ಚಂದ್ರವಳ್ಳಿ ನ್ಯೂಸ್, ಲಕ್ನೋ:
ಅಯೋಧ್ಯೆ ಶ್ರೀರಾಮ ಮಂದಿರದ ದೇಣಿಗೆ ಕಳವು ಪ್ರಕರಣ ಇಡೀ ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ಎಫ್‌ಐಆರ್ ದಾಖಲಿಸುತ್ತಿದ್ದಂತೆಯೇ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಅವರು ನೈತಿಕ ಹೊಣೆ ಹೊತ್ತು ಇಂದು ತಮ್ಮ ಹುದ್ದೆಗಳಿಗೆ ದಿಢೀರ್ ರಾಜೀನಾಮೆ ನೀಡಿದ್ದಾರೆ.
ರಾಮ ಮಂದಿರದಲ್ಲಿ ಅಂದಾಜು 7 ರಿಂದ 7.5 ಕೋಟಿ ರೂಪಾಯಿ ದೇಣಿಗೆ ಕಳುವಾಗಿದೆ ಎಂದು ಅಯೋಧ್ಯೆಯ ಸಮಾಜವಾದಿ ಪಕ್ಷದ ಮಾಜಿ ಶಾಸಕ ಪವನ್ ಪಾಂಡೆ ಗಂಭೀರ ಆರೋಪ ಮಾಡಿದ ಬಳಿಕ ಈ ಬೃಹತ್ ಕಾನೂನು ಕ್ರಮ ಜರುಗಿಸಲಾಗಿದೆ. ಟ್ರಸ್ಟ್‌ನ ಕೋರಿಕೆಯ ಮೇರೆಗೆ ರಾಜ್ಯ ಸರ್ಕಾರ ಜೂನ್ 14ರಂದು ಮೂವರು ಸದಸ್ಯರ ಎಸ್‌ಐಟಿ ತಂಡವನ್ನು ರಚಿಸಿತ್ತು.
8 ಮಂದಿ ಅಟ್ಯಾಚ್, ಕಠಿಣ ಕಾಯ್ದೆಗಳಡಿ ಕೇಸ್ ದಾಖಲು!:
ಎಸ್‌ಐಟಿ ನೀಡಿದ ಪ್ರಾಥಮಿಕ ವರದಿಯ ಆಧಾರದ ಮೇಲೆ ಉತ್ತರ ಪ್ರದೇಶ ಸರ್ಕಾರ ಎಫ್‌ಐಆರ್ ದಾಖಲಿಸಿಕೊಂಡು ತಕ್ಷಣವೇ ಕಾರ್ಯಾಚರಣೆಗಿಳಿದಿದ್ದು, ಸದ್ಯ 8 ಮಂದಿ ಆರೋಪಿಗಳನ್ನು ಬಂಧಿಸಿದೆ.
ಬಂಧಿತ ಆರೋಪಿಗಳು: ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು, ಅನುಕಲ್ಪ್ ಮಿಶ್ರಾ, ಅವಿನಾಶ್ ಶುಕ್ಲಾ, ಕರುಣೇಶ್ ಪಾಂಡೆ, ಮನೀಶ್ ಯಾದವ್, ಲವಕುಶ್ ಮಿಶ್ರಾ, ರಾಮ ಶಂಕರ್ ಮಿಶ್ರಾ ಮತ್ತು ಸುಭಾಷ್ ಶ್ರೀವಾಸ್ತವ.
ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ಗಳು: ಆರೋಪಿಗಳ ವಿರುದ್ಧ ಅತ್ಯಂತ ಕಠಿಣವಾದ ಬಿಎನ್‌ಎಸ್‌ನ ಸೆಕ್ಷನ್ 306, 316(5), 317(4), 317(5), 61 ಮತ್ತು 3(5) ರ ಅಡಿಯಲ್ಲಿ ಪ್ರಕರಣಗಳನ್ನು ಹೂಡಲಾಗಿದೆ.
ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ; ಸಿಎಂ ಯೋಗಿ ಎಚ್ಚರಿಕೆ:
ಎಸ್‌ಐಟಿ ಪ್ರಾಥಮಿಕ ವರದಿ ನೀಡಿದ ಬಳಿಕ ಡಿಯೋರಿಯಾದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಾರ್ವಜನಿಕ ನಂಬಿಕೆಗೆ ಹಾಗೂ ಭಕ್ತರ ಭಾವನೆಗೆ ಧಕ್ಕೆ ತರುವವರ ವಿರುದ್ಧ ರಾಜ್ಯ ಸರ್ಕಾರ 'ಶೂನ್ಯ ಸಹಿಷ್ಣುತೆ' ನೀತಿಯನ್ನು ಅಳವಡಿಸಿಕೊಳ್ಳುತ್ತದೆ ಎಂದು ಕಡಕ್ ಎಚ್ಚರಿಕೆ ನೀಡಿದ್ದಾರೆ. ಭ್ರಷ್ಟಾಚಾರ ಎಸಗಿದ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಾಮಭಕ್ತರ ಮೇಲೆ ಗುಂಡು ಹಾರಿಸಿದವರು ಈಗ ರಾಜಕೀಯ ಮಾಡುತ್ತಿದ್ದಾರೆ!: ಇದೇ ವೇಳೆ ದೇಣಿಗೆ ಕಳವು ಪ್ರಕರಣವನ್ನು ಅಸ್ತ್ರವಾಗಿಸಿಕೊಂಡು ಟೀಕಿಸುತ್ತಿರುವ ವಿರೋಧ ಪಕ್ಷಗಳ ವಿರುದ್ಧ ಸಿಎಂ ಯೋಗಿ ಆದಿತ್ಯನಾಥ್ ತೀವ್ರ ವಾಗ್ದಾಳಿ ನಡೆಸಿದರು:
"ಯಾರು ಈ ಹಿಂದೆ ಭಗವಾನ್ ರಾಮನ ಅಸ್ತಿತ್ವವನ್ನೇ ನಿರಾಕರಿಸಿದ್ದರೋ, ರಾಮ ಹುಟ್ಟಿಯೇ ಇಲ್ಲ ಎಂದು ನ್ಯಾಯಾಲಯದಲ್ಲಿ ವಕೀಲರ ಸೈನ್ಯವನ್ನು ನಿಲ್ಲಿಸಿದ್ದರೋ, ಅಯೋಧ್ಯೆಯ ಮಹತ್ವವನ್ನೇ ಅಳಿಸಲು ಯತ್ನಿಸಿದ್ದರೋ ಅಂತಹವರು ಇಂದು ರಾಜಕೀಯ ಲಾಭಕ್ಕಾಗಿ ಈ ವಿಷಯವನ್ನು ಎತ್ತುತ್ತಿದ್ದಾರೆ. ಒಂದೆಡೆ ಮಂದಿರ ನಿರ್ಮಾಣವನ್ನು ತಡೆಯಲು ಯತ್ನಿಸಿ, ಮತ್ತೊಂದೆಡೆ 'ಜೈ ಶ್ರೀ ರಾಮ್' ಎಂದು ಜಪಿಸುವ ಭಕ್ತರ ಮೇಲೆ ಗುಂಡು ಹಾರಿಸಿದ ಇತಿಹಾಸ ಹೊಂದಿರುವ ಇವರು ಇಂದು ನೈತಿಕತೆ ಮಾತನಾಡುತ್ತಿರುವುದು ಹಾಸ್ಯಾಸ್ಪದ" ಎಂದು ಸಿಎಂ ತಿರುಗೇಟು ನೀಡಿದರು.
ಟ್ರಸ್ಟ್‌ನ ಪ್ರಮುಖರ ರಾಜೀನಾಮೆ ಹಾಗೂ 8 ಜನರ ಬಂಧನದಿಂದಾಗಿ ಸದ್ಯ ಅಯೋಧ್ಯೆಯ ಆಡಳಿತ ಮಂಡಳಿಯಲ್ಲಿ ಮತ್ತು ರಾಜಕೀಯ ವಲಯದಲ್ಲಿ ಭಾರೀ ತಲ್ಲಣ ಉಂಟಾಗಿದೆ.



