ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶಾಖೆಯಲ್ಲಿ ಬಾಲ್ಯದಲ್ಲಿ ಆಡುತ್ತಿದ್ದ 'ಕಾಶ್ಮೀರ ಹಮಾರಾ ಹೈ' ಆಟದಿಂದ ಮೂಡಿದ ರಾಷ್ಟ್ರಭಕ್ತಿಯ ಭಾವನೆ ಇಂದು 'ಅಖಂಡ ಭಾರತ'ದ ನೈಜ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಸ್ಮರಿಸಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿ ರದ್ದುಗೊಳಿಸಿದ ದಿನದ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿರುವ ಅವರು, ಸಂಘದ ಶಾಖೆಯ ದಿನಗಳು ಇಂದಿಗೂ ಕಣ್ಣಿಗೆ ಕಟ್ಟಿದಂತಿವೆ ಎಂದಿದ್ದಾರೆ.
"ಬಾಲ್ಯದಲ್ಲಿ ಶಾಖೆಯ ಮೈದಾನದಲ್ಲಿ ನಾವೆಲ್ಲಾ ಚಿಕ್ಕ ಮಕ್ಕಳಾಗಿದ್ದಾಗ 'ಕಾಶ್ಮೀರ ಹಮಾರಾ ಹೈ' ಎಂಬ ಆಟವಾಡುತ್ತಿದ್ದೆವು. ಆಟದ ಮಧ್ಯೆ ಶಿಕ್ಷಕರು 'ಕಾಶ್ಮೀರ ಯಾರದ್ದು?' ಎಂದು ಸಿಂಹಗರ್ಜನೆ ಮಾಡಿದಾಗ, ಸ್ವಯಂಸೇವಕರೆಲ್ಲರೂ ಒಟ್ಟಾಗಿ, ಎದೆಯುಬ್ಬಿಸಿ 'ಭಾರತದ್ದು' ಎಂದು ಜಯಘೋಷ ಕೂಗುತ್ತಿದ್ದೆವು. ಮೈದಾನದ ಸಣ್ಣ ವೃತ್ತದಲ್ಲಿದ್ದ ಕಾಶ್ಮೀರವನ್ನು ರಕ್ಷಿಸಲು ಹೋರಾಡುತ್ತಿದ್ದೆವು" ಎಂದು ಸಿ.ಟಿ. ರವಿ ಗತಕಾಲದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಅಂದು ಶಾಖೆಯಲ್ಲಾಡಿದ ಆ ಆಟ ಕೇವಲ ದೈಹಿಕ ವ್ಯಾಯಾಮವಾಗಿರಲಿಲ್ಲ. ಬದಲಿಗೆ "ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರತ ಒಂದೇ" ಎಂಬ ಮಹಾನ್ ಚಿಂತನೆಯನ್ನು, ದೇಶಭಕ್ತಿಯ ಕಿಚ್ಚನ್ನು ರಕ್ತದ ಕಣಕಣದಲ್ಲೂ ಬಿತ್ತಿತ್ತು. ಬಾಲ್ಯದಲ್ಲಿ ಎದೆಯಲ್ಲಿ ಹೊತ್ತಿದ್ದ ಆ ರಾಷ್ಟ್ರಭಕ್ತಿಯ ಸಂಕಲ್ಪವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಸಾಕಾರಗೊಳಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಮಾತ್ರವಲ್ಲ, ಅದು ಪ್ರತಿಯೊಬ್ಬ ಭಾರತೀಯನ ಹೆಮ್ಮೆ. ಕಾಶ್ಮೀರ ಅಂದು, ಇಂದು ಮತ್ತು ಎಂದೆಂದಿಗೂ ನಮ್ಮದೇ ಎಂದು ಸಿ.ಟಿ. ರವಿ ಪ್ರತಿಪಾದಿಸಿದ್ದಾರೆ.



