ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಜ್ಯದಲ್ಲಿ ಮಳೆಯಿಲ್ಲ. ಹಲವು ಜಿಲ್ಲೆಗಳಲ್ಲಿ ಬರದ ಪರಿಸ್ಥಿತಿ ಕಾಡುತ್ತಿದೆ. ಕಾವೇರಿ ಒಡಲು ಕೂಡ ಬರಿದಾಗುತ್ತಿದ್ದು, ಇಂತಹ ಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡಲು ಹೇಗೆ ಸಾಧ್ಯ. ಒಂದು ವೇಳೆ ಸರ್ಕಾರ ಒತ್ತಡಕ್ಕೊಳಗಾಗಿ ತಮಿಳು ನಾಡಿಗೆ ನೀರು ಹರಿಸಿದರೆ ಕನ್ನಡ ಪರ ರೈತ ಪರ ಸಂಘಟನೆಗಳಿಂದ ತೀವ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ಹೇಳಿದರು.
ನಗರದ ತಾಲೂಕು ಕಚೇರಿ ಆವರಣದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ಕಾವೇರಿ ನೀರು ನಿಯಂತ್ರಣ ಸಮಿತಿ ತೀರ್ಮಾನದ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿ
ರಾಜ್ಯದಲ್ಲಿ ಮಳೆ ಕೊರತೆಯಿಂದ ರೈತರು ಕಂಗಾಲಾಗಿದ್ದಾರೆ. ಇಂತಹ ಸ್ಥಿತಿಯಲ್ಲಿ ಕಾವೇರಿ ನೀರು ತಮಿಳುನಾಡಿಗೆ ನೀಡಿದರೆ ಕನ್ನಡಿಗರು ಏನು ಮಾಡಬೇಕು. ಡೆಡ್ ಸ್ಟೋರೇಜ್ ಬಿಟ್ಟರೆ ಕೇವಲ ೮-೯ ಟಿಎಂಸಿ ನೀರು ಮಾತ್ರ ಸದ್ಯ ಲಭ್ಯವಿದೆ. ಇದರಲ್ಲೂ ೪ ಟಿಎಂಸಿವರೆಗೆ ನೀರನ್ನು ತಮಿಳುನಾಡಿಗೆ ನೀಡಿದರೆ ಕನ್ನಡಿಗರು ಏನು ಮಾಡಬೇಕು. ಮೇಕೆದಾಟನ್ನು ಕಟ್ಟಲು ಅವರು ಬಿಡುವುದಿಲ್ಲ. ತಮಿಳುನಾಡು ಮಳೆ ನೀರು ವ್ಯರ್ಥ ಆಗುತ್ತಿರುವ ಬಗ್ಗೆ ಕೂಡ ಏನು ಕ್ರಮವಹಿಸುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಪ್ರಾಧಿಕಾರದ ಆದೇಶ ದಿಕ್ಕರಿಸುತ್ತೇವೆ. ರಾಜ್ಯ ಸರಕಾರ ಇದನ್ನು ತಿರಸ್ಕರಿಸಬೇಕು. ಕನ್ನಡಿಗರ ಹಿತ ಕಾಪಾಡಬೇಕು. ನ್ಯಾಯಮಂಡಳಿ ಬಂದು ಪರಿಶೀಲಿಸಿ ಆದೇಶ ನೀಡಬೇಕು. ಇಂತಹ ಪರಿಸ್ಥಿತಿಯಲ್ಲೂ ನೀರು ಕೊಡುವುದಿಲ್ಲ. ಸರಕಾರ ನೀರು ಬಿಟ್ಟರೆ ರಸ್ತೆಯಲ್ಲಿ ರಕ್ತ ಚೆಲ್ಲುತ್ತದೆ. ರಾಜ್ಯ ಸರಕಾರ ಇದರ ಬಗ್ಗೆ ಎಚ್ಚರವಹಿಸಬೇಕು ಎಂದು ಹೇಳಿದರು.
ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯಕ್ ಮಾತನಾಡಿ, ದೇಶದಲ್ಲಿಯೇ ಮಳೆ ಕೊರತೆ ಆಗಿದ್ದು, ಎಲ್ಲೆಡೆ ಬರದ ಸ್ಥಿತಿಯಿದೆ. ವಾಡಿಕೆಗಿಂತ ಶೇ.೫೦ಕ್ಕೂ ಹೆಚ್ಚು ಮಳೆ ಕೊರತೆಯಾಗಿದ್ದು, ಕೆರೆಗಳು, ಜಲಾಶಯಗಳು ಬರಿದಾಗಿದೆ. ನಮಗೆ ನೀರಿನ ಕೊರತೆಯಿರುವಾಗ ತಮಿಳುನಾಡಿಗೆ ನೀರನ್ನು ಹರಿಸುವುದು ಹೇಗೆ. ಪ್ರಾಧಿಕಾರವೂ ಕನ್ನಡಿಗರಿಗೆ ಮಾರಕವಾದ ಆದೇಶ ಮಾಡಿದೆ. ಕಾವೇರಿ ಪ್ರಾಧಿಕಾರ ಆದೇಶದಂತೆ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ. ಸರಕಾರವೂ ಕೂಡ ಇದಕ್ಕೆ ಬದ್ಧವಾಗಿದ್ದು, ಕನ್ನಡಿಗರ, ರೈತರ ಹಿತ ಕಾಪಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಪ್ರತಿಭಟನಕಾರರು ಅಂಬೇಡ್ಕರ್ ವೃತ್ತದಿಂದ ತಾಲೂಕು ಕಚೇರಿವರೆಗೂ ಜಾಥಾ ಮಾಡುವ ಮೂಲಕ ಪ್ರತಿಭಟನೆ ನಡೆಸಿ, ದೊಡ್ಡಬಳ್ಳಾಪುರ ತಹಶೀಲ್ದಾರ್ ಮಲ್ಲಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಕನ್ನಡ ಜಾಗೃತ ಪರಿಷತ್ತಿನ ಕಾರ್ಯದರ್ಶಿ ಡಿ. ಪಿ. ಆಂಜನೇಯ, ಪರಮೇಶ್, ಕನ್ನಡಪಕ್ಷದ ತಾಲೂಕು ಅಧ್ಯಕ್ಷ ವೆಂಕಟೇಶ್, ಮಂಜು, ಶಂಕರ್, ಫಯಾಜ್ , ಭಾಸ್ಕರ್, ಸುರೇಶ್, ಚೌಡರಾಜು ಸೇರಿದಂತೆ ಕನ್ನಡ ಪರ ಸಂಘಟನೆಗಳ ಹೋರಾಟಗಾರರು ಭಾಗಿಯಾಗಿದ್ದರು.



