LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವೇತನ ಪರಿಷ್ಕರಣೆ ಆಗಬೇಕು-ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲ ಗೌಡ

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ನೀಡಲಾಗುತ್ತಿರುವ ವೇತನ ತುಂಬಾ ಕಡಿಮೆಯಾಗಿದ್ದು, ಕಾರ್ಮಿಕ ಇಲಾಖೆಯು ನಿಗದಿ ಮಾಡಿರುವ ಕನಿಷ್ಠ ವೇತನವನ್ನಾದರೂ ನೀಡಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಹಾಗೂ ರಾಜ್ಯ ಮಟ್ಟದ ಅಪೌಷ್ಟಿಕತೆ ತಡೆ ಸಮಿತಿಯ ಅಧ್ಯಕ್ಷರಾಗಿರುವ ಮಾನ್ಯ ನ್ಯಾಯಮೂರ್ತಿ ಎ. ಎನ್. ವೇಣುಗೋಪಾಲ ಗೌಡ ಅವರು ಆಗ್ರಹಿಸಿದರು.

ಇಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಸದಸ್ಯ ಕಾರ್ಯದರ್ಶಿಗಳು ಹಾಗೂ ಸಮಿತಿಯ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ರಾಜ್ಯದಾದ್ಯಂತ ಅಂಗನವಾಡಿ ಕೇಂದ್ರಗಳಲ್ಲಿ ಇರುವ ಸಮಸ್ಯೆಗಳು, ಖಾಲಿ ಇರುವ ಹುದ್ದೆಗಳ ಭರ್ತಿ, ಮುಂತಾದ ವಿಷಯಗಳ ಕುರಿತು ಚರ್ಚೆ ನಡೆಸಿದ ಅವರು, ಅಂಗನವಾಡಿ ಕಾರ್ಯಕರ್ತೆಯರಿಗೆ 12 ಸಾವಿರ ಮತ್ತು ಸಹಾಯಕರಿಗೆ 7 ಸಾವಿರ ಸಂಭಾವನೆ ನೀಡುತ್ತಿರುವುದು ತುಂಬಾ ಕನಿಷ್ಠವಾಗಿದೆ. ಈಗಿನ ಕಾಲದಲ್ಲಿ ಕೇವಲ ಮೂರರಿಂದ  ನಾಲ್ಕು ಗಂಟೆ ಮನೆ ಕೆಲಸ ಮಾಡುವವರೇ ಇವರಿಗಿಂತ ಹೆಚ್ಚು ದುಡಿಯುತ್ತಿದ್ದಾರೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ತನಕ ಕೆಲಸ ಮಾಡುವ ಇವರಿಗೆ ಇಷ್ಟು ಕಡಿಮೆ ವೇತನ ನೀಡುತ್ತಿರುವುದು ಸರಿಯಲ್ಲ. ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಅವರು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.

ಸದ್ಯ ರಾಜ್ಯದಲ್ಲಿ 69,923 ಅಂಗನವಾಡಿಗಳಿದ್ದು, ಅವುಗಳಲ್ಲಿ ಬಹಳಷ್ಟು ಅಂಗನವಾಡಿಗಳಲ್ಲಿ ಸಿಬ್ಬಂದಿಗಳ ಕೊರತೆ ಇರುವುದರಿಂದ ಖಾಲಿ ಇರುವ 2327 ಅಂಗನವಾಡಿ ಕಾರ್ಯಕರ್ತೆಯರು ಮತ್ತು 8484 ಸಹಾಯಕಿಯರ ಹುದ್ದೆಗಳನ್ನು  ಕೂಡ ಕೂಡಲೇ  ಭರ್ತಿ ಮಾಡಲು ಕ್ರಮವಹಿಸುವಂತೆ ಅವರು ತಿಳಿಸಿದರು.

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳು ನಾನೇ ಸ್ವತಃ ಭೇಟಿ ನೀಡಿ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಬಹುಪಾಲು ಅಂಗನವಾಡಿಗಳು ಶುಚಿತ್ವದಿಂದ ಕೂಡಿಲ್ಲದಿರುವುದು ಕಂಡುಬಂದಿತು. ಸೂಪರ್ವೈಸರ್ ಗಳು ಮತ್ತು ಸಿಡಿಪಿಓ ಗಳು ತಮ್ಮ ವ್ಯಾಪ್ತಿಗೆ ಬರುವ ಅಂಗನವಾಡಿಗಳಿಗೆ ಕನಿಷ್ಟ ತಿಂಗಳಿಗೆ ಒಮ್ಮೆಯಾದರೂ ಭೇಟಿ ನೀಡುತ್ತಿಲ್ಲ. ಕೆಲವು ಅಂಗನವಾಡಿಗಳು ತುಂಬಾ ಕಿರಿದಾಗಿರುವುದರಿಂದ ಮಕ್ಕಳು ಇರುವ ಜಾಗದಲ್ಲಿಯೇ ಗ್ಯಾಸ್ ಒಲೆ ಇಟ್ಟುಕೊಂಡು ಅಡುಗೆಯನ್ನು ಮಾಡಲಾಗುತ್ತಿದೆ. ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಇಂತಹ ಅಂಗನವಾಡಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಬೇಕು. ಹಾಗೆಯೇ ಸದಸ್ಯ ಕಾರ್ಯದರ್ಶಿಗಳು ಗುರುತು ಮಾಡಿರುವ ಹಳೆಯದಾಗಿರುವ ಮತ್ತು ಸೋರುತ್ತಿರುವ ಅಂಗನವಾಡಿ ಕಟ್ಟಡಗಳ ದುರಸ್ಥಿಗೆ ಕೂಡಲೇ ಕ್ರಮವಹಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಕ್ಕಳಲ್ಲಿ ದೇವರನ್ನು ಕಾಣುತ್ತೇವೆ. ಅಂತಹ ಮಕ್ಕಳ ದೈಹಿಕ ಬೆಳವಣಿಗೆಯ ದೃಷ್ಠಿಯಿಂದ ಅಂಗನವಾಡಿ ಕೇಂದ್ರಗಳು ಗಾಳಿ, ಬೆಳಕು ಮತ್ತು ಶುಚಿತ್ವದಿಂದ ಕೂಡಿರುವಂತೆ ಇರಬೇಕು. ಶುಚಿತ್ವ ಮತ್ತು ಮಕ್ಕಳ ಪಾಲನೆ ಪೋಷಣೆ ಕುರಿತು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ತರಬೇತಿಯನ್ನು ನೀಡಬೇಕು. ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರನ್ನು ಎಸ್.ಐ.ಆರ್. ಕಾರ್ಯಕ್ಕೆ ನಿಯೋಜಿಸಿರುವುದರಿಂದ ಬಹುಪಾಲು ಅಂಗನವಾಡಿ ಕೇಂದ್ರಗಳಿಗೆ ಬೀಗ ಹಾಕಲಾಗಿದೆ. ಮಕ್ಕಳ ಪಾಲನೆ ಪೋಷಣೆಯಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ಇನ್ನು ಮುಂದೆ ಯಾವುದೇ ಇತರೆ ಕೆಲಸಗಳಿಗೆ ನೇಮಕ ಮಾಡಕೊಳ್ಳದಿರುವಂತೆ ಇಲಾಖೆ ವತಿಯಿಂದ ಕ್ರಮವಹಿಸುವಂತೆ ಸೂಚನೆ ನೀಡಿದರು.

ಕೆಲವು ಕಡೆ ಕಳಪೆ ಗುಣಮಟ್ಟದ ಹಾಗೂ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಬಳಸಿ ಅಡುಗೆ ತಯಾರಿಸುತ್ತಿರುವುದು ಕಂಡುಬಂದಿರುವುದರಿಂದ ಆಹಾರ ಇಲಾಖೆಯವರು ಅಂಗನವಾಡಿಗೆ ಪೂರೈಕೆಯಾಗುವ ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲಿಸುವಂತೆ ಸೂಚಿಸಿದರು.

ಈ ವರ್ಷ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇರುವುದಾಗಿ ಆತಂಕ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಕಲುಶಿತ ನೀರಿನಿಂದಾಗಿ ಮಕ್ಕಳು ಬೇಗ ಅನಾರೋಗ್ಯ ಪೀಡಿತರಾಗುವ ಸಂಭವ ಇರುತ್ತದೆ. ಹಾಗಾಗಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ಅಂಗನವಾಡಿಗಳನ್ನು ಗುರುತಿಸಿ, ಯಾರಾದರು ದಾನಿಗಳ ಸಹಾಯದಿಂದಲಾದರೂ ಮಕ್ಕಳಿಗೆ ಶುದ್ಧ ಕುಡಿಯುವ ನೀರು ದೊರೆಯುವಂತೆ ಮಾಡುವಂತೆ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.

ಅಂಗನವಾಡಿ ಕೇಂದ್ರಗಳಿಗೆ ಆರೋಗ್ಯಾಧಿಕಾರಿಗಳು ಆರು ತಿಂಗಳಿಗೆ ಒಮ್ಮೆಯಾದರೂ ಭೇಟಿ ನೀಡದಿರುವುದು ಕೂಡ ಕಂಡುಬಂದಿದ್ದು, ಕೆಲವು ಅಂಗನವಾಡಿಗಳಲ್ಲಿ ಮಕ್ಕಳಿಗೆ ನೀಡಬಹುದಾದ ವಿಟಮಿನ್ ಔಷಧಿಗಳು ಅವಧಿ ಮೀರಿ ಹಾಗೆಯೇ ಉಳಿದಿದೆ. ಅಲ್ಲದೆ, ಗರ್ಭಿಣಿಯರ ಮತ್ತು ಹೆರಿಗೆ ದಾಖಲೆಗಳು ಇರದಿರುವುದು ಕಂಡುಬಂದಿರುವ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರು.

ಇಂತಹ ನ್ಯೂನತೆಗಳನ್ನು ತಡೆಯಬೇಕಾದರೆ, ಸೂಪರ್ವೈಸರ್ ಮತ್ತು ಸಿಡಿಪಿಓ ಗಳು ಪ್ರತಿ ದಿನ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಪ್ರತಿ ದಿನ ಅಂಗನವಾಡಿ ಕಾರ್ಯಕರ್ತೆ, ಸಹಾಯಕರು, ಸೂಪರ್ವೈಸರ್ ಮತ್ತು ಒಂದು ಮಗುವಿನ ತಾಯಿ ಹಾಜರಾತಿಯಲ್ಲಿ ಸಹಿ ಹಾಕಲೇ ಬೇಕು. ಇದನ್ನು ಆಗಾಗ ಹಿರಿಯ ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡುವ ಮೂಲಕ ಪರಿಶೀಲಿಸಬೇಕು ಎಂದರು.

ಹಿರಿಯ ಅಧಿಕಾರಿಗಳು ಕಚೇರಿ ಸಂಬಂಧವಾಗಿ ಓಡಾಡುವ ಸಂದರ್ಭದಲ್ಲಿಯೇ ದಿನಕ್ಕೆ ಒಂದೆರಡು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದರೂ ಅಲ್ಲಿಯ ನ್ಯೂನತೆಗಳನ್ನು ಸರಿಪಡಿಸಲು ಸಾಧ್ಯವಾಗುತ್ತದೆ ಎಂದರು.

ನ್ಯಾಯಮೂರ್ತಿ ಅವರಿಗೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ನೀಡಲಾಗುತ್ತಿರುವ ಇತರೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಯು, ಸೇವಾ ಹಿರಿತನದ ಆಧಾರದ ಮೇಲೆ ಗೌರವಧನ ಪಾವತಿ, ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ, ಗರಿಷ್ಟ 50 ಸಾವಿರ ರೂಗಳ ವೈದ್ಯಕೀಯ ವೆಚ್ಚ ಮರು ಪಾವತಿ ಸೌಲಭ್ಯ, ಸೇವೆಯಲ್ಲಿದ್ದಾಗ ಮರಣ ಹೊಂದಿದರೆ ಅವಲಂಬಿತರಿಗೆ 50 ಸಾವಿರ ಪರಿಹಾರ ಮತ್ತು ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ ಎಂಬ ಮಾಹಿತಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಆರೋಗ್ಯ, ಶಿಕ್ಷಣ ಇಲಾಖೆ ಸೇರಿದಂತೆ ಮತ್ತಿತರ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ರಾಜ್ಯದ ಎಲ್ಲಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಸದಸ್ಯ ಕಾರ್ಯದರ್ಶಿಗಳು ವೀಡಿಯೊ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸುವ ಮೂಲಕ ಈ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾವೇರಿ ಕಿಚ್ಚು: ಸುಪ್ರೀಂ ತೀರ್ಪು ನೋಡಿ ಮುಂದಿನ ನಿರ್ಧಾರ, ಹೆಚ್‌ಡಿಕೆಗೆ ಸಚಿವ ರಾಮಲಿಂಗಾರೆಡ್ಡಿ ಸವಾಲು!ಉಗ್ರರೂಪ ತಾಳಿದ ಕಾವೇರಿ ಕಿಚ್ಚು: ಹೆದ್ದಾರಿ ತಡೆದು ರೈತರ ಬೃಹತ್ ಪ್ರತಿಭಟನೆ!ಆಗಸ್ಟ್ 13ರ ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ: ಸಾರಿಗೆ, ಶಾಲಾ-ಕಾಲೇಜು ಕಾರ್ಯನಿರ್ವಹಣೆ?ಪ್ರಜ್ವಲ್ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆ ಪ್ರಕರಣ: DIG ನೇತೃತ್ವದಲ್ಲಿ ಆಂತರಿಕ ತನಿಖೆ!ಐಎಎಸ್ ಅಧಿಕಾರಿಗಳ ವರ್ಗಾವಣೆ: ಕೆಪಿಎಸ್‌ಸಿ ಪರೀಕ್ಷಾ ಜವಾಬ್ದಾರಿ ಕೆಇಎ 'ಎಚ್. ಪ್ರಸನ್ನ' ಹೆಗಲಿಗೆ!ಸಚಿವ ಸ್ಥಾನ ವಂಚಿತ ಕಾಂಗ್ರೆಸ್ ಹಿರಿಯ ನಾಯಕರ ರಹಸ್ಯ ಸಭೆ: ಡಾ. ಯತೀಂದ್ರ ಸಮಾಧಾನದ ಯತ್ನ!ಜೈಲಿನ ಮೇಲೆ ಸಿಸಿಬಿ ದಾಳಿ ನನ್ನದೇ ಆದೇಶ: ಪ್ರಿಯಾಂಕ್ ಖರ್ಗೆ!ಜೈಲಿನ ಮೇಲೆ ಸಿಸಿಬಿ ಹಠಾತ್ ದಾಳಿ: ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್, ಪೆನ್ ಡ್ರೈವ್ ಪತ್ತೆ- FIR ದಾಖಲು!ನೂತನ ಸಚಿವರಿಗೆ ಖಾತೆ ಹಂಚಿಕೆ: ರಾಮಲಿಂಗಾರೆಡ್ಡಿ, ಮುನಿಯಪ್ಪ ಖಾತೆ ಬದಲಾವಣೆ–ಯಾರಿಗೆ ಯಾವ ಇಲಾಖೆ?ಯುಎಪಿಎ ಪ್ರಕರಣಗಳ ಸುದೀರ್ಘ ವಿಳಂಬಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ