ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಹುಚರ್ಚಿತ ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ತಿದ್ದುಪಡಿ ತಂದಿದ್ದು, ಸಾಕ್ಷಿಗಳ ಪಾಟಿ ಸವಾಲು ವೇಳೆ ನಟ ದರ್ಶನ್ ಹಾಗೂ ಇತರೆ ಆರೋಪಿಗಳು ಖುದ್ದು ಹಾಜರಾಗಲು ಹೈಕೋರ್ಟ್ ಅನುಮತಿ ನೀಡಿ ಮಹತ್ವದ ಆದೇಶ ಹೊರಡಿಸಿದೆ.
ಸಾಕ್ಷಿಗಳ ಪಾಟಿ ಸವಾಲಿನ ವೇಳೆ ಆರೋಪಿಗಳು ಖುದ್ದು ಹಾಜರಾಗಲು ಅನುಮತಿ ನಿರಾಕರಿಸಿ ಕೆಳ ಹಾಲಿನ ನ್ಯಾಯಾಲಯ (ಸೆಷನ್ಸ್ ಕೋರ್ಟ್) ನೀಡಿದ್ದ ಆದೇಶವನ್ನು ಪ್ರಶ್ನಿಸಿ ನಟ ದರ್ಶನ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.
ಪಾಟಿ ಸವಾಲಿಗೆ ಪ್ರತ್ಯೇಕ ದಿನಾಂಕ: ಪ್ರಕರಣದ ಪ್ರಮುಖ 7 ಸಾಕ್ಷಿಗಳ ಮುಖ್ಯ ವಿಚಾರಣೆ ಮುಗಿದ ಬಳಿಕ, ಪಾಟಿ ಸವಾಲು ನಡೆಸಲು ಪ್ರತ್ಯೇಕ ದಿನಾಂಕಗಳನ್ನು ನಿಗದಿಪಡಿಸಬೇಕು ಎಂದು ಸೆಷನ್ಸ್ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಖುದ್ದು ಹಾಜರಾತಿಗೆ ಅವಕಾಶ: ನಿಗದಿತ ದಿನಾಂಕಗಳಂದು ಪಾಟಿ ಸವಾಲು ನಡೆಯುವ ಸಮಯದಲ್ಲಿ ದರ್ಶನ್ ಹಾಗೂ ಅನುಮತಿ ಕೋರುವ ಇತರೆ ಆರೋಪಿಗಳು ಕೋರ್ಟ್ಗೆ ಖುದ್ದಾಗಿ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ.
ಸೂಕ್ತ ಭದ್ರತೆ ಮತ್ತು ಇನ್ ಕೆಮರಾ ವಿಚಾರಣೆ: ವಿಚಾರಣೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ರಾಜ್ಯ ಸರ್ಕಾರ ಹಾಗೂ ಪೊಲೀಸರು ಸೂಕ್ತ ಭದ್ರತೆ ಒದಗಿಸಿ ಆರೋಪಿಗಳನ್ನು ಸೆಷನ್ಸ್ ಕೋರ್ಟ್ಗೆ ಕರೆತರಬೇಕು. ಅಗತ್ಯವಿದ್ದರೆ ನ್ಯಾಯಾಲಯವು 'ಇನ್ ಕೆಮರಾ' (ಮುಚ್ಚಿದ ಕೋಣೆಯಲ್ಲಿ) ವಿಚಾರಣೆ ನಡೆಸಬಹುದು ಎಂದೂ ನ್ಯಾಯಪೀಠ ಸೂಚಿಸಿದೆ.




