ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ತಪ್ಪು ಸಂದೇಶ ನೀಡುವ ಮೂಲಕ ಕಾಂಗ್ರೆಸ್ ನಾಯಕರು ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಸಂಸದ ಗೋವಿಂದ್ ಎಂ.ಕಾರಜೋಳ ಅವರು ಆರೋಪಿಸಿದರು.
ಇಲ್ಲಿನ ಪತ್ರಕರ್ತರ ಭವನದಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಅಥವಾ ತಿದ್ದುಪಡಿ (SIR) ಎನ್ನುವುದು ಒಂದು ನಿಯಮಬದ್ಧ ಚುನಾವಣಾ ಪ್ರಕ್ರಿಯೆಯಾಗಿದ್ದು, ವೋಟರ್ ಲಿಸ್ಟ್ ಸ್ವಚ್ಛಗೊಳಿಸುವ ಈ ಪ್ರಕ್ರಿಯೆಯ ಬಗ್ಗೆ ತಪ್ಪು ಮಾಹಿತಿ ನೀಡುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ವಿಚಾರವಾಗಿ ಸಂಸದ ಗೋವಿಂದ್ ಕಾರಜೋಳ ಅವರು ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರವಾಗಿ ಟೀಕಿಸಿದ್ದು, ಕಾಂಗ್ರೆಸ್‌ನವರು ಎಸ್.ಐ.ಆರ್. (SIR) ಪ್ರಕ್ರಿಯೆಯ ಮೂಲಕ ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ: ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ದೇಶದ ಯುವಕರನ್ನು ಮತ್ತು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಗೋವಿಂದ್ ಕಾರಜೋಳ ಕಿಡಿಕಾರಿದ್ದಾರೆ.




