ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನೈಸ್ ಪೆರಿಫೆರಲ್ ರಿಂಗ್ ರೋಡ್ ಯೋಜನೆಗೆ ಭೂಮಿ ಕಳೆದುಕೊಂಡಿರುವ ಸುಮಾರು 50 ಹಳ್ಳಿಗಳ ರೈತರಿಗೆ ತಕ್ಷಣವೇ ಜಮೀನು ಹಿಂದಿರುಗಿಸಬೇಕು ಎಂದು ಆಗ್ರಹಿಸಿ ಬೃಹತ್ ಆಂದೋಲನ ನಡೆಸುವುದಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ತೋಟದ ಗುಡ್ಡದಹಳ್ಳಿಯಲ್ಲಿ ನೈಸ್ ಯೋಜನೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸ್ಥಳೀಯರ ಬಳಿಗೆ ಆಗಮಿಸಿ ಸಾಥ್ ನೀಡಿದ ಅವರು, ಸಂತ್ರಸ್ತರ ಪರವಾಗಿ ಸರ್ಕಾರದ ವಿರುದ್ಧ ಧ್ವನಿ ಎತ್ತಲು ತಾವೆಂದೂ ಸಿದ್ಧ ಎಂದರು.
ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ನೀಡಿದ ಪ್ರಮುಖ ಭರವಸೆ ಮತ್ತು ಹೇಳಿಕೆಗಳು ಹೀಗಿವೆ.
ಅಕ್ಟೋಬರ್ 2ರಿಂದ 'ನೈಸ್ ಸಂತ್ರಸ್ತರ ಜಮೀನು ವಾಪಸ್' ಆಂದೋಲನ: "ಬರುವ ಗಾಂಧಿ ಜಯಂತಿಯಂದು (ಅಕ್ಟೋಬರ್ 2) ರೈತರ ಪರವಾಗಿ ಬೃಹತ್ ಕಾರ್ಯಕ್ರಮ ಹಾಗೂ ಆಂದೋಲನಕ್ಕೆ ಚಾಲನೆ ನೀಡಲಾಗುವುದು. ಈ ಭಾಗದಿಂದ ಎಲೆಕ್ಟ್ರಾನಿಕ್ ಸಿಟಿಯವರೆಗೆ ಬೃಹತ್ ಪ್ರವಾಸ ನಡೆಸಿ ಜಾಗೃತಿ ಮೂಡಿಸುತ್ತೇನೆ," ಎಂದು ತಿಳಿಸಿದರು.
ರೈತರ ಹಿತಾಸಕ್ತಿಯೇ ಮುಖ್ಯ: "ನಿಮ್ಮನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುವ ಉದ್ದೇಶ ನನಗಿಲ್ಲ. ಈಗಾಗಲೇ ರಾಜ್ಯದ ಆರೂವರೆ ಕೋಟಿ ಜನರ ಪ್ರೀತಿ-ವಿಶ್ವಾಸ ಸಂಪಾದಿಸಿದ್ದೇನೆ. ಮಾತು ತಪ್ಪದೆ ನಿಮ್ಮ ನ್ಯಾಯಯುತ ಹೋರಾಟದ ಪರವಾಗಿ ಕೊನೆಯವರೆಗೂ ನಿಲ್ಲುತ್ತೇನೆ," ಎಂದು ಸಂತ್ರಸ್ತರಿಗೆ ಅಭಯ ನೀಡಿದರು.




