ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ವಿವಾದ ತಾರಕ್ಕಕ್ಕೇರಿದೆ. ಸ್ಟಿಂಗ್ ಆಪರೇಷನ್ ತನಿಖೆಯ ಹೆಸರಿನಲ್ಲಿ ಜೆಡಿಎಸ್ ಸೋಷಿಯಲ್ ಮೀಡಿಯಾ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಈ ಬೆಳವಣಿಗೆಯಿಂದ ಕೆಂಡಾಮಂಡಲವಾಗಿರುವ ಹೆಚ್ಡಿಕೆ, ತುರ್ತು ಸುದ್ದಿಗೋಷ್ಠಿ ನಡೆಸಿ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
"ಸಂಶಯ ಬಂದರೆ ಕುಮಾರಸ್ವಾಮಿಯವರನ್ನೇ ವಿಚಾರಣೆಗೆ ಕರೆಸುತ್ತೇವೆ" ಎಂದು ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ, ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಇದೇ ವೇಳೆ ಎಚ್ಚರಿಕೆ ನೀಡಿರುವ ಕುಮಾರಸ್ವಾಮಿ ಅವರು, "ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ್ ಖರ್ಗೆ ಅವರದ್ದೇ ಆದ ಸ್ಟಿಂಗ್ ಆಪರೇಷನ್ ವಿಡಿಯೋಗಳು ಹೊರಬರಬಹುದು" ಎಂದು ಗುಡುಗಿದ್ದಾರೆ. ಸ್ನೇಹಿತರು ಕಳುಹಿಸಿದ ವಾಟ್ಸಾಪ್ ಸಂದೇಶವನ್ನು ಆಧರಿಸಿ ಹೆಚ್ಡಿಕೆ ಈ ಸ್ಫೋಟಕ ಹೇಳಿಕೆ ನೀಡಿರುವುದು ಈಗ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ.




