ಚಂದ್ರವಳ್ಳಿ ನ್ಯೂಸ್, ಮಂಗಳೂರು (ದಕ್ಷಿಣ ಕನ್ನಡ):
ಕರಾವಳಿಗರ ದಶಕಗಳ ಕನಸು ಹಾಗೂ ತುಳುನಾಡಿನ ಜನರ ನಿರಂತರ ಹೋರಾಟಕ್ಕೆ ಕೊನೆಗೂ ಐತಿಹಾಸಿಕ ಜಯ ಸಿಕ್ಕಿದೆ. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿಶೇಷ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ, ತುಳು ಭಾಷೆಗೆ ಕರ್ನಾಟಕದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯ ಮಾನ್ಯತೆ ನೀಡಲು ಸರ್ಕಾರ ನಿರ್ಧರಿಸಿದೆ.
ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ಸಂಪುಟ ಸಭೆಯಲ್ಲಿ, ಭಾಷಾ ಮಾನ್ಯತೆಯ ಜೊತೆಗೆ ಜಿಲ್ಲೆಯ ಮರುನಾಮಕರಣ, ಹೊಸ ಪ್ರವಾಸೋದ್ಯಮ ನೀತಿ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಭರ್ಜರಿ ಅನುದಾನ ಸೇರಿದಂತೆ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
ತುಳು ಭಾಷೆಗೆ ಸಿಕ್ಕ ಅಧಿಕೃತ ಗೌರವ: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ (ತುಳುನಾಡು) ಜನರ ಬಹುದಿನಗಳ ಹಕ್ಕೊತ್ತಾಯವಾಗಿದ್ದ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡಲು ರಾಜ್ಯ ಸರ್ಕಾರ ಅಧಿಕೃತ ಒಪ್ಪಿಗೆ ಸೂಚಿಸಿದೆ.
ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ಹಾಗೂ 2,000 ವರ್ಷಗಳಿಗಿಂತಲೂ ಹೆಚ್ಚು ಇತಿಹಾಸ ಹೊಂದಿರುವ ತುಳು ಭಾಷೆಯನ್ನು ಜಾಗತಿಕವಾಗಿ ಸುಮಾರು ಒಂದು ಕೋಟಿ ಜನರು ಮಾತನಾಡುತ್ತಿದ್ದಾರೆ.
ತುಳು ಭಾಷೆಯ ಪ್ರಗತಿ ಹಾಗೂ ಸಂಸ್ಕೃತಿಯ ರಕ್ಷಣೆಗಾಗಿ ಈ ಹಿಂದೆ ಡಾ. ಮೋಹನ್ ಆಳ್ವ ನೇತೃತ್ವದ ಸಮಿತಿಯು, ಸಂವಿಧಾನದ 345ನೇ ವಿಧಿಯಡಿ ಎರಡನೇ ಅಧಿಕೃತ ಭಾಷಾ ಮಾನ್ಯತೆ ನೀಡಬಹುದು ಎಂದು ವರದಿ ಸಲ್ಲಿಸಿತ್ತು.
ಸರ್ಕಾರದ ಈ ಮಹತ್ವದ ತೀರ್ಮಾನದಿಂದಾಗಿ ಇನ್ಮುಂದೆ ಕರಾವಳಿ ಭಾಗದ ಸರ್ಕಾರಿ ಸಂಸ್ಥೆಗಳು ಮತ್ತು ಕಚೇರಿಗಳಲ್ಲಿ ದೈನಂದಿನ ಆಡಳಿತಾತ್ಮಕ ಸಂವಹನಕ್ಕಾಗಿ ಕನ್ನಡದ ಜೊತೆಗೆ ತುಳು ಭಾಷೆಯನ್ನೂ ಅಧಿಕೃತವಾಗಿ ಬಳಸಲು ಅವಕಾಶ ಸಿಗಲಿದೆ.
ದಕ್ಷಿಣ ಕನ್ನಡ ಜಿಲ್ಲೆ ಇನ್ನು ಮುಂದೆ 'ಮಂಗಳೂರು ಜಿಲ್ಲೆ'?:
ತುಳು ಭಾಷಾ ಮಾನ್ಯತೆಯ ಜೊತೆಗೆ, ಕರಾವಳಿ ಜನರ ಮತ್ತೊಂದು ಪ್ರಮುಖ ಬೇಡಿಕೆಯಾದ 'ದಕ್ಷಿಣ ಕನ್ನಡ' ಜಿಲ್ಲೆಯನ್ನು 'ಮಂಗಳೂರು ಜಿಲ್ಲೆ' ಎಂದು ಮರುನಾಮಕರಣ ಮಾಡುವ ಬಗ್ಗೆಯೂ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಈ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ, ಮುಂದಿನ ಒಂದು ತಿಂಗಳ ಒಳಗಾಗಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಇದರೊಂದಿಗೆ, ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಭಾರಿ ಉತ್ತೇಜನ ನೀಡುವ ನಿಟ್ಟಿನಲ್ಲಿ 'ಹೊಸ ಟೂರಿಸಂ ಪಾಲಿಸಿ' ಜಾರಿಗೆ ತರಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಧಾರ್ಮಿಕ ಕ್ಷೇತ್ರಗಳು ಹಾಗೂ ಕಂಬಳಕ್ಕೆ ಭರ್ಜರಿ ಅನುದಾನ:
ಕರಾವಳಿಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳ ಸಮಗ್ರ ಅಭಿವೃದ್ಧಿಗಾಗಿ ಸಚಿವ ಸಂಪುಟವು ಕೋಟ್ಯಂತರ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಿಸಿದೆ.
ದೇಗುಲ ಹಾಗೂ ಮಠಗಳ ಅಭಿವೃದ್ಧಿ: ಐತಿಹಾಸಿಕ ದೇವಸ್ಥಾನಗಳು ಮತ್ತು ಮಠಗಳ ಜೀರ್ಣೋದ್ಧಾರ ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ ಒಟ್ಟು ₹12 ಕೋಟಿ ವಿಶೇಷ ಅನುದಾನ ನೀಡಲಾಗಿದೆ. ಇದರಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇಗುಲಕ್ಕೆ ₹5 ಕೋಟಿ ಹಾಗೂ ಒಡಿಯೂರು ಮಠ, ಮಾಣಿಲ ಮಠ ಸೇರಿದಂತೆ ಪ್ರಮುಖ ಕ್ಷೇತ್ರಗಳಿಗೆ ತಲಾ ₹1 ಕೋಟಿ ಅನುದಾನ ಹಂಚಿಕೆಯಾಗಿದೆ.
ಸೌಹಾರ್ದತೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ: ಉಳ್ಳಾಲ ಸೈಯದ್ ಮದನಿ ಜುಮ್ಮಾ ಮಸೀದಿಗೆ ₹5 ಕೋಟಿ ಸೇರಿದಂತೆ ವಿವಿಧ ಚರ್ಚ್‌ಗಳು, ಮಸೀದಿಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿಗೂ ವಿಶೇಷ ನೆರವು ಘೋಷಿಸಲಾಗಿದೆ.
ಜಾನಪದ ಕ್ರೀಡೆಗೆ ಪ್ರೋತ್ಸಾಹ: ಕರಾವಳಿಯ ಹೆಮ್ಮೆಯ ಸಾಂಪ್ರದಾಯಿಕ ಜಾನಪದ ಕ್ರೀಡೆಯಾದ 'ಕಂಬಳ'ಕ್ಕೆ ನೀಡುತ್ತಿದ್ದ ವಾರ್ಷಿಕ ಅನುದಾನವನ್ನು ₹40 ಲಕ್ಷದಿಂದ ₹1 ಕೋಟಿಗೆ ಭರ್ಜರಿಯಾಗಿ ಏರಿಕೆ ಮಾಡಲಾಗಿದೆ.




