ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದ್ದು, 14ನೇ ಆರೋಪಿ ಪ್ರದೋಷ್ನನ್ನು ಮಾಫಿ ಸಾಕ್ಷಿಯಾಗಿ 59ನೇ ಸಿಸಿಹೆಚ್ ನ್ಯಾಯಾಲಯ ಅಂಗೀಕರಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ದಾಖಲಿಸಿಕೊಳ್ಳಲು ಬರುವ ಸೆಪ್ಟೆಂಬರ್ 2ರಂದು ಕೋರ್ಟ್ಗೆ ಹಾಜರಾಗುವಂತೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ನ್ಯಾಯಾಂಗ ಬಂಧನದಲ್ಲಿರುವ ಪ್ರದೋಷ್, ಕೊಲೆ ಪ್ರಕರಣದಲ್ಲಿ ತನ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಕೆಂದು ಕೋರಿ ಸಿಆರ್ಪಿಸಿ ಸೆಕ್ಷನ್ 307ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯಲ್ಲಿ ನೀಡಲಾದ ಅಂಶಗಳ ಕುರಿತು ಸ್ಪಷ್ಟತೆ ಪಡೆಯಲಾಗಿದ್ದು, ಆಗಸ್ಟ್ 25ರಂದು ಅರ್ಜಿಯನ್ನು ಪುರಸ್ಕರಿಸಲಾಗಿತ್ತು. ಇದೀಗ ನ್ಯಾಯಾಧೀಶರಾದ ಸುಜಾತ ಮಡಿವಾಳಪ್ಪ ಸಾಂಬ್ರಾಣಿ ಅವರು ಸೆಪ್ಟೆಂಬರ್ 2ರಂದು ಪ್ರದೋಷ್ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಜೈಲಧಿಕಾರಿಗಳಿಗೆ ಸೂಚಿಸಿದ್ದಾರೆ.
ಪೂರ್ಣ ಸತ್ಯ ಬಹಿರಂಗಪಡಿಸಬೇಕು: ಪ್ರಕರಣದ ಕುರಿತು ತನಗೆ ತಿಳಿದಿರುವ ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸಬೇಕು. ಕೊಲೆಯಲ್ಲಿ ಭಾಗಿಯಾದ ಇತರ ಆರೋಪಿಗಳ ಪಾತ್ರ ಹಾಗೂ ಮಾಹಿತಿಗಳನ್ನು ಯಾವುದೇ ಮುಚ್ಚುಮರೆಯಿಲ್ಲದೆ ವಿವರಿಸಬೇಕು.
ಸುಳ್ಳು ಸಾಕ್ಷ್ಯ ನೀಡಿದರೆ ಶಿಕ್ಷೆ ಎಚ್ಚರಿಕೆ: ಒಂದು ವೇಳೆ ಪ್ರದೋಷ್ ನೀಡುವ ಹೇಳಿಕೆಗಳು ಸುಳ್ಳಾಗಿದ್ದರೆ ಅಥವಾ ಮುಂದೆ ತನ್ನ ಹೇಳಿಕೆಯಿಂದ ಹಿಂದೆ ಸರಿದರೆ, ಆತನ ಮಾಫಿ ಸಾಕ್ಷಿ ಅಂತಸ್ತನ್ನು ರದ್ದುಗೊಳಿಸಿ ಮತ್ತೆ ಆತನನ್ನು ಆರೋಪಿಯನ್ನಾಗಿಯೇ ಪರಿಗಣಿಸಲಾಗುವುದು ಮತ್ತು ಸುಳ್ಳು ಸಾಕ್ಷ್ಯದ ಪ್ರತ್ಯೇಕ ಪ್ರಕರಣ ದಾಖಲಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.
ಪ್ರಕರಣದ ಹಿನ್ನೆಲೆ: 2024ರ ಜೂನ್ನಲ್ಲಿ ನಡೆದಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಮಂದಿಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು. ನಂತರ ಜಾಮೀನು ರದ್ದಾದ ಹಿನ್ನೆಲೆಯಲ್ಲಿ ಪ್ರದೋಷ್ ಸೇರಿದಂತೆ ಏಳು ಮಂದಿ ಆರೋಪಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಸೆಪ್ಟೆಂಬರ್ 2ರಂದು ಪ್ರದೋಷ್ ಕೋರ್ಟ್ಗೆ ಹಾಜರಾಗಿ ನೀಡಲಿರುವ ಸಾಕ್ಷಿ ಹೇಳಿಕೆಯು ಪ್ರಕರಣದ ತನಿಖೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.




