ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಹಸಿರು ಇಂಧನ ಹಾಗೂ ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ 'ರೆನೆಸಾನ್ಸ್ ಸೋಲಾರ್ ಅಂಡ್ ಎಲೆಕ್ಟ್ರಾನಿಕ್ ಮೆಟೀರಿಯಲ್ಸ್' ಸಂಸ್ಥೆಯು ತುಮಕೂರಿನಲ್ಲಿ ₹5,000 ಕೋಟಿ ಬೃಹತ್ ಹೂಡಿಕೆ ಮಾಡಲು ಮುಂದೆ ಬಂದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ತಿಳಿಸಿದ್ದಾರೆ.
ತುಮಕೂರಿನಲ್ಲಿ 5 ಜಿಗಾವಾಟ್ ಸಾಮರ್ಥ್ಯದ ಸೌರ ಉಪಕರಣ ಉತ್ಪಾದನಾ ಘಟಕ ಸ್ಥಾಪಿಸಲು ಆರ್ಎಸ್ಒಎಲ್ಇಸಿ ಸಂಸ್ಥೆ ಬದ್ಧತೆ ವ್ಯಕ್ತಪಡಿಸಿದೆ. ಈ ಬೃಹತ್ ಯೋಜನೆಯಿಂದ ಸಾವಿರಾರು ನೂತನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಸ್ಥಳೀಯ ಆರ್ಥಿಕತೆಗೆ ಭಾರಿ ಉತ್ತೇಜನ ದೊರೆಯಲಿದೆ. ಜೊತೆಗೆ ಈ ಭಾಗವು ಸೌರ ಉತ್ಪಾದನಾ ವಲಯದಲ್ಲಿ ಪ್ರಮುಖ ತಾಂತ್ರಿಕ ಕೇಂದ್ರವಾಗಿ ಹೊರಹೊಮ್ಮಲಿದೆ.
ಸಂಸ್ಥೆಯ ಅಧ್ಯಕ್ಷ ಡಾ. ಮಿಲಿಂದ್ ಎಸ್. ಕುಲಕರ್ಣಿ ಅವರೊಂದಿಗೆ ಸಚಿವ ಎಂ. ಬಿ. ಪಾಟೀಲ್ ಇಲಾಖೆಯ ಉನ್ನತಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು. ಯೋಜನೆಗೆ ಅಗತ್ಯವಿರುವ ಜಮೀನು, ಮೂಲಸೌಕರ್ಯ ಮತ್ತು ಶೀಘ್ರ ಸರ್ಕಾರಿ ಮಂಜೂರಾತಿ ಸೇರಿದಂತೆ ಎಲ್ಲ ರೀತಿಯ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಸೌರಶಕ್ತಿ ಮತ್ತು ಸೆಮಿಕಂಡಕ್ಟರ್ ನಂತಹ ಭವಿಷ್ಯದ ಅತ್ಯಾಧುನಿಕ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ಜಾಗತಿಕ ಮಟ್ಟದ ಪ್ರಮುಖ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸುವ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ಈ ಯೋಜನೆ ಮಹತ್ವದ ಮೈಲಿಗಲ್ಲಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.




