Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ರಂಗಸಿರಿ ನೆನಪಿನ ಮೆರವಣಿಗೆ…ಜನಪ್ರಿಯತೆಯ ಉತ್ತುಂಗದಲ್ಲಿ ಪಯಣಿಸಿದ ‘ಸಂಗ್ಯಾ-ಬಾಳ್ಯ’

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಂಗಸಿರಿ ನೆನಪಿನ ಮೆರವಣಿಗೆ…

ಜನಪ್ರಿಯತೆಯ ಉತ್ತುಂಗದಲ್ಲಿ
ಪಯಣಿಸಿದ ‘ಸಂಗ್ಯಾ-ಬಾಳ್ಯ’ ನಾಟಕ

Advertisement

ಕೆಲವು ನಾಟಕಗಳು ರಂಗದ ಮೇಲೆ ಮೂಡಿ, ಪ್ರದರ್ಶನ ಮುಗಿದೊಡನೆ ತೆರೆಮರೆಗೆ ಸರಿದುಬಿಡುತ್ತವೆ. ಆದರೆ ಕೆಲವು ನಾಟಕಗಳು ಹಾಗಲ್ಲ. ಅವು ನಮ್ಮ ಬದುಕಿನೊಳಗೆ ಇಳಿದುಬಿಡುತ್ತವೆ. ಗೆಳೆಯರ ನಗುವಿನಲ್ಲಿ, ಹಳೆಯ ಹಾಡುಗಳ ಗುನುಗುವಿಕೆಯಲ್ಲಿ, ಮರೆಯಲಾಗದ ಸಂಭಾಷಣೆಗಳಲ್ಲಿ, ನೆನಪಿನಂಗಳದಲ್ಲಿ ಸದಾ ಜೀವಂತವಾಗಿರುತ್ತವೆ.

ಹಾಸನದ ರಂಗಸಿರಿಯ ‘ಸಂಗ್ಯಾ-ಬಾಳ್ಯ’ ಅಂತಹ ಒಂದು ನಾಟಕ. ಅದು ಕೇವಲ ರಂಗಪ್ರದರ್ಶನವಾಗಿರಲಿಲ್ಲ. ನಮ್ಮ ಸ್ನೇಹದ, ಕನಸುಗಳ, ಪರಿಶ್ರಮದ, ಜಗಳಗಳ, ನಗುವಿನ ಹಾಗೂ ರಂಗಭೂಮಿಯ ಮೇಲಿನ ಅಪಾರ ಪ್ರೀತಿಯ ಜೀವಂತ ಅಧ್ಯಾಯವಾಗಿತ್ತು.

ಒಂದು ಕನಸಿನ ಬೀಜ ಮೊಳಕೆಯೊಡೆದದ್ದು:
ಹೌದು. ‘ಸಂಗ್ಯಾ-ಬಾಳ್ಯ’ ನಾಟಕ ಆಡಿಸಬೇಕು ಎನ್ನುವ ಉಮೇದು ಹುಟ್ಟಿಕೊಂಡಿದ್ದು ನನ್ನ ಮತ್ತು ಪಿ. ಶಾಡ್ರಾಕ್ ಅವರ ನಡುವೆ. ಉತ್ತರ ಕರ್ನಾಟಕದ ಭಾಷೆ, ನೆಲದ ಸೊಗಡು, ಜನಜೀವನದ ಲಯವನ್ನು ಸಮಗ್ರವಾಗಿ ದುಡಿಸಿಕೊಂಡಿರುವ ಚಂದ್ರಶೇಖರ ಕಂಬಾರರ ನಾಟಕವನ್ನು ಒಮ್ಮೆಯಾದರೂ ಹಾಸನದಲ್ಲಿ ನಮ್ಮ ತಂಡದ ಮೂಲಕ ಪ್ರದರ್ಶಿಸಬೇಕು ಎನ್ನುವ ತವಕ ನಮ್ಮೊಳಗಿತ್ತು.

ಅದು 1998–99ರ ಸಮಯವಿರಬಹುದು. ಬೆಂಗಳೂರಿನ ಪಿ. ಲಂಕೇಶ್ ತೋಟದಲ್ಲಿ ಹೊಸ ವರ್ಷದ ಪ್ರಯುಕ್ತ ‘ಸಂಗ್ಯಾ-ಬಾಳ್ಯ’ ನಾಟಕದ ಪ್ರದರ್ಶನ ಏರ್ಪಡಿಸಲಾಗಿತ್ತು. ಆ ನಾಟಕವನ್ನು ನೋಡಲೇಬೇಕು ಎಂದು ನಿರ್ಧರಿಸಿ, ನಾನು ಮತ್ತು ಶಾಡ್ರಾಕ್ ಹಾಸನದಿಂದ ಬೆಂಗಳೂರಿನತ್ತ ಹೊರಟೆವು.

ಲಂಕೇಶ್ ಅವರೊಂದಿಗೆ ಒಡನಾಟ ಹೊಂದಿದ್ದ ಮೇಗಳಕೇರಿ ಬಸವರಾಜು ನಮಗೆ ಮಾರ್ಗದರ್ಶನ ನೀಡಿದ್ದರು. ಬೆಂಗಳೂರಿನಲ್ಲಿ ನನ್ನ ಅಣ್ಣ ಶಿವಲಿಂಗಪ್ಪ ಅವರ ಮನೆ ತಲುಪಿ, ಅಲ್ಲಿಂದ ಅವರ ಬೈಕ್ ಪಡೆದುಕೊಂಡು ಲಂಕೇಶ್ ತೋಟಕ್ಕೆ ಹೋದೆವು.

ತೋಟದ ಮನೆಯ ತಾರಸಿಯಲ್ಲಿ ಉತ್ತರ ಕರ್ನಾಟಕದ ಸೊಗಡಿನಲ್ಲಿ ಮೂಡಿಬಂದ ‘ಸಂಗ್ಯಾ-ಬಾಳ್ಯ’ವನ್ನು ಕಣ್ತುಂಬಿಕೊಂಡೆವು. ನಾಟಕ ಮುಗಿಸಿ ಮಧ್ಯರಾತ್ರಿಯಲ್ಲಿ ಹಾಸನಕ್ಕೆ ಹಿಂತಿರುಗುವಾಗ, ನಮ್ಮೊಳಗೆ ಒಂದು ಹೊಸ ಕನಸು ಮೊಳಕೆಯೊಡೆದಿತ್ತು.

‘ಈ ನಾಟಕವನ್ನು ನಮ್ಮ ರಂಗಸಿರಿಯಲ್ಲೂ ಆಡಿಸಬೇಕು:…’
ಆ ರಾತ್ರಿ ಅಂಕುರಿಸಿದ ಆ ಕನಸು ನನಸಾಗಲು ಬಹಳ ಸಮಯ ಬೇಕಾಗಲಿಲ್ಲ.

news_1789656130_1_389.webp

 

ಸಂಜೆಗಳ ಹರಟೆಯಲ್ಲಿ ಹುಟ್ಟಿದ ರಂಗಕನಸುಗಳು:
ಹಾಸನದಲ್ಲಿ ಸಂಜೆಯಾಗುತ್ತಿದ್ದಂತೆ ರಂಗಾಸಕ್ತರೆಲ್ಲರೂ ಒಂದೆಡೆ ಸೇರಿ ಹರಟೆ, ಚರ್ಚೆ ನಡೆಸುವುದು ಸಾಮಾನ್ಯವಾಗಿತ್ತು. ಆ ಮಾತುಕತೆಗಳಲ್ಲಿ ನಗುವಿತ್ತು, ವಾದವಿತ್ತು, ಕನಸುಗಳಿದ್ದವು. ಹೊಸ ನಾಟಕಗಳ ಯೋಜನೆಗಳು, ಹೊಸ ಪ್ರಯೋಗಗಳ ಆಲೋಚನೆಗಳು ಅಲ್ಲಿಯೇ ಹುಟ್ಟಿಕೊಳ್ಳುತ್ತಿದ್ದವು.

ಅದು ರಂಗಸಿರಿಯ ಸುವರ್ಣಯುಗ:
ಅಪ್ಪಾಜಿಗೌಡ, ಕೆ. ಸಣ್ಣೇಗೌಡ, ಪಿ. ಶಾಡ್ರಾಕ್, ರಂಗಸ್ವಾಮಿ, ಪೃಥ್ವಿ ಟಾಕೀಸ್ ಧರ್ಮರಾಜ್ ಸೇರಿದಂತೆ ಅನೇಕ ಸ್ನೇಹಿತರು ಒಂದೆಡೆ ಸೇರುತ್ತಿದ್ದರು. ಕೆಲವೊಮ್ಮೆ ಮಾತುಗಳು ಗಂಭೀರವಾಗುತ್ತಿದ್ದವು. ಮತ್ತೆ ಕೆಲವೊಮ್ಮೆ ಹರಟೆ ನಗುವಿನ ಹೊನಲಾಗಿ ಹರಿಯುತ್ತಿತ್ತು. ಆದರೆ ಆ ಎಲ್ಲದರ ಮಧ್ಯೆಯೂ ರಂಗಭೂಮಿಯ ಮೇಲಿನ ಪ್ರೀತಿ ಮಾತ್ರ ಅಚಲವಾಗಿತ್ತು.

ಆ ಸಂಜೆಗಳಲ್ಲೇ ಹುಟ್ಟಿದ ಅನೇಕ ಕನಸುಗಳು ಮುಂದೆ ರಂಗದ ಬೆಳಕಿನಲ್ಲಿ ಅರಳಿದವು. ಅಂತಹ ಕನಸುಗಳ ಸಾಲಿನಲ್ಲಿ ‘ಸಂಗ್ಯಾ-ಬಾಳ್ಯ’ವೂ ಒಂದು.

ಒಂದು ಸಂಜೆ ನಡೆದ ಚರ್ಚೆಯಲ್ಲಿ ಕಂಬಾರರ ಈ ನಾಟಕವನ್ನು ಮಾಡಬೇಕು ಎಂಬ ತೀರ್ಮಾನವಾಯಿತು. ಆ ಕ್ಷಣದಿಂದಲೇ ನಮ್ಮೊಳಗೆ ಹೊಸ ಉತ್ಸಾಹ ತುಂಬಿಕೊಂಡಿತು. ನಾಟಕದ ಪಾತ್ರಗಳು, ವೇಷಭೂಷಣ, ಸಂಗೀತ, ಅಭ್ಯಾಸ—ಎಲ್ಲದರ ಬಗ್ಗೆಯೂ ಚರ್ಚೆಗಳು ಆರಂಭವಾದವು.

ನೇಪಥ್ಯದಿಂದ ಪಾತ್ರಧಾರಿ:
ನಾನು ಎಂದಿನಂತೆ ನೇಪಥ್ಯದಲ್ಲಿಯೇ ಕೆಲಸ ಮಾಡೋಣ ಎಂದುಕೊಂಡಿದ್ದೆ. ರಂಗದ ಹಿಂದೆ ನಿಂತು ನಾಟಕಕ್ಕೆ ಜೀವ ತುಂಬುವುದು ನನಗೆ ಇಷ್ಟದ ಕೆಲಸವಾಗಿತ್ತು. ಆದರೆ ನಿರ್ದೇಶಕರಾದ ಕೆ. ಸಣ್ಣೇಗೌಡರು ನನ್ನನ್ನು ಕರೆದು, “ತಗಡೂರ್, ನೀವು ಒಂದು ಪಾತ್ರ ಮಾಡಲೇಬೇಕು. ನಿಮ್ಮ ಆಳ್ತನಕ್ಕೆ, ಎತ್ತರಕ್ಕೆ ಎಲ್ಲವೂ ಸೂಟ್ ಆಗುತ್ತೆ. ಆ ಪಾತ್ರವನ್ನು ನಿಮ್ಮಿಂದಲೇ ಮಾಡಿಸಬೇಕು” ಎಂದರು.

ಅವರ ಮಾತಿಗೆ ಅಪ್ಪಾಜಿಗೌಡರು, ಶಾಡ್ರಾಕ್ ಸೇರಿದಂತೆ ಸ್ನೇಹಿತರೆಲ್ಲರೂ ಒತ್ತಾಸೆಯಾಗಿ ನಿಂತರು. ಹೀಗಾಗಿ ನೇಪಥ್ಯದಲ್ಲಿ ಉಳಿಯಬೇಕೆಂದುಕೊಂಡಿದ್ದ ನಾನು ಅನಿವಾರ್ಯವಾಗಿ ರಂಗದ ಮುಂಭಾಗಕ್ಕೆ ಬರಬೇಕಾಯಿತು.

ಪಾತ್ರ ಮಾಡುವುದು ನನಗೆ ಸಮಸ್ಯೆಯಾಗಿರಲಿಲ್ಲ. ಆದರೆ ಪತ್ರಕರ್ತನ ವೃತ್ತಿಜೀವನದ ನಡುವೆ ರಂಗಭೂಮಿಗೆ ಸಮಯ ಹೊಂದಿಸಿಕೊಳ್ಳುವುದು ಸುಲಭವಾಗಿರಲಿಲ್ಲ.

ಆಗ ನಾನು ಹಾಸನದಲ್ಲಿ ‘ವಿಜಯ ಕರ್ನಾಟಕ’ ಪತ್ರಿಕೆಯ ಜಿಲ್ಲಾ ವರದಿಗಾರನಾಗಿದ್ದೆ. ಸುದ್ದಿ ಕಳುಹಿಸಿ, ಪತ್ರಿಕೆಯ ಕೆಲಸ ಮುಗಿಸುವ ಹೊತ್ತಿಗೆ ರಾತ್ರಿ 8 ಅಥವಾ 9 ಗಂಟೆಯಾಗಿಬಿಡುತ್ತಿತ್ತು. ಇತ್ತ ನಮ್ಮ ಸಣ್ಣೇಗೌಡರು ಸಮಯದ ವಿಷಯದಲ್ಲಿ ಬಹಳ ಕಟ್ಟುನಿಟ್ಟಿನವರು. ಸಂಜೆ 6 ಗಂಟೆಗೆ ರಿಹರ್ಸಲ್ ಆರಂಭವಾಗಬೇಕೆಂದರೆ ಎಲ್ಲರೂ ಸರಿಯಾದ ಸಮಯಕ್ಕೆ ಹಾಜರಿರಬೇಕು. ಯಾರಾದರೂ ತಡವಾಗಿ ಬಂದರೆ ಅವರ ಕೋಪ ನೆತ್ತಿಗೇರುತ್ತಿತ್ತು.

ನಮ್ಮ ರಂಗಭೂಮಿ ಎಷ್ಟೋ ಸಲ ರಣರಂಗವಾಗಿದ್ದೂ ಇದೆ!:
ಆದರೂ ನಾಟಕದ ಮೇಲಿನ ಪ್ರೀತಿ ಎಲ್ಲವನ್ನೂ ಮರೆಸುತ್ತಿತ್ತು. ಪತ್ರಿಕಾ ಕೆಲಸ ಮುಗಿಸಿ, ಅಭ್ಯಾಸಕ್ಕೆ ಹಾಜರಾಗುವುದು ನನ್ನ ದಿನಚರಿಯಾಯಿತು. ಮೊದಲಿಗೆ ಎವಿಕೆ ಕಾಲೇಜಿನ ಪಕ್ಕದಲ್ಲಿದ್ದ ಉರ್ದು ಶಾಲೆಯಲ್ಲಿ ಅಭ್ಯಾಸ ನಡೆಯುತ್ತಿತ್ತು. ನಂತರ ಸಿಎಸ್‌ಐ ಶಾಲೆ ನಮ್ಮ ರಂಗಚಟುವಟಿಕೆಗಳ ತಾಣವಾಯಿತು.

ಸೇಠ್ ಪಾತ್ರ ನನ್ನೊಳಗೆ ಇಳಿದ ಕ್ಷಣ:
‘ಸಂಗ್ಯಾ-ಬಾಳ್ಯ’ದಲ್ಲಿ ನಾನು ಮಾಡಬೇಕಿದ್ದ ಸೇಠ್ ಪಾತ್ರಕ್ಕೆ ಬೇಕಾದ ಟೋಪಿ, ವೇಷಭೂಷಣಗಳನ್ನು ನಮ್ಮ ಬಿ.ಎಸ್. ದೇಸಾಯಿ ಪ್ರೀತಿಯಿಂದ ಹೊಂದಿಸಿಕೊಟ್ಟರು.

ಆ ವೇಷ ತೊಟ್ಟಾಗಲೆಲ್ಲ, ಪಾತ್ರ ನನ್ನೊಳಗೆ ಇಳಿದಂತಾಗುತ್ತಿತ್ತು. ಕನ್ನಡಿಯ ಮುಂದೆ ನಿಂತಾಗ ಕಾಣಿಸುತ್ತಿದ್ದದ್ದು ತಗಡೂರ್ ಅಲ್ಲ; ಸೇಠ್!

ರಿಹರ್ಸಲ್‌ಗಳು, ಗ್ರ್ಯಾಂಡ್ ರಿಹರ್ಸಲ್‌ಗಳು ಭರ್ಜರಿಯಾಗಿ ನಡೆದವು. ಸಣ್ಣೇಗೌಡರ ನಿರ್ದೇಶನ, ಕಲಾವಿದರ ಪರಿಶ್ರಮ, ಹಿಮ್ಮೇಳದ ಸಿದ್ಧತೆ—ಎಲ್ಲವೂ ಸೇರಿ ನಾಟಕ ನಿಧಾನವಾಗಿ ರೂಪ ಪಡೆದುಕೊಳ್ಳುತ್ತಿತ್ತು. ಕೊನೆಗೆ ಸೇಠ್ ಪಾತ್ರದಲ್ಲಿ ‘ಸೈ’ ಅನ್ನಿಸಿಕೊಂಡೆ.

ಅದು ನನಗೆ ಸಿಕ್ಕ ವೈಯಕ್ತಿಕ ಮೆಚ್ಚುಗೆ ಮಾತ್ರವಾಗಿರಲಿಲ್ಲ. ನನ್ನನ್ನು ರಂಗದ ಮುಂಭಾಗಕ್ಕೆ ಕರೆತಂದ ಗೆಳೆಯರ ನಂಬಿಕೆಗೆ ಸಿಕ್ಕ ಉತ್ತರವಾಗಿತ್ತು.

ಕಲಾಭವನದ ಚಪ್ಪಾಳೆ ಮತ್ತು ‘ಸೇಠ್ ಜೀ’ ಎಂಬ ಕರೆ ಹಾಸನದ ಕಲಾಭವನದಲ್ಲಿ ‘ಸಂಗ್ಯಾ-ಬಾಳ್ಯ’ದ ಪ್ರದರ್ಶನ ನಡೆದ ದಿನ ಇನ್ನೂ ಕಣ್ಣಮುಂದಿದೆ.

ರಂಗದ ಮೇಲೆ ಬೆಳಕು ಬಿದ್ದಾಗ, ಪ್ರೇಕ್ಷಕರ ಚಪ್ಪಾಳೆ ಮೊಳಗಿದಾಗ, ನಮ್ಮೆಲ್ಲರ ಪರಿಶ್ರಮ ಸಾರ್ಥಕವಾಯಿತು ಎನ್ನಿಸಿತು. ಆ ಕ್ಷಣಕ್ಕಾಗಿ ಎಷ್ಟೋ ದಿನಗಳ ಅಭ್ಯಾಸ, ಎಷ್ಟೋ ಸಂಜೆಗಳ ಚರ್ಚೆ, ಎಷ್ಟೋ ಸಣ್ಣಪುಟ್ಟ ಜಗಳಗಳು ನಡೆದಿದ್ದವು! ನನ್ನನ್ನು ‘ತಗಡೂರ್’ ಎಂದು ಕರೆಯುತ್ತಿದ್ದ ಅನೇಕರು ಆಮೇಲೆ, “ಏನ್ ಸೇಠ್ ಜೀ?” ಎಂದು ರೇಗಿಸಲು ಆರಂಭಿಸಿದರು.

ಆ ಕರೆಯಲ್ಲಿ ಪ್ರೀತಿಯಿತ್ತು. ಪಾತ್ರ ಜನರ ಮನಸ್ಸಿನಲ್ಲಿ ನೆಲೆಯೂರಿದ ಸಂತೋಷವಿತ್ತು. ರಂಗದ ಮೇಲೆ ಕೆಲವೇ ಕ್ಷಣಗಳು ಕಾಣಿಸಿಕೊಂಡ ಪಾತ್ರವೊಂದು, ಜನರ ದೈನಂದಿನ ಮಾತಿನ ಭಾಗವಾಗಿತ್ತು.

‘ಸಂಗ್ಯಾ-ಬಾಳ್ಯ’ ಹಾಸನಕ್ಕಷ್ಟೇ ಸೀಮಿತವಾಗಲಿಲ್ಲ. ಹಳ್ಳಿಹಳ್ಳಿಗಳಿಗೆ, ಎಂಸಿಎಫ್ ಸೇರಿದಂತೆ ವಿವಿಧೆಡೆ 30ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿತು. ಉಡುಪಿ ರಂಗಭೂಮಿ ಸ್ಪರ್ಧೆಯಲ್ಲಿ ಸಂಗೀತಕ್ಕೆ ಪ್ರಥಮ ಸ್ಥಾನ ಹಾಗೂ ನಾಟಕಕ್ಕೆ ದ್ವಿತೀಯ ಸ್ಥಾನ ದೊರೆತಾಗ ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ.

ಅದು ಕೇವಲ ಪ್ರಶಸ್ತಿಯಾಗಿರಲಿಲ್ಲ. ನಮ್ಮೆಲ್ಲರ ಬೆವರಿಗೂ, ಸಮಯಕ್ಕೂ, ಕನಸುಗಳಿಗೂ ದೊರೆತ ಮನ್ನಣೆಯಾಗಿತ್ತು.

ಮೇಕಪ್‌ನಲ್ಲಿಯೇ ಪತ್ರಿಕಾ ವರದಿಗಾರ:!
‘ಸಂಗ್ಯಾ-ಬಾಳ್ಯ’ದ ಪಯಣದಲ್ಲಿ ಮರೆಯಲಾಗದ ಒಂದು ಘಟನೆ ಇದೆ. ಇಂದಿಗೂ ನೆನಪಿಸಿಕೊಂಡರೆ ನಗು ಬರುತ್ತದೆ; ಅದೇ ಸಮಯದಲ್ಲಿ ಪತ್ರಕರ್ತನ ಕರ್ತವ್ಯದ ಗಂಭೀರತೆಯೂ ಮನಸ್ಸಿಗೆ ತಟ್ಟುತ್ತದೆ.

ಒಮ್ಮೆ ಹಾಸನದ ಕಲಾಭವನದಲ್ಲಿ ನಾಟಕದ ಪ್ರದರ್ಶನ ನಡೆಯುತ್ತಿತ್ತು. ನಾನು ಮೇಕಪ್ ಹಾಕಿಕೊಂಡು, ಸೇಠ್ ಪಾತ್ರಕ್ಕೆ ಸಿದ್ಧನಾಗಿ ಕುಳಿತಿದ್ದೆ. ಅಷ್ಟರಲ್ಲಿ ಚನ್ನರಾಯಪಟ್ಟಣದ ಬಳಿ ಭೀಕರ ಅಪಘಾತವಾಗಿ ಐವರು ಸಾವನ್ನಪ್ಪಿದ ಸುದ್ದಿ ಬಂತು.

ಆಗ ನಮ್ಮ ‘ವಿಜಯ ಕರ್ನಾಟಕ’ ಕಚೇರಿ ಅರಳೀಕಟ್ಟೆ ಸರ್ಕಲ್‌ನಲ್ಲಿತ್ತು. ಸುದ್ದಿ ಕಂಪ್ಯೂಟರ್‌ನಲ್ಲಿ ಟೈಪ್ ಮಾಡಿ, ಛಾಯಾಚಿತ್ರದೊಂದಿಗೆ ಕಳುಹಿಸಬೇಕಾಗಿತ್ತು. ನನ್ನ ಪಾತ್ರ ರಂಗಕ್ಕೆ ಬರುವುದಕ್ಕೆ ಇನ್ನೂ ಮುಕ್ಕಾಲು ಗಂಟೆ ಸಮಯವಿದೆ ಎಂದು ತಿಳಿಯಿತು. ಸುದ್ದಿ ಕಳುಹಿಸದೆ ಇರಲು ಸಾಧ್ಯವಿರಲಿಲ್ಲ.

ಸ್ನೇಹಿತರೊಬ್ಬರ ಬೈಕ್‌ನಲ್ಲಿ ಮೇಕಪ್‌ನಲ್ಲಿಯೇ ಶಾಲು ಹೊದ್ದುಕೊಂಡು ಕಚೇರಿಗೆ ಹೊರಟೆ. ಅಲ್ಲಿ ಕುಳಿತು ಪಟಪಟನೆ ಸುದ್ದಿ ಟೈಪ್ ಮಾಡಿ ಕಳುಹಿಸಿದೆ. ಆ ಸಮಯದಲ್ಲಿ ಕಚೇರಿಗೆ ಪ್ರೆಸ್‌ನೋಟ್ ಕೊಡಲು ಬಂದವರು ನನ್ನನ್ನು ನೋಡಿ ದಂಗಾದರು.

“ಏನ್ ಸಾರ್ ಇದು? ಮೇಕಪ್‌ನಲ್ಲೇ ಕುಳಿತು ಸುದ್ದಿ ಮಾಡ್ತಿದ್ದೀರಿ!” ಎಂದು ಆಶ್ಚರ್ಯಪಟ್ಟರು.

ನನಗಾದ ಇರುಸುಮುರುಸು ಅಷ್ಟಿಷ್ಟಲ್ಲ. ದಾರಿಯುದ್ದಕ್ಕೂ ಅದೇ ಮಾತು. ಆದರೆ ಸುದ್ದಿ ಕಳುಹಿಸುವ ಜವಾಬ್ದಾರಿ ಮುಗಿಸಿದ ಸಂತೃಪ್ತಿ ಇತ್ತು.

ಕಲಾಭವನಕ್ಕೆ ಹಿಂದಿರುಗುವಷ್ಟರಲ್ಲಿ ನನ್ನ ಪಾತ್ರದ ಸಮಯವೂ ಬಂದಿತ್ತು. ಯಾವುದೇ ಅಡಚಣೆಯಾಗದಂತೆ ರಂಗದ ಮೇಲೆ ನಿಂತೆ.

ಆ ದಿನ ಒಬ್ಬನೇ ವ್ಯಕ್ತಿಯೊಳಗೆ ಇಬ್ಬರು ಬದುಕುತ್ತಿದ್ದರು—ಒಬ್ಬ ಪತ್ರಕರ್ತ, ಮತ್ತೊಬ್ಬ ರಂಗಕರ್ಮಿ. ಒಬ್ಬನಿಗೆ ಸುದ್ದಿಯ ಕರ್ತವ್ಯ. ಮತ್ತೊಬ್ಬನಿಗೆ ರಂಗದ ಜವಾಬ್ದಾರಿ. ಆ ಎರಡು ಲೋಕಗಳು ಒಂದೇ ಸಂಜೆ ಮುಖಾಮುಖಿಯಾದರೂ, ಎರಡನ್ನೂ ನಿಭಾಯಿಸಿದ ತೃಪ್ತಿ ನನ್ನದಾಗಿತ್ತು.

ಸಂಗೀತವೇ ನಾಟಕದ ಆತ್ಮ:
‘ಸಂಗ್ಯಾ-ಬಾಳ್ಯ’ದ ಹಾಡುಗಳು ಅದ್ಭುತವಾಗಿದ್ದವು. ಅವು ಕೇವಲ ಹಾಡುಗಳಾಗಿರಲಿಲ್ಲ; ನಾಟಕದ ಉಸಿರಾಗಿದ್ದವು.

“ಮೊದಲಿಗೆ ಶರಣೆಂಬೆವು
ನಾವು ನಿಮಗ…”

ಎಂದು ಆರಂಭವಾಗುತ್ತಿದ್ದ ಹಾಡು ಕೇಳಿದಾಗಲೇ ರಂಗದ ವಾತಾವರಣ ಬದಲಾಗುತ್ತಿತ್ತು.
“ಹೋಗುವುದು ಆರು ದಿವಸ
ಕೇಳಾ ಗಂಗಿ
ಬರುವುದು ಮೂರು ದಿವಸ…”

ಎಂಬ ಸಾಲುಗಳ ಲಯ, ಧ್ವನಿ, ಅಭಿನಯ—ಎಲ್ಲವೂ ಪ್ರೇಕ್ಷಕರನ್ನು ನಾಟಕದೊಳಗೆ ಎಳೆದುಕೊಂಡು ಹೋಗುತ್ತಿದ್ದವು. ಪಿ. ಶಾಡ್ರಾಕ್ ಅವರ ಧ್ವನಿಯಲ್ಲಿ ಆ ಹಾಡುಗಳನ್ನು ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕು ಎನ್ನಿಸುತ್ತಿತ್ತು. ಇಡೀ ನಾಟಕದ ಶಕ್ತಿಯೇ ಸಂಗೀತವಾಗಿತ್ತು ಎಂದರೆ ಅತಿಶಯೋಕ್ತಿಯಲ್ಲ.

ಅದಕ್ಕೆ ತಕ್ಕಂತೆ ಎಲ್ಲ ಕಲಾವಿದರ ಅಭಿನಯವೂ ಅಮೋಘವಾಗಿತ್ತು. ಸಂಗೀತ, ಅಭಿನಯ, ನಿರ್ದೇಶನ ಹಾಗೂ ತಂಡದ ಒಗ್ಗಟ್ಟು ಒಂದಾಗಿ ಸೇರಿದಾಗಲೇ ‘ಸಂಗ್ಯಾ-ಬಾಳ್ಯ’ ಅಷ್ಟು ದೊಡ್ಡ ಯಶಸ್ಸು ಕಂಡಿತು.

“ಸೇಠ್ ಜೀಗಾಗಿಯೇ ಇದ್ದ
ಮಾರ್ವಾಡೆರಾ… ನಾವು ಮಾರ್ವಾಡೆರಾ
ಮುತ್ತು ರತ್ನ ವ್ಯಾಪಾರ ಮಾಡುವವರಾ…”

ಎಂಬ ಹಾಡಿಗೆ ಲಯಬದ್ಧವಾದ ನೃತ್ಯ ಮಸ್ತ್ ಮಜಾ ಕೊಡುತ್ತಿತ್ತು. ಆ ದೃಶ್ಯಗಳು ಇಂದಿಗೂ ನೆನಪಿನಲ್ಲಿ ನಗುವಿನ ಅಲೆ ಎಬ್ಬಿಸುತ್ತವೆ. ರಂಗದ ಮೇಲೆ ಜೀವ ತುಂಬಿದ ಕಲಾವಿದರು:
‘ಸಂಗ್ಯಾ-ಬಾಳ್ಯ’ ಪಾತ್ರದಲ್ಲಿ ಶಿವಣ್ಣ ಮತ್ತು ಅಣ್ಣಾಜಿ, ಗೌಡನ ಪಾತ್ರದಲ್ಲಿ ಬಿ.ಎಸ್. ದೇಸಾಯಿ, ಗೌಡನ ಸಹೋದರರ ಪಾತ್ರಗಳಲ್ಲಿ ಭಾರತೀಶ ಮತ್ತು ಕೋರ್ಟ್ ಸತೀಶ್, ಗಂಗೀ ಪಾತ್ರದಲ್ಲಿ ಚಿತ್ರಲೇಖ, ಪರವ್ವನ ಪಾತ್ರದಲ್ಲಿ ಜಯಶಂಕರ, ಸೇಠ್‌ನ ಶಿಷ್ಯನ ಪಾತ್ರದಲ್ಲಿ ವಿಶ್ವನಾಥ್—ಎಲ್ಲರೂ ಅದ್ಭುತವಾಗಿ ನಟಿಸಿದ್ದರು.

ನಾಟಕದೊಟ್ಟಿಗೆ ಇದ್ದ ಮಾಸ್ಟರ್ ಜಗದೀಶ್, ದೇವಾನಂದ, ಹಿರಿಯಣ್ಣ, ಹರೀಶ್, ಶಂಕರೇಗೌಡ, ಮಾಸ್ಟರ್ ಚಂದ್ರಪ್ಪ, ಪುಣ್ಯ, ಉಮೇಶ್, ರಾಘವೇಂದ್ರ ಸೇರಿದಂತೆ ಅನೇಕ ಕಲಾವಿದರ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ.

ಪರವ್ವನ ಪಾತ್ರದಲ್ಲಿ ಎಚ್.ಬಿ. ರಮೇಶ್, ಈ ಹಿಂದೆ ಸಂಗ್ಯಾ-ಬಾಳ್ಯ ಪಾತ್ರ ನಿರ್ವಹಿಸಿದ್ದ ಉಲಿವಾಲ ಮೋಹನ್, ಗೀತಾ ಕೂಡ ಅದ್ಭುತವಾಗಿ ನಟಿಸಿದ್ದರು.

ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ನಾಟಕಕ್ಕೆ ಜೀವ ತುಂಬಿದ್ದರು. ಯಾರೊಬ್ಬರ ಅಭಿನಯವೂ ಮತ್ತೊಬ್ಬರಿಗಿಂತ ಕಡಿಮೆಯಾಗಿರಲಿಲ್ಲ. ರಂಗದ ಮೇಲೆ ಕಾಣಿಸಿಕೊಂಡ ಪ್ರತಿಯೊಂದು ಪಾತ್ರದ ಹಿಂದೆ ಒಬ್ಬೊಬ್ಬರ ಶ್ರಮ, ಪ್ರೀತಿ ಮತ್ತು ಕಲಾತ್ಮಕ ಬದ್ಧತೆ ಇತ್ತು.

ಹಿಮ್ಮೇಳದಲ್ಲಿ ಪಿ. ಶಾಡ್ರಾಕ್, ಮುತ್ತುರಾಜ್ ಗೌರಾಣಿ, ದಿವ್ಯ, ನಾರಾಯಣ್, ಪರಮೇಶ್, ಅಹಮದ್ ಸೇರಿದಂತೆ ಹಲವರು ನೀಡಿದ ಸಹಕಾರ ಅಮೂಲ್ಯ.

 ಮೈಕ್ ಮಲ್ಲೇಶ, ಕೊಟ್ಟೂರು ಶ್ರೀನಿವಾಸ್ ಸೇರಿದಂತೆ ತೆರೆಮರೆಯಲ್ಲಿ ದುಡಿದ ಅನೇಕ ಸ್ನೇಹಿತರ ಶ್ರಮವೂ ಈ ಯಶಸ್ಸಿನ ಹಿಂದೆ ಇತ್ತು.

ರಂಗದ ಮೇಲೆ ಕಾಣಿಸುವ ಬೆಳಕಿನ ಹಿಂದೆ, ಕತ್ತಲಲ್ಲಿ ನಿಂತು ದುಡಿಯುವ ಅನೇಕ ಕೈಗಳಿರುತ್ತವೆ. ‘ಸಂಗ್ಯಾ-ಬಾಳ್ಯ’ ಆ ಸತ್ಯವನ್ನು ಮತ್ತೊಮ್ಮೆ ನೆನಪಿಸಿತು.

ಆ ದಿನಗಳು ಮರಳಿ ಬರುವುದಿಲ್ಲ:…
ಇಂದು ಎಷ್ಟೋ ವರ್ಷಗಳು ಕಳೆದಿವೆ. ಕಾಲ ತನ್ನ ದಾರಿಯಲ್ಲಿ ಬಹುದೂರ ಸಾಗಿದೆ. ಗೆಳೆಯರು ತಮ್ಮ ತಮ್ಮ ಬದುಕಿನ ಜವಾಬ್ದಾರಿಗಳಲ್ಲಿ ಮುಳುಗಿದ್ದಾರೆ. ಕೆಲವರು ದೂರವಾಗಿದ್ದಾರೆ. ಮತ್ತೆ ಕೆಲವರು ನೆನಪುಗಳಲ್ಲಷ್ಟೇ ನಮ್ಮೊಂದಿಗೆ ಉಳಿದಿದ್ದಾರೆ. ಆದರೆ ಆ ಸಂಜೆಗಳು ಮಾತ್ರ ಇನ್ನೂ ಹಸಿರಾಗಿವೆ.

ಸಣ್ಣೇಗೌಡರ ಗದರಿಕೆ, ಶಾಡ್ರಾಕ್ ಅವರ ಹಾಡು, ಅಪ್ಪಾಜಿಗೌಡರ ಚರ್ಚೆ, ಗೆಳೆಯರ ನಗು, ಸಿಎಸ್‌ಐ ಶಾಲೆಯ ಅಭ್ಯಾಸ, ಕಲಾಭವನದ ಬೆಳಕು, ಪ್ರೇಕ್ಷಕರ ಚಪ್ಪಾಳೆ—ಎಲ್ಲವೂ ಮನಸ್ಸಿನೊಳಗೆ ಹಾಗೆಯೇ ಉಳಿದಿವೆ.

ನಾಟಕ ಮುಗಿದ ಮೇಲೂ ಅದರ ಹಾಡುಗಳು ಕಿವಿಯಲ್ಲಿ ಮೊಳಗುತ್ತಿದ್ದವು. ಪಾತ್ರಗಳ ಮಾತುಗಳು ಗೆಳೆಯರ ನಡುವೆ ಹರಟೆಯಾಗುತ್ತಿದ್ದವು. ರಂಗದ ಮೇಲಿನ ಕ್ಷಣಗಳು ನಮ್ಮ ಬದುಕಿನ ಭಾಗವಾಗುತ್ತಿದ್ದವು.

ಆ ದಿನಗಳಲ್ಲಿ ನಾವು ದೊಡ್ಡ ಸಾಧನೆ ಮಾಡುತ್ತಿದ್ದೇವೆ ಎಂಬ ಅರಿವು ಬಹುಶಃ ಇರಲಿಲ್ಲ. ರಂಗಭೂಮಿಯ ಮೇಲಿನ ಪ್ರೀತಿ ನಮ್ಮನ್ನು ಮುನ್ನಡೆಸುತ್ತಿತ್ತು. ನಾಳೆ ಏನಾಗಬಹುದು ಎಂಬ ಲೆಕ್ಕಾಚಾರವಿರಲಿಲ್ಲ. ಇಂದಿನ ಪ್ರದರ್ಶನ ಚೆನ್ನಾಗಿರಬೇಕು, ಪ್ರೇಕ್ಷಕರು ಸಂತೋಷಪಡಬೇಕು, ಗೆಳೆಯರೊಂದಿಗೆ ಇನ್ನೊಂದು ಕನಸು ನನಸಾಗಬೇಕು—ಅಷ್ಟೇ ನಮ್ಮ ಬಯಕೆ.

ನೆನಪುಗಳ ಮೆರವಣಿಗೆಯಲ್ಲಿ ‘ಸಂಗ್ಯಾ-ಬಾಳ್ಯ’:
ರಂಗಸಿರಿಯ ಆ ದಿನಗಳು ಮರಳಿ ಬರುವುದಿಲ್ಲ. ಆದರೆ ಅವು ಬಿಟ್ಟುಹೋದ ನೆನಪುಗಳಿಗೆ ಸಾವಿಲ್ಲ.

‘ಸಂಗ್ಯಾ-ಬಾಳ್ಯ’ ನಮ್ಮ ಪಾಲಿಗೆ ಒಂದು ನಾಟಕವಲ್ಲ. ಅದು ಹಾಸನದ ರಂಗಭೂಮಿಯೊಂದಿಗಿನ ನಮ್ಮ ಪ್ರೀತಿಯ, ಬದುಕಿನ ಒಂದು ಅಮೂಲ್ಯ ಅಧ್ಯಾಯ. ನಮ್ಮ ಯೌವನದ ಉತ್ಸಾಹ, ಗೆಳೆಯರ ಒಡನಾಟ, ರಂಗದ ಮೇಲಿನ ಕನಸುಗಳು, ಸೋಲು-ಗೆಲುವುಗಳ ನಡುವೆ ಬೆಳೆದ ಆತ್ಮೀಯತೆ—ಎಲ್ಲವನ್ನೂ ತನ್ನೊಳಗೆ ಕಟ್ಟಿಕೊಂಡಿರುವ ನೆನಪಿನ ಮೆರವಣಿಗೆ.

ಇಂದು ಆ ನಾಟಕದ ಹಾಡೊಂದು ಕಿವಿಗೆ ಬಿದ್ದರೂ ಸಾಕು. ಕಣ್ಣುಮುಂದೆ ಮತ್ತೆ ಆ ರಂಗ ಮೂಡುತ್ತದೆ. ಸಣ್ಣೇಗೌಡರು ಕಾಣಿಸುತ್ತಾರೆ. ಶಾಡ್ರಾಕ್ ಹಾಡು ಕೇಳಿಸುತ್ತದೆ. ಗೆಳೆಯರ ನಗು ಮೊಳಗುತ್ತದೆ. ಸೇಠ್ ಪಾತ್ರಕ್ಕೆ ತೊಟ್ಟ ಟೋಪಿ ನೆನಪಾಗುತ್ತದೆ. ಮೇಕಪ್‌ನಲ್ಲಿಯೇ ಸುದ್ದಿ ಕಳುಹಿಸಿದ ಆ ಸಂಜೆ ಮತ್ತೆ ಎದುರಾಗುತ್ತದೆ.

ಕಾಲ ಬದಲಾಗಿದೆ. ರಂಗಗಳು ಬದಲಾಗಿವೆ. ಬದುಕಿನ ಆದ್ಯತೆಗಳು ಬದಲಾಗಿವೆ. ಆದರೆ ನಮ್ಮೊಳಗಿನ ಆ ರಂಗಸಿರಿ ಇನ್ನೂ ಸತ್ತಿಲ್ಲ. ಯಾಕೆಂದರೆ ಕೆಲವು ನಾಟಕಗಳು ಮುಗಿಯುವುದಿಲ್ಲ. ಅವು ತೆರೆ ಇಳಿದ ಮೇಲೂ ನಮ್ಮೊಳಗೆ ನಡೆಯುತ್ತಲೇ ಇರುತ್ತವೆ. ‘ಸಂಗ್ಯಾ-ಬಾಳ್ಯ’ ಅಂತಹ ನಾಟಕ.
ಲೇಖನ : ಶಿವಾನಂದ ತಗಡೂರು, ಪತ್ರಕರ್ತರು.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಖ್ಯಮಂತ್ರಿಯವರ ತಾಂತ್ರಿಕ ಸಲಹೆಗಾರರಾಗಿ ನಿವೃತ್ತ ಕಾರ್ಯದರ್ಶಿ ಡಾ. ಕೆ. ಜೈಪ್ರಕಾಶ್ ನೇಮಕಜೆಎನ್‌ಯು ಪ್ರೊಫೆಸರ್ ಹಾಗೂ ಕಾಂಗ್ರೆಸ್ ಸಂಸದರಿಂದ ಲೈಂಗಿಕ ಕಿರುಕುಳ ಆರೋಪ, ಸೇವೆಯಿಂದ ವಜಾಆರ್‌ಬಿಐ ಬಿಗ್ ಶಾಕ್: ರೆಪೋ ದರ ಏರಿಕೆಯಿಂದ ಸಾಲಗಾರರಿಗೆ ಹೆಚ್ಚಳವಾದ ಇಎಂಐ ಬರೆ!ಎಸ್‌ಐಆರ್ ರದ್ದುಪಡಿಸುವಂತೆ ಜನತಾ ನ್ಯಾಯಾಲಯ ಸಮಾವೇಶ: ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹ10 ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ಸುಪಾರಿ - ಶಾಸಕ ಗಣಿಗ ರವಿ ಸ್ಫೋಟಕ ಪೆನ್‌ಡ್ರೈವ್ ಬಾಂಬ್!ಸಚಿವರಿಗೆ ಬಲೆ ಬೀಳಿಸಲು ಯತ್ನ: ಸಿಎಂ ಎಚ್ಚರಿಕೆ ನೀಡಿದ್ದಾರೆ ಎಂದ ಸತೀಶ್ ಜಾರಕಿಹೊಳಿಕೇಂದ್ರದೊಂದಿಗೆ ಜಿಎಸ್‌ಟಿ ಸಭೆ: ರಾಜ್ಯದ ಬಾಕಿ ಹಣದ ಕುರಿತು 'ಸಿಹಿ ಸುದ್ದಿ' ನೀಡಿದ ಸಿಎಂ ಡಿ.ಕೆ ಶಿವಕುಮಾರ್ ಸುಳಿವು!ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಮೊಬೈಲ್ ಪತ್ತೆ ಪ್ರಕರಣ: ಹಿಂಡಲಗಾ ಜೈಲಿಗೆ ಸ್ಥಳಾಂತರಪ್ರತಿಭಟನೆ ಹೆಸರಲ್ಲಿ ಎಲ್ಲವನ್ನೂ ಬಂದ್ ಮಾಡಲು ಆಗದು: ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ದಾವಣಗೆರೆಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ವಕೀಲರ ಪಟ್ಟು: ಮಧ್ಯಕರ್ನಾಟಕದಲ್ಲಿ ತೀವ್ರಗೊಂಡ ಹೋರಾಟ