ಚಂದ್ರವಳ್ಳಿ ನ್ಯೂಸ್, ಐಮಂಗಲ:
ಮಳೆ ಇಲ್ಲದೆ ತೀವ್ರ ಸಂಕಷ್ಟದಲ್ಲಿರುವ ಐಮಂಗಲ ಹೋಬಳಿಯ ರೈತರ ನೆರವಿಗೆ ಧಾವಿಸಿರುವ ಜಿಲ್ಲಾ ಉಸ್ತುವಾರಿ ಸಚಿವರಾದ ಟಿ. ರಘುಮೂರ್ತಿ ಅಣ್ಣ ಅವರು, ಹೋಬಳಿಯ 9 ಕೆರೆಗಳಿಗೆ ತುರ್ತಾಗಿ ಭದ್ರಾ ಮೇಲ್ದಂಡೆ ನೀರು ತುಂಬಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿರುತ್ತಾರೆ.
ಕಳೆದ ಶನಿವಾರ ಸಚಿವರನ್ನು ಭೇಟಿ ಮಾಡಿದ ಐಮಂಗಲ ಹೋಬಳಿಯ ರೈತರು ಹಾಗೂ ಮುಖಂಡರು, ರೈತರು ಎದುರಿಸುತ್ತಿರುವ ತೀವ್ರ ನೀರಿನ ಸಮಸ್ಯೆಯನ್ನು ವಿವರಿಸಿ ಮನವಿ ಸಲ್ಲಿಸಿದರು.
ಸಚಿವರ ಸಕಾರಾತ್ಮಕ ಸ್ಪಂದನೆ:
ರೈತರ ಮನವಿಗೆ ತಕ್ಷಣವೇ ಸ್ಪಂದಿಸಿದ ಸಚಿವ ಟಿ. ರಘುಮೂರ್ತಿ ಅವರು, "ಮೊದಲು ಅನ್ನಕೊಡುವ ರೈತರು ಸಂತುಷ್ಟರಾಗಿರಬೇಕು. ಭದ್ರಾ ಮೇಲ್ದಂಡೆ ಕಾಲುವೆಯಲ್ಲಿ ಒಟ್ಟು 3 ಟಿಎಂಸಿ ನೀರಿನಲ್ಲಿ ಇದೂವರೆಗೆ ಕೇವಲ 0.5 ಟಿಎಂಸಿ ನೀರು ಮಾತ್ರ ಬಂದಿದೆ. ರೈತರು ಯಾವುದೇ ಕಾರಣಕ್ಕೂ ಆತಂಕ ಪಡುವ ಅವಶ್ಯಕತೆಯಿಲ್ಲ, ನಾನು ಸಂಪೂರ್ಣವಾಗಿ ರೈತರ ಪರವಾಗಿದ್ದೇನೆ," ಎಂದು ಭರವಸೆ ನೀಡಿದರು.
ಅಲ್ಲದೆ, ನಾಳೆಯಿಂದಲೇ ಐಮಂಗಲ ಹೋಬಳಿಗೆ ಮೊದಲು ನೀರು ಹರಿಸುವಂತೆ ಭದ್ರಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳಿಗೆ ಸ್ಥಳದಲ್ಲೇ ಆದೇಶಿಸಿದರು. ಸಚಿವರ ಈ ಜನಪರ ನಿರ್ಧಾರಕ್ಕೆ ಮತ್ತು ರೈತರ ಪರ ಕಾಳಜಿಗೆ ಮುಖಂಡರು ಹಾಗೂ ರೈತರು ಮುಖಂಡರ ನಿಯೋಗ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಹಲವಾರು ಗಣ್ಯರು ಹಾಗೂ ಸ್ಥಳೀಯ ಮುಖಂಡರಾದ ಸುಹಾಸ್ ಸುಧಾಕರ್, ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಟಿ. ಕೃಷ್ಣಮೂರ್ತಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಪ್ಪ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಣ್ಣ, ಜಿಲ್ಲಾ ಪಂಚಾಯತ್ ಸದಸ್ಯ ನಾಗೇಂದ್ರ ನಾಯ್ಕ, ನಗರ ಸಭೆ ಮಾಜಿ ಅಧ್ಯಕ್ಷ ಅಜ್ಜಪ್ಪ, ಮುಖಂಡರಾದ ಗಿಡ್ಡೋಬನಹಳ್ಳಿ ಅಶೋಕ್ ಸೇರಿದಂತೆ ಐಮಂಗಲ ಹೋಬಳಿಯ ರೈತ ಬಂಧುಗಳು ಉಪಸ್ಥಿತರಿದ್ದರು.




