Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ರಂಗಸಿರಿ ನೆನಪಿನ ಮೆರವಣಿಗೆ–4

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಂಗಸಿರಿ ನೆನಪಿನ ಮೆರವಣಿಗೆ
–4
ಬಿಹಾರದಲ್ಲಿ ರಂಗಸಿರಿಯ ‘ಮನೆ’ ಕನಸು 

ರಂಗಸಿರಿ ಎನ್ನುವುದು ಕೇವಲ ಒಂದು ರಂಗತಂಡವಾಗಿರಲಿಲ್ಲ. ಅದು ನಮ್ಮ ಬದುಕಿನ ಒಂದು ಭಾಗವಾಗಿತ್ತು. ರಂಗಭೂಮಿಯ ಮೇಲಿನ ಪ್ರೀತಿ, ಗೆಳೆತನ, ಹುಮ್ಮಸ್ಸು, ಸಾಹಸ—ಇವೆಲ್ಲವೂ ಒಟ್ಟಾಗಿ ಬೆಸೆದುಕೊಂಡಿದ್ದ ಒಂದು ಸುಂದರ ಲೋಕ.

Advertisement

ಅಂತಹ ರಂಗಸಿರಿಯ ದಿನಗಳಲ್ಲಿ ಬಿಹಾರದ ಪಾಟ್ನಾದಲ್ಲಿ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದೆ ಎಂಬ ಸುದ್ದಿ ನಮಗೆ ತಲುಪಿದಾಗ, ನಮ್ಮೊಳಗೆ ಹೊಸದೊಂದು ಸಂಚಲನ ಶುರುವಾಯಿತು.

ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಚಂಪ ಅವರ ‘ಮನೆ’ ಏಕಾಂಕ ನಾಟಕವನ್ನು ಬಿಹಾರಕ್ಕೆ ತೆಗೆದುಕೊಂಡು ಹೋಗಬೇಕು ಎಂದು ರಂಗಸಿರಿ ನಿರ್ಧರಿಸಿತು. ರಂಗಕರ್ಮಿ ಕೆ.ಸಣ್ಣೇಗೌಡರು ಈ ನಾಟಕ ನಿರ್ದೇಶನ ಮಾಡಿದ್ದರು.

ಇಂದಿನಂತೆ ವಿಮಾನದಲ್ಲಿ ಹಾರಿಹೋಗುವ ಕಾಲ ಅದಲ್ಲ. ಬಿಹಾರವೆಂದರೆ ನಮಗೆ ಬಹುದೂರದ ಕನಸಿನ ಊರು. ಹಾಗಾಗಿ ನಮ್ಮ ಬಜೆಟ್ಬಗೆ ತಕ್ಕಂತೆ ರೈಲಿನಲ್ಲೇ ಹೋಗೋಣ ಎಂದು ತೀರ್ಮಾನಿಸಿದೆವು.

ಪಾಟ್ನಾಕ್ಕೆ ಹೋಗಬೇಕೆಂದರೆ ಮುಂಚಿತವಾಗಿಯೇ ರೈಲು ಟಿಕೆಟ್ ಕಾಯ್ದಿರಿಸಬೇಕಿತ್ತು. ತಿಂಗಳ ಮೊದಲೇ ರಿಸರ್ವೇಶನ್ ಮಾಡಿಸಲು ನಾನು ಮತ್ತು ಶಾಡ್ರಾಕ್ ರೈಲ್ವೆ ಸ್ಟೇಷನ್ ಗೆ ಎಡತಾಕಿದೆವು.

ರೈಲ್ವೆ ಅಧಿಕಾರಿಗಳೊಂದಿಗೆ ಮಾತನಾಡಿ, ತಂಡದ ಎಲ್ಲರಿಗೂ ಟಿಕೆಟ್ ವ್ಯವಸ್ಥೆ ಮಾಡಿಸುವ ಜವಾಬ್ದಾರಿಯನ್ನು ಬಹುಪಾಲು ನಾನೇ ಹೊತ್ತುಕೊಂಡಿದ್ದೆ. ಎಲ್ಲ ಸೀಟು ಕನಫರ್ಮು ಮಾಡಿಸಿದ್ದು ಆಯ್ತು. ಕೊನೆಗೂ ಆ ದಿನ ಬಂತು.

ರಂಗಸಿರಿಯ ತಂಡ ಬಿಹಾರದತ್ತ ಹೊರಟಿತು:
‘ಮನೆ’ ಏಕಾಂಕ ನಾಟಕ. ಇಬ್ಬರೇ ಪಾತ್ರಧಾರಿಗಳು. ಅಣ್ಣಾಜಿ ಮತ್ತು ಶಿವಣ್ಣ ಇಡೀ ನಾಟಕವನ್ನು ತಮ್ಮ ಅಭಿನಯದಿಂದ ಹೊತ್ತುಕೊಂಡು ಹೋಗುತ್ತಿದ್ದರು. ಅವರಿಬ್ಬರ ಜೋಡಿ ಪಗಡದಸ್ತ್ ಜೋಡಿಯಂತಿತ್ತು. ವೇದಿಕೆಯ ಮೇಲೆ ಇಬ್ಬರೇ ಇದ್ದರೂ, ಪ್ರೇಕ್ಷಕರಿಗೆ ಇಡೀ ಮನೆಯೊಂದು ಜೀವಂತವಾಗಿಬಿಡುತ್ತಿತ್ತು.

ಸಂಗೀತದಲ್ಲಿ ಜಯಂಶಂಕರ ಅವರ ಕೊಳಲು ನೆನಪಾಗುತ್ತದೆ. ಉಳಿದಂತೆ ನಮ್ಮೆಲ್ಲರ ಕೆಲಸ ತೆರೆಯ ಹಿಂದಿನದು.

ಕೆ.ಸಣ್ಣೇಗೌಡ, ಅಪ್ಪಾಜಿಗೌಡ, ರಂಗಸ್ವಾಮಿ, ಶಂಕರೇಗೌಡ, ಕೋರ್ಟ್ ಸತೀಶ್, ಭಾರತೀಶ್, ನರಸಿಂಹಗೌಡ, ಹಿರಿಯಣ್ಣ ಸೇರಿದಂತೆ ಹಲವರು ಬಿಹಾರದ ಪ್ರಯಾಣಕ್ಕೆ ಸಿದ್ಧರಾಗಿದ್ದೆವು. ಆದರೆ ನಮ್ಮ ಬಳಗದಲ್ಲಿ ಒಬ್ಬರ ಕೊರತೆ ಮಾತ್ರ ಎಲ್ಲರಿಗೂ ಕಾಡುತ್ತಿತ್ತು. ಅದು ಪಿ. ಶಾಡ್ರಾಕ್.

ಆಗಷ್ಟೇ ಸಿಎಸ್‌ಐ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಶಾಡ್ರಾಕ್ ಅವರಿಗೆ ಬಿಹಾರಕ್ಕೆ ಬರಲು ನಾನಾ ಕಾರಣಕ್ಕೆ ಸಾಧ್ಯವಾಗಲಿಲ್ಲ.
ರೈಲು ಹೊರಟ ಕ್ಷಣದಿಂದ ಪಾಟ್ನಾದಲ್ಲಿ ಇಳಿಯುವವರೆಗೂ ನಮ್ಮದೇ ಒಂದು ಪ್ರಪಂಚ.

ರಂಗಗೀತೆಗಳು, ಹಾಡುಗಳು, ತಮಾಷೆ, ಹರಟೆ, ನಗು—ಎರಡು ದಿನಗಳ ಆ ರೈಲು ಪ್ರಯಾಣ ಯಾವತ್ತೂ ಮರೆಯಲಾಗದ ನೆನಪಾಗಿ ಉಳಿದಿದೆ.

ದಾರಿಯಲ್ಲಿ ಪ್ರಮುಖ ರೈಲು ನಿಲ್ದಾಣ ಬಂದರೆ ಸಾಕು. ಕಾಫಿ, ಟೀ, ಊಟ, ತಿಂಡಿಗಾಗಿ ನಮ್ಮ ಪರದಾಟ ನೋಡಬೇಕಿತ್ತು. ರೈಲು ಪ್ರಯಾಣಕ್ಕಿಂತಲೂ ನಿಲ್ದಾಣಗಳಲ್ಲಿ ನಡೆಯುತ್ತಿದ್ದ ನಮ್ಮ ‘ತಿಂಡಿ ಹುಡುಕಾಟ’ವೇ ಒಂದು ಪ್ರತ್ಯೇಕ ನಾಟಕ!.

ಹಾಗೂ ಹೀಗೂ ಕೊನೆಗೂ ಪಾಟ್ನಾ ತಲುಪಿದೆವು:
ಅಲ್ಲಿ ನಮಗೆ ಯೂತ್ ಹಾಸ್ಟೆಲ್‌ನಲ್ಲಿ ವಸತಿ ವ್ಯವಸ್ಥೆಯಾಗಿತ್ತು. ರೂಮ್ ವ್ಯವಸ್ಥೆ ಹೇಗಿತ್ತೆಂದರೆ—ದೇವರಿಗೇ ಪ್ರೀತಿ!..

ಹೊರಗೆ ಹೋಟೆಲ್‌ನಲ್ಲಿ ಉಳಿದುಕೊಳ್ಳುವಷ್ಟು ಹಣ ನಮ್ಮ ಬಳಿ ಇರಲಿಲ್ಲ. ಇದ್ದ ವ್ಯವಸ್ಥೆಯಲ್ಲೇ ಹೊಂದಿಕೊಂಡೆವು. ರಂಗಸಿರಿಯವರು ಎಲ್ಲಿ ಹೋದರೂ ಹೊಂದಿಕೊಳ್ಳುವುದನ್ನು ಕಲಿತವರಲ್ಲವೇ?.

ರೈಲಿನಲ್ಲಿ ಎರಡು ದಿನ ಕಳೆಯುವುದರೊಳಗೆ ಊಟ ಒಗ್ಗುತ್ತಿರಲಿಲ್ಲ.
ಮೂರು ದಿನ ಕಳೆಯುವುದರೊಳಗೆ ಎಲ್ಲರಿಗೂ ಊಟದ ಮೇಲೆ ವಾಕರಿಕೆ ಶುರುವಾಯಿತು.

ಯಾವ ಹೋಟೆಲ್‌ಗೆ ಹೋದರೂ ನಮ್ಮೂರಿನ ಊಟ, ತಿಂಡಿ ಸಿಗುತ್ತಿರಲಿಲ್ಲ. ಕೊನೆಗೆ, “ಸಾಕು, ನಾವೇ ಅಡುಗೆ ಮಾಡೋಣ”ಎಂದು ನಿರ್ಧರಿಸಿದೆವು.

ಯೂತ್ ಹಾಸ್ಟೆಲ್‌ನವರು ಪಾತ್ರೆಗಳನ್ನು ಕೊಡಲು ಒಪ್ಪಿದರು. ಅಕ್ಕಿ, ರವೆ, ಈರುಳ್ಳಿ, ಮೆಣಸಿನಕಾಯಿ ಸೇರಿದಂತೆ ಅಡುಗೆಗೆ ಬೇಕಾದ ಸಾಮಾನುಗಳನ್ನೆಲ್ಲ ಕೊಂಡು ತಂದೆವು.

ನಮ್ಮ ಕೈಯಿಂದ ಮಾಡಿಕೊಂಡ ಅಡುಗೆ ತಾನೇ!:
ಎಲ್ಲರೂ ಚಪ್ಪರಿಸಿಕೊಂಡು ಊಟ ಮಾಡಿದೆವು. ಹಲವು ದಿನಗಳಿಂದ ಹುಡುಕುತ್ತಿದ್ದ ನಮ್ಮೂರಿನ ರುಚಿ ಕೊನೆಗೂ ನಾಲಿಗೆಗೆ ಸಿಕ್ಕಂತಾಯಿತು. ಹೊಟ್ಟೆ ತುಂಬಿದ ಮೇಲೆ ನೆಮ್ಮದಿಯ ನಿದ್ದೆ.

ಅದೇ ಯೂತ್ ಹಾಸ್ಟೆಲ್ ನಮ್ಮ ವಾಸ್ತವ್ಯ ಮಾತ್ರವಲ್ಲ, ನಮ್ಮ ನಾಟಕದ ರಿಹರ್ಸಲ್ಲು ಜಾಗವೂ ಆಗಿತ್ತು. ಅಲ್ಲಿಯೇ ‘ಮನೆ’ ನಾಟಕದ ರಿಹರ್ಸಲ್ ನಡೆಯುತ್ತಿತ್ತು. ಸರ್ಕಾರಿ ನೌಕರರ ಸಂಘ ಆಯೋಜಿಸಿದ್ದ ರಾಷ್ಟ್ರೀಯ ನಾಟಕೋತ್ಸವದ ಸ್ಥಳಕ್ಕೂ ಹೋಗಿ ಅಲ್ಲಿ ಅಭ್ಯಾಸ ಮಾಡಿದೆವು.

ಆದರೆ ನಮ್ಮೊಳಗೆ ಒಂದು ಆಸೆ ಮಾತ್ರ ಇತ್ತು: “ನಮ್ಮ ಕನ್ನಡದ ನಾಟಕವನ್ನು ಪಾಟ್ನಾದಲ್ಲಿರುವ ಕನ್ನಡಿಗರು ಬಂದು ನೋಡಬೇಕು.”
ಅದಕ್ಕಾಗಿ ಏನು ಮಾಡಬೇಕು ಎಂದು ಯೋಚಿಸುತ್ತಿದ್ದೆ. ಆಗ ಅಪ್ಪಾಜಿಗೌಡರು, “ಶಿವಾನಂದ್, ನೀವೇ ಏನಾದರೂ ಮಾಡಿ” ಎಂದರು.

ಪಾಟ್ನಾದಲ್ಲಿ ಆಕಾಶವಾಣಿ ಎಲ್ಲಿದೆ ಎಂದು ವಿಚಾರಿಸಿಕೊಂಡು ಆಟೋ ಹತ್ತಿ ಅಲ್ಲಿಗೆ ಹೋದೆ. ನಮ್ಮ ಉದ್ದೇಶವನ್ನು ವಿವರಿಸಿ, ಪಾಟ್ನಾದಲ್ಲಿರುವ ಕನ್ನಡಿಗರ ದೂರವಾಣಿ ಸಂಖ್ಯೆ ಬೇಕು ಎಂದು ಕೇಳಿದೆ.
ಅಲ್ಲಿನವರು ನಮಗೆ ಎರಡು ಕನ್ನಡ ಸಂಘಗಳ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ನೀಡಿದರು.

ಆ ಕ್ಷಣದಲ್ಲಿ ನಮಗೆ ಆದ ಸಂತೋಷ ಅಷ್ಟಿಷ್ಟಲ್ಲ:
ಕನ್ನಡಿಗರನ್ನು ಸಂಪರ್ಕಿಸಿದಾಗ ಅವರು, “ನಾಟಕದ ದಿನವೇ ಹೇಳುತ್ತಿದ್ದೀರಲ್ಲ! ಮೊದಲೇ ಹೇಳಿದ್ದರೆ ನಮ್ಮ ಇಡೀ ಬಳಗವೇ ಬರುತ್ತಿತ್ತು” ಎಂದರು.

news_1790686360_5_742.webp

 

news_1790686360_6_670.webp

 

ಆದರೂ ಸಂಘದ ಪದಾಧಿಕಾರಿಗಳು ಬರುತ್ತೇವೆ ಎಂದು ಹೇಳಿ ನಾಟಕ ನೋಡಲು ಬಂದರು. ಅದು ನಮಗೆ ದೊಡ್ಡ ಸಂತೋಷ: ನಮ್ಮ ಭಾಷೆ, ನಮ್ಮ ನಾಟಕ, ನಮ್ಮ ಜನ—ಇಷ್ಟು ದೂರ ಬಿಹಾರದಲ್ಲೂ ನಮ್ಮನ್ನು ಕಾಯುತ್ತಿದ್ದಾರೆ ಎಂಬ ಭಾವನೆ ಮೂಡಿತ್ತು.

‘ಮನೆ’ಗೆ ಹಸಿರು ಸಿಂಗಾರ: ನಾಟಕ ಪ್ರದರ್ಶನದ ದಿನ.
‘ಮನೆ’ ನಾಟಕಕ್ಕೆ ಇನ್ನಷ್ಟು ನೈಜತೆಯ ಸೊಗಡು ಬರಬೇಕು ಎಂದು ಯೋಚಿಸಿದೆವು. ಸ್ಟೇಜ್ ಮೇಲೆ ಮರ-ಗಿಡಗಳ ಹಸಿರು ಇರಬೇಕು ಎಂದು ನಿರ್ಧರಿಸಿದೆವು.

ಅಪ್ಪಾಜಿಗೌಡರು ಕೂಡ ಒಪ್ಪಿದರು. ಅಲ್ಲಿದ್ದ ಒಂದು ಮರದ ಕೊಂಬೆಯನ್ನು ಕಡಿದು ತಂದು ವೇದಿಕೆಯ ಮೇಲೆ ಇಟ್ಟೆವು. ಆ ಒಂದು ಕೊಂಬೆ ಇಡೀ ವೇದಿಕೆಯ ರೂಪವನ್ನೇ ಬದಲಿಸಿಬಿಟ್ಟಿತು. ‘ಮನೆ’ಗೆ ನಿಜಕ್ಕೂ ಒಂದು ಮನೆತನದ ಸೊಗಡು ಬಂದಿತ್ತು. ನಾಟಕ ಅದ್ಭುತವಾಗಿ ನಡೆಯಿತು. ನಾಟಕ ಮುಗಿಯಿತು.

ಇನ್ನು ಯಾರಾದರೂ ಬಂದು ನಾಟಕದ ಬಗ್ಗೆ ಮಾತನಾಡಬಹುದು ಎಂದು ನಾವು ವೇದಿಕೆಯತ್ತ ನೋಡುತ್ತಾ ನಿಂತಿದ್ದೆವು. ಅಷ್ಟರಲ್ಲಿ ಒಬ್ಬ ಮಹಿಳೆ ನೇರವಾಗಿ ವೇದಿಕೆಯ ಮೇಲೆ ಬಂದರು. ಮೊದಲು ಹಿಂದಿಯಲ್ಲಿ ಮಾತನಾಡಿದರು. ನಂತರ… ಕನ್ನಡದಲ್ಲಿ ಮಾತನಾಡತೊಡಗಿದರು!. ನಮ್ಮ ಕಣ್ಣುಗಳನ್ನು ನಾವೇ ನಂಬಲಾಗಲಿಲ್ಲ. ಬಿಹಾರದ ಪಾಟ್ನಾದಲ್ಲಿ, ನಮ್ಮ ಕನ್ನಡ ನಾಟಕದ ವೇದಿಕೆಯ ಮೇಲೆ ಕನ್ನಡದ ಮಾತು!. ನಂತರ ತಿಳಿಯಿತು—ಅವರು ಬಿಹಾರದಲ್ಲಿದ್ದ ಒಬ್ಬ ಐಎಎಸ್ ಅಧಿಕಾರಿಯ ಪತ್ನಿ. ಮೂಲತಃ ಮೈಸೂರಿನವರು.

ಆ ಕ್ಷಣದ ಸಂತೋಷವನ್ನು ಮಾತಿನಲ್ಲಿ ಹೇಳುವುದು ಕಷ್ಟ: ದೂರದ ಬಿಹಾರದಲ್ಲಿ ಕನ್ನಡದ ಧ್ವನಿ ಕೇಳಿದಾಗ, ನಮ್ಮೆಲ್ಲರ ಮನಸ್ಸು ತುಂಬಿಬಂದಿತ್ತು. ಅವರು ವೇದಿಕೆಯ ಮೇಲೆಯೇ ಕನ್ನಡದಲ್ಲಿ ಮಾತನಾಡಿ ನಮ್ಮನ್ನು ಬೆನ್ನು ತಟ್ಟಿದ ಆ ಕ್ಷಣ, ರಂಗಸಿರಿಯ ನೆನಪುಗಳ ಪೆಟ್ಟಿಗೆಯಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ.

ಬಿಹಾರಕ್ಕೆ ಬಂದ ಮೇಲೆ ಸುಮ್ಮನೆ ಹಿಂದಿರುಗುವುದು ಹೇಗೆ?: ನಾಟಕೋತ್ಸವಕ್ಕೆ ಬಂದ ಮೇಲೆ ಬಿಹಾರವನ್ನು ನೋಡದೆ ವಾಪಸ್ ಹೋಗಲು ನಮ್ಮಿಂದ ಸಾಧ್ಯವೇ?.
ಬುದ್ಧಗಯಾ, ರತ್ನಗಿರಿ, ಸೇರಿದಂತೆ ಹಲವು ಪ್ರವಾಸಿ ತಾಣಗಳನ್ನು ನೋಡಿದೆವು. ಪಾಟ್ನಾದ ಬೃಹತ್ ಗ್ರಂಥಾಲಯ ಸೇರಿದಂತೆ ಹಲವು ಸ್ಥಳಗಳನ್ನು ಸುತ್ತಾಡಿದೆವು. ಒಂದು ರಾತ್ರಿ ರಸ್ತೆಯಲ್ಲಿ ಹೋಗುತ್ತಿದ್ದಾಗ, ಕುದುರೆಯ ಮೇಲೆ ಮದುವೆ ಗಂಡನ್ನು ಕರೆದುಕೊಂಡು ಹೋಗುತ್ತಿದ್ದ ಮೆರವಣಿಗೆ ಎದುರಾಯಿತು.

ಅದನ್ನು ನೋಡಿದ ನಮಗೆ ಸುಮ್ಮನೆ ನಿಂತುಕೊಳ್ಳಲು ಸಾಧ್ಯವಾಗಲಿಲ್ಲ. ನಾವೂ ಆ ಮೆರವಣಿಗೆಯ ಜೊತೆಗೆ ಸೇರಿಕೊಂಡೆವು. ಅವರ ಜೊತೆ ಕುಣಿದೆವು.

ಅವರ ಸಂಭ್ರಮ ನಮ್ಮದಾಯಿತು. ಅವರ ಮದುವೆಯ ಮೆರವಣಿಗೆಯಲ್ಲಿ ಅಪರಿಚಿತರಾಗಿದ್ದ ನಾವು ಕೆಲವೇ ಕ್ಷಣಗಳಲ್ಲಿ ಅವರವರಾದೆವು. ಆ ದಿನ ಬಿಹಾರದಲ್ಲಿ ನಾವು ಕೇವಲ ಒಂದು ನಾಟಕ ಪ್ರದರ್ಶಿಸಲಿಲ್ಲ. ರಂಗಸಿರಿಯ ‘ಮನೆ’ಯನ್ನು ಬಿಹಾರದ ನೆಲದಲ್ಲಿ ಕಟ್ಟಿದ್ದೆವು.

ರೈಲಿನ ಎರಡು ದಿನಗಳ ನಗು, ಪಾಟ್ನಾದ ಯೂತ್ ಹಾಸ್ಟೆಲ್‌ನ ಸರಳ ಬದುಕು, ನಮ್ಮ ಕೈಯ ಅಡುಗೆಯ ರುಚಿ, ಕನ್ನಡಿಗರನ್ನು ಹುಡುಕಿಕೊಂಡು ಹೋದ ಸಾಹಸ, ವೇದಿಕೆಯ ಮೇಲಿನ ‘ಮನೆ’, ಮೈಸೂರಿನ ಆ ಮಹಿಳೆಯ ಕನ್ನಡದ ಮಾತು, ಬುದ್ಧಗಯಾದ ನೆನಪು, ಅಪರಿಚಿತರ ಮದುವೆ ಮೆರವಣಿಗೆಯಲ್ಲಿ ನಮ್ಮ ಕುಣಿತ…

ಇವೆಲ್ಲವೂ ಸೇರಿ ಬಿಹಾರದ ಆ ಪ್ರವಾಸವನ್ನು ನಮ್ಮ ಬದುಕಿನ ಒಂದು ಮರೆಯಲಾಗದ ರಂಗಪ್ರಯಾಣವನ್ನಾಗಿ ಮಾಡಿವೆ. ಇಷ್ಟು ವರ್ಷಗಳ ನಂತರವೂ ‘ಮನೆ’ ನಾಟಕದ ಮಾತು ಬಂದಾಗ, ನನ್ನ ಮನಸ್ಸಿನ ಪರದೆಯ ಮೇಲೆ ಮೊದಲು ಕಾಣಿಸುವುದು ಪಾಟ್ನಾದ ಆ ವೇದಿಕೆಯೇ.

ರಂಗಸಿರಿ ಕಟ್ಟಿದ ಮನೆಗಳು ಇಟ್ಟಿಗೆ-ಸಿಮೆಂಟ್‌ನದ್ದಲ್ಲ; ನೆನಪುಗಳದ್ದು. ರಂಗಸಿರಿ ಮನೆ ನಾಟಕ, ಹಿಂದಿ ಭಾಷೆಯ ಸೊಗಡಿರುವ ಬಿಹಾರ ನೆಲದಲ್ಲಿ ಅರಳಿ ಪ್ರದರ್ಶನಗೊಂಡಿದ್ದ, ಆ ನೆಪದಲ್ಲಿ ರಂಗಸಿರಿ ಗೆಳೆಯರೆಲ್ಲ ಒಟ್ಟಿಗೆ ಪಯಣಿಸಿದ್ದು ಮರೆಯಲಾಗದ ಸಂಗತಿ.
ಲೇಖನ: ಶಿವಾನಂದ ತಗಡೂರು, ರಾಜ್ಯಾಧ್ಯಕ್ಷರು, ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಖ್ಯಮಂತ್ರಿಯವರ ತಾಂತ್ರಿಕ ಸಲಹೆಗಾರರಾಗಿ ನಿವೃತ್ತ ಕಾರ್ಯದರ್ಶಿ ಡಾ. ಕೆ. ಜೈಪ್ರಕಾಶ್ ನೇಮಕಜೆಎನ್‌ಯು ಪ್ರೊಫೆಸರ್ ಹಾಗೂ ಕಾಂಗ್ರೆಸ್ ಸಂಸದರಿಂದ ಲೈಂಗಿಕ ಕಿರುಕುಳ ಆರೋಪ, ಸೇವೆಯಿಂದ ವಜಾಆರ್‌ಬಿಐ ಬಿಗ್ ಶಾಕ್: ರೆಪೋ ದರ ಏರಿಕೆಯಿಂದ ಸಾಲಗಾರರಿಗೆ ಹೆಚ್ಚಳವಾದ ಇಎಂಐ ಬರೆ!ಎಸ್‌ಐಆರ್ ರದ್ದುಪಡಿಸುವಂತೆ ಜನತಾ ನ್ಯಾಯಾಲಯ ಸಮಾವೇಶ: ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹ10 ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ಸುಪಾರಿ - ಶಾಸಕ ಗಣಿಗ ರವಿ ಸ್ಫೋಟಕ ಪೆನ್‌ಡ್ರೈವ್ ಬಾಂಬ್!ಸಚಿವರಿಗೆ ಬಲೆ ಬೀಳಿಸಲು ಯತ್ನ: ಸಿಎಂ ಎಚ್ಚರಿಕೆ ನೀಡಿದ್ದಾರೆ ಎಂದ ಸತೀಶ್ ಜಾರಕಿಹೊಳಿಕೇಂದ್ರದೊಂದಿಗೆ ಜಿಎಸ್‌ಟಿ ಸಭೆ: ರಾಜ್ಯದ ಬಾಕಿ ಹಣದ ಕುರಿತು 'ಸಿಹಿ ಸುದ್ದಿ' ನೀಡಿದ ಸಿಎಂ ಡಿ.ಕೆ ಶಿವಕುಮಾರ್ ಸುಳಿವು!ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಮೊಬೈಲ್ ಪತ್ತೆ ಪ್ರಕರಣ: ಹಿಂಡಲಗಾ ಜೈಲಿಗೆ ಸ್ಥಳಾಂತರಪ್ರತಿಭಟನೆ ಹೆಸರಲ್ಲಿ ಎಲ್ಲವನ್ನೂ ಬಂದ್ ಮಾಡಲು ಆಗದು: ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ದಾವಣಗೆರೆಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ವಕೀಲರ ಪಟ್ಟು: ಮಧ್ಯಕರ್ನಾಟಕದಲ್ಲಿ ತೀವ್ರಗೊಂಡ ಹೋರಾಟ