ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಹೊಳಲ್ಕೆರೆ ತಾಲ್ಲೂಕು ಈಚಘಟ್ಟ ಗ್ರಾಮದಲ್ಲಿ ಗೋಮಾಳ ಜಮೀನಿನಲ್ಲಿ ಸೋಲಾರ್ ಪ್ಲಾಂಟ್ ಅಳವಡಿಸುತ್ತಿರುವುದನ್ನು ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಕರಿಯಪ್ಪ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಈಚಘಟ್ಟ ಗ್ರಾಮದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರೆ ಜಾಸ್ತಿಯಾಗಿದ್ದು, ಜಾನುವಾರುಗಳ ಮೇವಿಗಾಗಿ ಉಳಿಸಿಕೊಂಡಿರುವ ಗೋಮಾಳದಲ್ಲಿ ಸೋಲಾರ್ ಪ್ಲಾಂಟ್ ಅಳವಡಿಸುವುದು ಬೇಡ. ಪ್ರಭಾವಿಗಳು ಪೊಲೀಸರ ಮೂಲಕ ನಮಗೆ ಬೆದರಿಕೆ ಹಾಕಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಗೋಮಾಳ ಜಮೀನನ್ನು ಬಿಟ್ಟುಕೊಡುವುದಿಲ್ಲ. ಜಿಲ್ಲಾಧಿಕಾರಿ ಒಮ್ಮೆ ಈಚಘಟ್ಟ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ವೀಕ್ಷಿಸಬೇಕು. ಇಲ್ಲವಾದಲ್ಲಿ ನಮ್ಮ ಹೋರಾಟ ನಿರಂತರವಾಗಿರುತ್ತದೆಂದು ಎಚ್ಚರಿಸಿದರು.
ನ್ಯಾಯವಾದಿ ಈಚಘಟ್ಟದ ಅಶ್ವಿನಿ ಮಾತನಾಡಿ ಹಿಂದಿನಿಂದಲೂ ಗೋಮಾಳ ಜಮೀನನ್ನು ಜಾನುವಾರುಗಳ ಮೇವಿಗಾಗಿ ಉಳಿಸಿಕೊಂಡು ಬರಲಾಗಿದೆ. ಈಗ ಏಕಾಏಕಿ ಅಲ್ಲಿ ಸೋಲಾರ್ ಪ್ಲಾಂಟ್ ಅಳವಡಿಸಲು ಮುಂದಾಗಿರುವುದಕ್ಕೆ ನಾವುಗಳು ಅವಕಾಶ ಕೊಡುವುದಿಲ್ಲ. ಎಸ್ಸಿ, ಎಸ್ಟಿ.ಗಳೆ ಹೆಚ್ಚು ವಾಸಿಸುತ್ತಿರುವ ಈ ಗ್ರಾಮದಲ್ಲಿ ಜಾನುವಾರುಗಳೆ ಜೀವನಕ್ಕೆ ಆಧಾರವಾಗಿದೆ. ಗೋಮಾಳ ಜಮೀನು ರಕ್ಷಣೆಯೆ ನಮ್ಮ ಗುರಿ. ಈ ಹಿಂದೆ ಅನೇಕ ಬಾರಿ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಪಾದಿಸಿದರು.
ಈಚಘಟ್ಟದ ಕೆ.ಜಯಣ್ಣ, ತಿಪ್ಪೇಸ್ವಾಮಿ, ಟಿ.ಗೀತಾ, ಸಿ.ಬಿ.ಭಾಗ್ಯ, ಪದ್ಮ, ಎಂ.ಗಂಗಮ್ಮ, ರತ್ನಮ್ಮ, ಜಯಮ್ಮ, ಮಹಾರುದ್ರಪ್ಪ, ಮಲ್ಲೇಶಪ್ಪ, ತಿಪ್ಪೇಶಿ, ವೀರೇಶ, ಭದ್ರಪ್ಪ, ನ್ಯಾಯವಾದಿ ಓ.ಪ್ರತಾಪ್‌ಜೋಗಿ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.




