ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷೆಯ ‘ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜ್‌ಗಾರ್ ಯೋಜನೆ’ ಅಡಿಯಲ್ಲಿ ದೇಶಾದ್ಯಂತ 15 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಒಟ್ಟು ರೂ.2,400 ಕೋಟಿ ಪ್ರೋತ್ಸಾಹಧನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ನೇರ ನಗದು ವರ್ಗಾವಣೆ ಮೂಲಕ ಬಿಡುಗಡೆ ಮಾಡಿದರು.
ಇದರ ಭಾಗವಾಗಿ ದೇಶದ 200 ಕೇಂದ್ರಗಳಲ್ಲಿ ಪ್ರಾದೇಶಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಚಿತ್ರದುರ್ಗದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದ ಸರ್ ಎಂ.ವಿ. ಸೆಮಿನಾರ್ ಹಾಲ್‌ನಲ್ಲಿ ವಿಶೇಷ ಪ್ರಾದೇಶಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ಗೋವಿಂದ ಎಂ. ಕಾರ್ಜೋಳ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದು, ಸಸಿಗೆ ನೀರು ಎರೆಯುವ ಮೂಲಕ ಕಾಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ 46 ನೌಕರ ಫಲಾನುಭವಿಗಳು, 8 ಉದ್ಯೋಗದಾತರು, ಕೈಗಾರಿಕಾ ಸಂಘಗಳ ಪ್ರತಿನಿಧಿಗಳು, ಸಾರ್ವಜನಿಕ ಪ್ರತಿನಿಧಿಗಳು, ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಇಪಿಎಫ್‌ಒ (ಇPಈಔ) ಅಧಿಕಾರಿಗಳು ಸೇರಿದಂತೆ ಒಟ್ಟು 120ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಹೊಸದಾಗಿ ಆಯ್ಕೆಯಾದ ಯುವಕ-ಯುವತಿಯರಿಗೆ ವಿವಿಧ ಕಂಪನಿಗಳ ಉದ್ಯೋಗದಾತರಿಂದ ಅಧಿಕೃತ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು.
ನವದೆಹಲಿಯ ಮುಖ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಈ ಯೋಜನೆಯ ಮೂಲಕ ಈಗಾಗಲೇ ದೇಶದಲ್ಲಿ ಸುಮಾರು 70 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. 20 ಲಕ್ಷ ಯುವ ನೌಕರರು ತಮ್ಮ ಮೊದಲ 6 ತಿಂಗಳ ಅವಧಿಯನ್ನು ಯಶಸ್ವಿಯಾಗಿ ಪೂರೈಸಿದ್ದು, ಈ ಪೈಕಿ 10 ಲಕ್ಷ ಯುವಕರಿಗೆ ಇಂದಿನ ಕಾರ್ಯಕ್ರಮದಲ್ಲಿ ನೇರ ಪ್ರೋತ್ಸಾಹಧನ ತಲುಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪಿ.ಎಂ.ವಿಬಿಆರ್‌ವೈ ಒಂದು ಉದ್ಯೋಗ ಆಧಾರಿತ ಪ್ರೋತ್ಸಾಹಕ' ಯೋಜನೆಯಾಗಿದೆ. ಇದರ ಮೊದಲ ಭಾಗ ಎ ನಲ್ಲಿ ಮೊದಲ ಬಾರಿಗೆ ಸಂಘಟಿತ ವಲಯಕ್ಕೆ ಸೇರುವ ಉದ್ಯೋಗಿಗಳಿಗೆ ಗರಿಷ್ಠ ರೂ.15,000 ವರೆಗೆ ಒಂದು ತಿಂಗಳ ವೇತನದ ಪ್ರೋತ್ಸಾಹಧನ ಸಿಗಲಿದೆ. ಎರಡನೇ ಭಾಗ ಬಿ ಅಡಿ ಉದ್ಯೋಗದಾತರಿಗೆ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಸಂಸ್ಥೆಗಳಿಗೆ ಎರಡು ವರ್ಷಗಳ ಅವಧಿಗೆ ಆರ್ಥಿಕ ಪ್ರೋತ್ಸಾಹಧನ ನೀಡಲಾಗುತ್ತದೆ. ತಯಾರಿಕಾ ವಲಯಕ್ಕೆ ಇದನ್ನು ಹೆಚ್ಚುವರಿ ಎರಡು ವರ್ಷಗಳವರೆಗೆ ವಿಸ್ತರಿಸಲಾಗಿದೆ.



