ಚಂದ್ರವಳ್ಳಿ ನ್ಯೂಸ್, ಕಲಬುರಗಿ:
ಕಳೆದ ಎರಡು ವರ್ಷಗಳಿಂದ ಕಲಬುರಗಿ ಜಿಲ್ಲಾ ಅಪರಾಧ ದಾಖಲೆಗಳ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಬ್ ಇನ್ಸ್‌ಪೆಕ್ಟರ್ ಬಸವರಾಜ ಹೆರೂರ್ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಗರದಲ್ಲಿ ಸಂಭವಿಸಿದೆ.
2014ರ ಬ್ಯಾಚ್‌ನ ದಕ್ಷ ಅಧಿಕಾರಿಯಾಗಿದ್ದ ಬಸವರಾಜ ಅವರ ಈ ದಿಢೀರ್ ನಡೆ ಪೊಲೀಸ್ ವಲಯದಲ್ಲಿ ತೀವ್ರ ಕೌತುಕ ಹಾಗೂ ವಿಷಾದವನ್ನು ಮೂಡಿಸಿದೆ.
ಆತ್ಮಹತ್ಯೆಗೂ ಮುನ್ನ ಸ್ನೇಹಿತನಿಗೆ ಫೋನ್ ಕರೆ!
ಮಂಗಳವಾರ ತಡರಾತ್ರಿ ಪಿಎಸ್‌ಐ ಬಸವರಾಜ ಹೆರೂರ್ ಅವರು ತಮ್ಮ ಆತ್ಮೀಯ ಸ್ನೇಹಿತನಿಗೆ ಕರೆ ಮಾಡಿ, ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದರು. ಇದರಿಂದ ಆತಂಕಗೊಂಡ ಸ್ನೇಹಿತ ತಕ್ಷಣವೇ ಬಸವರಾಜ ಅವರ ತಂದೆಗೆ ವಿಷಯ ಮುಟ್ಟಿಸಿದ್ದಾರೆ. ತಂದೆ ಗಾಬರಿಯಿಂದ ಓಡೋಡಿ ಬಂದು ಮನೆಯ ಬಾಗಿಲು ಮುರಿದು ಒಳಪ್ರವೇಶಿಸಿದಾಗ, ಅಷ್ಟರಲ್ಲೇ ಬಸವರಾಜ ಅವರು ಫ್ಯಾನ್ ಗೆ ನೇಣು ಬಿಗಿದುಕೊಂಡು ಕೊನೆಯುಸಿರೆಳೆದಿದ್ದರು.
ಕೌಟುಂಬಿಕ ಕಲಹದ ಶಂಕೆ:
ಬಸವರಾಜ ಹೆರೂರ್ ಅವರ ಆತ್ಮಹತ್ಯೆಗೆ ನಿಖರವಾದ ಕಾರಣ ಏನೆಂಬುದು ಸದ್ಯಕ್ಕೆ ಲಭ್ಯವಾಗಿಲ್ಲ. ಆದರೆ, ಪ್ರಾಥಮಿಕ ತನಿಖೆಯ ಪ್ರಕಾರ ತೀವ್ರ ಕೌಟುಂಬಿಕ ಕಲಹವೇ ಅವರನ್ನು ಈ ದುಡುಕಿನ ನಿರ್ಧಾರಕ್ಕೆ ಪ್ರೇರೇಪಿಸಿರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಪೊಲೀಸ್ ಕಮಿಷನರ್ ಭೇಟಿ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕಲಬುರಗಿ ನಗರ ಪೊಲೀಸ್ ಆಯುಕ್ತರಾದ ಶರಣಪ್ಪ ಎಸ್. ಡಿ. ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತರ ಕುಟುಂಬಸ್ಥರಿಂದ ಮಾಹಿತಿ ಕಲೆಹಾಕಲಾಗುತ್ತಿದ್ದು, ಸದ್ಯ ಈ ಕುರಿತು ಆರ್. ಜಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಶವಪರೀಕ್ಷೆಯ ನಂತರ ಹೆಚ್ಚಿನ ವಿವರಗಳು ಬೆಳಕಿಗೆ ಬರಬೇಕಿದೆ.



