ಕಾರವನ್ನು ಅಧಿಕಾರಕ್ಕೆ ತರುವ ಮತ್ತು ಕೆಳಗಿಳಿಸುವ ಶಕ್ತಿ ನಿಮಗಿದೆ. ಇಂದಿರಾ ಗಾಂಧಿಯವರ ಕಾಲದಲ್ಲಿ ಇಲಾಖೆಯ ಮಂಡಳಿಯಲ್ಲಿ ನೌಕರರ ಧ್ವನಿಗೆ ಪ್ರಾತಿನಿಧ್ಯ ನೀಡುವ ವ್ಯವಸ್ಥೆ ತರಲಾಯಿತು ಎಂಬುದನ್ನು ಮರೆಯಬಾರದು ಎಂದು ಸಿಎಂ ನೌಕರರ ಶ್ರಮವನ್ನು ಶ್ಲಾಘಿಸಿದರು.



