ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನೆದರ್ಲ್ಯಾಂಡ್ಸ್ನ ಪ್ರಸಿದ್ಧ 'ರಾಯಲ್ ಸ್ವಿಂಕಲ್ಸ್' ಸಂಸ್ಥೆಯು ಕರ್ನಾಟಕದಲ್ಲಿ ಹೂಡಿಕೆ ಹಾಗೂ ಉತ್ಪಾದನಾ ಘಟಕ ಸ್ಥಾಪಿಸಲು ಉತ್ಸುಕತೆ ತೋರಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ತಿಳಿಸಿದ್ದಾರೆ.
ರಾಜ್ಯಕ್ಕೆ ಹೆಚ್ಚಿನ ವಿದೇಶಿ ಬಂಡವಾಳ ಆಕರ್ಷಿಸುವ ಉದ್ದೇಶದಿಂದ ನೆದರ್ಲ್ಯಾಂಡ್ಸ್ ಪ್ರವಾಸದಲ್ಲಿರುವ ಸಚಿವರ ನೇತೃತ್ವದ ಉನ್ನತ ಮಟ್ಟದ ನಿಯೋಗವು 300ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ರಾಯಲ್ ಸ್ವಿಂಕಲ್ಸ್ ಸಂಸ್ಥೆಯ ನಾಯಕತ್ವದೊಂದಿಗೆ ಪ್ರಮುಖ ಸಭೆ ನಡೆಸಿತು.
ಜಾಗತಿಕ ಮಟ್ಟದ ಸಂಸ್ಥೆ: ಬಿಯರ್, ಆಲ್ಕೋಹಾಲ್ರಹಿತ ಪಾನೀಯಗಳು, ಸಾಫ್ಟ್ ಡ್ರಿಂಕ್ಸ್, ಮಾಲ್ಟ್ ಹಾಗೂ ಮಾಲ್ಟ್ ಎಕ್ಸ್ಟ್ರಾಕ್ಟ್ಸ್ ಕ್ಷೇತ್ರಗಳಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಈ ಕಂಪನಿಯು ಭಾರತ ಹಾಗೂ ಕರ್ನಾಟಕದಲ್ಲಿ ವಿಸ್ತರಣೆ ಮಾಡಲು ಆಸಕ್ತಿ ವ್ಯಕ್ತಪಡಿಸಿದೆ.
ರಾಜ್ಯಕ್ಕೆ ಆಹ್ವಾನ: ಕರ್ನಾಟಕದ ಹೂಡಿಕೆಸ್ನೇಹಿ ವಾತಾವರಣ, ಮೂಲಸೌಕರ್ಯ ಹಾಗೂ ಉದ್ಯಮ ಸ್ನೇಹಿ ನೀತಿಗಳ ಬಗ್ಗೆ ಸಂಸ್ಥೆಗೆ ಮನವರಿಕೆ ಮಾಡಿಕೊಟ್ಟ ಸಚಿವರು, ಶೀಘ್ರವೇ ಕರ್ನಾಟಕಕ್ಕೆ ಭೇಟಿ ನೀಡಿ ಭವಿಷ್ಯದ ವಿಸ್ತರಣಾ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಅಧಿಕೃತ ಆಹ್ವಾನ ನೀಡಿದ್ದಾರೆ.
ರಾಜ್ಯದಲ್ಲಿ ಹೊಸ ಉದ್ಯೋಗ ಸೃಷ್ಟಿ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ನೀಡಲು ನೆದರ್ಲ್ಯಾಂಡ್ಸ್ನ ಪ್ರಮುಖ ಕಂಪನಿಗಳೊಂದಿಗೆ ಹೂಡಿಕೆ ಮಾತುಕತೆಯನ್ನು ಯಶಸ್ವಿಯಾಗಿ ಮುಂದುವರಿಸಲಾಗಿದೆ.




