ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆಯಾಗಿದ್ದು, ಪ್ರಕರಣದ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಸಲ್ಲಿಸಿದ್ದ ಅರ್ಜಿಯನ್ನು 59ನೇ ಸಿಸಿಹೆಚ್ ನ್ಯಾಯಾಲಯ ಅಂಗೀಕರಿಸಿದೆ.
ಕಳೆದ ವಿಚಾರಣೆ ವೇಳೆ ಅರ್ಜಿಯಲ್ಲಿರುವ ಪ್ರಮುಖ ಅಂಶಗಳ ಕುರಿತು ಸ್ಪಷ್ಟತೆ ಪಡೆದುಕೊಂಡಿದ್ದ ನ್ಯಾಯಾಲಯ, ಇದೀಗ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಲು ಸಮ್ಮತಿಸಿದೆ. ಅಲ್ಲದೆ, ಈ ಆದೇಶದ ಪ್ರತಿಯನ್ನು ಜೈಲಿನಲ್ಲಿರುವ ಪ್ರದೋಷ್ಗೆ ತಲುಪಿಸಿ ಅವರಿಂದ ಸಹಿ ಪಡೆದುಕೊಳ್ಳುವಂತೆ ಜೈಲಾಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ನ್ಯಾಯಾಲಯದ ಪ್ರಮುಖ ಷರತ್ತುಗಳು: ಸಂಪೂರ್ಣ ಸತ್ಯ ಹೊರಹಾಕಲು ಸೂಚನೆ: ಸಿಆರ್ಪಿಸಿ (CrPC) ಸೆಕ್ಷನ್ 307ರ ಅಡಿಯಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯ, ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ಸತ್ಯವನ್ನು ಯಾವುದೇ ಮುಚ್ಚುಮರೆಯಿಲ್ಲದೆ ತಿಳಿಸಬೇಕು ಎಂದು ಷರತ್ತು ವಿಧಿಸಿದೆ.
ಇತರ ಆರೋಪಿಗಳ ಪಾತ್ರ ಬಹಿರಂಗ: ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಇತರೆ ಆರೋಪಿಗಳ ಪಾತ್ರ ಹಾಗೂ ತನ್ನ ಬಳಿಯಿರುವ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಬಹಿರಂಗಪಡಿಸಬೇಕಿದೆ.
ಸುಳ್ಳು ಸಾಕ್ಷಿ ನೀಡಿದರೆ ಕಾನೂನು ಕ್ರಮ: ಒಂದು ವೇಳೆ ವಿಚಾರಣೆ ವೇಳೆ ನೀಡುವ ಹೇಳಿಕೆಗಳು ಸುಳ್ಳಾಗಿದ್ದರೆ ಅಥವಾ ನಂತರದ ದಿನಗಳಲ್ಲಿ ಹೇಳಿಕೆಯಿಂದ ಹಿಂದೆ ಸರಿದರೆ, ಅವರನ್ನು ಮತ್ತೆ ಆರೋಪಿಯನ್ನಾಗಿ ಪರಿಗಣಿಸಿ, ಸುಳ್ಳು ಸಾಕ್ಷ್ಯ ನೀಡಿದ ಆರೋಪದಡಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಸಿದೆ.
ಪ್ರದೋಷ್ ಮಾಫಿ ಸಾಕ್ಷಿಯಾಗಿ ಬದಲಾಗಿರುವುದರಿಂದ, ಈ ಭೀಕರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಇತರೆ ಆರೋಪಿಗಳಿಗೆ ಕಾನೂನಿನ ಸಂಕಷ್ಟ ಮತ್ತಷ್ಟು ಬಿಗಿಯಾಗುವ ಸಾಧ್ಯತೆಯಿದೆ.




