ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಪೂರೈಸುತ್ತಿರುವ ಬೆನ್ನಲ್ಲೇ ಆಡಳಿತಾರೂಢ ಪಕ್ಷದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಬಂಡಾಯದ ಹೊಗೆ ಜೋರಾಗಿದೆ.
ಕನಿಷ್ಠ 30 ರಿಂದ 35 ಶಾಸಕರ ತಂಡವೊಂದು ಮೇ 28 ಅಥವಾ 29 ರೊಳಗೆ ನವದೆಹಲಿಗೆ ಪ್ರಯಾಣ ಬೆಳೆಸಲಿದ್ದು, ಹಾಲಿ ಸಚಿವರನ್ನು ಕೈಬಿಟ್ಟು ಹೊಸದಾಗಿ 20 ಜನರಿಗೆ ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಲು ಸಜ್ಜಾಗಿದೆ. ಈ ಕುರಿತು ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಶುಕ್ರವಾರ ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಪಕ್ಷದ ನಾಯಕತ್ವಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ, "ಸಚಿವ ಸಂಪುಟ ಪುನರ್‌ರಚನೆ ಮಾಡದಿದ್ದರೆ ನಮ್ಮ ಮುಂದೆ ಬೇರೆ ಯೋಜನೆಗಳಿವೆ. ನಾವು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ," ಎಂದು ಎಚ್ಚರಿಸಿದ್ದಾರೆ.
"ಈಗ ಇರುವವರೇ ಸಚಿವರಾಗಿ ಮುಂದುವರಿಯಬೇಕು ಎಂದೇನೂ ಇಲ್ಲ. ಅವರಿಗೆ ಈಗಾಗಲೇ ಮೂರು ವರ್ಷಗಳ ಕಾಲಾವಕಾಶ ನೀಡಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಲವಾಗಿ ಉಳಿಯಬೇಕಾದರೆ ಹಳಬರನ್ನು ಕೈಬಿಟ್ಟು ಹೊಸ ಮುಖಗಳಿಗೆ ಅವಕಾಶ ನೀಡಲೇಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ 15 ಹೊಸಬರನ್ನು ಸೇರಿಸಿಕೊಳ್ಳಲಾಗುವುದು ಎಂದು ಹೇಳಿದ್ದರು. ಆದರೆ, ಇನ್ನು ಯಾರೂ ಇದರ ಬಗ್ಗೆ ಚರ್ಚಿಸುತ್ತಿಲ್ಲ. ಹೀಗಾಗಿ ಈ ಬಾರಿ ನಮಗೆ 'ಮಾಡು ಇಲ್ಲವೇ ಮಡಿ' ಪರಿಸ್ಥಿತಿ ಬಂದೊದಗಿದೆ," ಎಂದು ಆಕ್ರೋಶ ಹೊರಹಾಕಿದರು.
ಸಿಎಂ ಬದಲಾವಣೆ ಹೈಕಮಾಂಡ್ ಹೆಗಲಿಗೆ;
ಮುಖ್ಯಮಂತ್ರಿ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, "ನಾವು ನಮ್ಮ ಹಕ್ಕುಗಳನ್ನು ಕೇಳುತ್ತಿದ್ದೇವೆ. ಸಿಎಂ ಬದಲಾವಣೆ ವಿಷಯ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟದ್ದು," ಎಂದರು.
ಮೂಲಗಳ ಪ್ರಕಾರ, ಸಚಿವ ಸ್ಥಾನದ ಆಕಾಂಕ್ಷಿಗಳಾದ ಕೆಲವು ಹಿರಿಯ ಹಾಗೂ ಮೊದಲ-ಎರಡನೇ ಬಾರಿಯ ಶಾಸಕರು ಈಗಾಗಲೇ ದೆಹಲಿಯಲ್ಲೇ ಬೀಡುಬಿಟ್ಟಿದ್ದು, ಪಕ್ಷದ ಹಿರಿಯ ನಾಯಕರ ಭೇಟಿಗೆ ಕಾಯುತ್ತಿದ್ದಾರೆ. ಕಳೆದ ತಿಂಗಳು ಸಹ ಹಿರಿಯ ಶಾಸಕರ ತಂಡವೊಂದು ದೆಹಲಿಗೆ ತೆರಳಿ ಒಗ್ಗಟ್ಟು ಪ್ರದರ್ಶಿಸಿತ್ತು.
ಸಿದ್ದರಾಮಯ್ಯ ವರ್ಸಸ್ ಡಿ.ಕೆ. ಶಿವಕುಮಾರ್: ಒಳಗುದ್ದಾಟ ತೀವ್ರ?
ಸಂಪುಟ ಪುನರ್‌ರಚನೆಯ ಈ ಬೆಳವಣಿಗೆಯ ಹಿಂದೆ ರಾಜ್ಯ ನಾಯಕರ ನಡುವಿನ ರಾಜಕೀಯ ತಂತ್ರಗಾರಿಕೆಯೂ ಅಡಗಿದೆ ಎನ್ನಲಾಗುತ್ತಿದೆ.
ಸಿಎಂ ಒಲವು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಪುನರ್‌ರಚನೆಗೆ ಒಲವು ತೋರಿದ್ದಾರೆ. ಒಂದು ವೇಳೆ ಹೈಕಮಾಂಡ್ ಇದಕ್ಕೆ ಒಪ್ಪಿಗೆ ನೀಡಿದರೆ, ಸಿದ್ದರಾಮಯ್ಯ ಅವರೇ ಐದು ವರ್ಷಗಳ ಪೂರ್ಣ ಅವಧಿಗೆ ಸಿಎಂ ಆಗಿ ಮುಂದುವರಿಯುವ ಸಾಧ್ಯತೆ ದಟ್ಟವಾಗುತ್ತದೆ.
ಡಿ.ಕೆ. ಶಿವಕುಮಾರ್ ನಿಲುವು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಂಪುಟ ಪುನರ್‌ರಚನೆಗಿಂತ ಮುಂಚಿತವಾಗಿ 'ನಾಯಕತ್ವ ಬದಲಾವಣೆ' (ಮುಖ್ಯಮಂತ್ರಿ ಹುದ್ದೆ ಹಂಚಿಕೆ) ಬಗ್ಗೆ ಹೈಕಮಾಂಡ್ ಮೊದಲು ತೀರ್ಮಾನಿಸಲಿ ಎಂದು ಬಯಸುತ್ತಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಹೈಕಮಾಂಡ್‌ಗೂ ಈ ಬಿಕ್ಕಟ್ಟು ಬಗೆಹರಿಸುವುದು ತಲೆನೋವಾಗಿ ಪರಿಣಮಿಸಿದೆ.
ಸದ್ಯ 3 ಸಚಿವ ಸ್ಥಾನಗಳು ಖಾಲಿ!
ಮುಖ್ಯಮಂತ್ರಿ ಸೇರಿದಂತೆ ಒಟ್ಟು 34 ಸಚಿವರ ಸಂಪುಟಕ್ಕೆ ಅವಕಾಶವಿದ್ದು, ಸದ್ಯ 3 ಸ್ಥಾನಗಳು ಖಾಲಿ ಇವೆ.
ಬಿ. ನಾಗೇಂದ್ರ: ವಾಲ್ಮೀಕಿ ಎಸ್‌ಟಿ ಅಭಿವೃದ್ಧಿ ನಿಗಮದ ಹಣ ದುರುಪಯೋಗದ ಆರೋಪದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದರು.
ಕೆ.ಎನ್. ರಾಜಣ್ಣ: ಪಕ್ಷದ ಹೈಕಮಾಂಡ್ ಸೂಚನೆಯ ಮೇರೆಗೆ ಇವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲಾಗಿದೆ.
ಡಿ. ಸುಧಾಕರ್: ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ಮೂರನೇ ಸ್ಥಾನ ಖಾಲಿಯಾಗಿದೆ.
ಖಾಲಿ ಇರುವ ಮೂರು ಸ್ಥಾನಗಳ ಭರ್ತಿಯೋ ಅಥವಾ ಇಡೀ ಸಂಪುಟ ಉರುಳಿಸಿ ಹೊಸಬರಿಗೆ ಮಣೆ ಹಾಕಲಾಗುತ್ತದೆಯೋ ಎಂಬುದು ಮೇ ಕೊನೆಯ ವಾರದಲ್ಲಿ ದೆಹಲಿಯಲ್ಲಿ ನಡೆಯಲಿರುವ ಹೈಕಮಾಂಡ್ ಸಭೆಯ ಬಳಿಕ ನಿರ್ಧಾರವಾಗಲಿದೆ.
ಜೂನ್ 18ಕ್ಕೆ ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ:
ದೇಶದ ಹತ್ತು ರಾಜ್ಯಗಳ ಒಟ್ಟು 24 ರಾಜ್ಯಸಭಾ ಸ್ಥಾನಗಳಿಗೆ ಮುಂಬರುವ ಜೂನ್ 18ರಂದು ಚುನಾವಣೆ ನಡೆಸಲಾಗುವುದು ಎಂದು ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಅಧಿಕೃತವಾಗಿ ಪ್ರಕಟಿಸಿದೆ.
ಇದರೊಂದಿಗೆ ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳ ತಲಾ ಒಂದು ಕ್ಷೇತ್ರಕ್ಕೆ ಉಪಚುನಾವಣೆಯನ್ನೂ ಅಂದೇ ನಡೆಸಲು ಆಯೋಗ ನಿರ್ಧರಿಸಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ವಿವಿಧ ರಾಜ್ಯಸಭಾ ಸದಸ್ಯರ ಅಧಿಕಾರ ಅವಧಿಯು ಜೂನ್ 21 ರಿಂದ ಜುಲೈ 19ರ ನಡುವೆ ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ, ತೆರವಾಗಲಿರುವ ಈ ಸ್ಥಾನಗಳನ್ನು ಭರ್ತಿ ಮಾಡಲು ಚುನಾವಣಾ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.
ಕರ್ನಾಟಕ ಸೇರಿದಂತೆ ಯಾವ ರಾಜ್ಯದಲ್ಲಿ ಎಷ್ಟು ಸ್ಥಾನಗಳು?
ಈ ಬಾರಿಯ ಚುನಾವಣೆಯಲ್ಲಿ ದಕ್ಷಿಣ ಮತ್ತು ಪಶ್ಚಿಮ ಭಾರತದ ಪ್ರಮುಖ ರಾಜ್ಯಗಳು ಹೆಚ್ಚಿನ ಸ್ಥಾನಗಳನ್ನು ಹೊಂದಿವೆ.
ರಾಜ್ಯವಾರು ವಿವರ ಹೀಗಿದೆ: ರಾಜ್ಯಗಳು ಒಟ್ಟು ಸ್ಥಾನಗಳು
ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್ 04 ಸ್ಥಾನಗಳು, ಮಧ್ಯಪ್ರದೇಶ, ರಾಜಸ್ಥಾನ ತಲಾ 03 ಸ್ಥಾನಗಳು, ಜಾರ್ಖಂಡ್02 ಸ್ಥಾನಗಳು, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ ತಲಾ 01 ಸ್ಥಾನ.
ಜೂನ್ 8 ನಾಮಪತ್ರ ಸಲ್ಲಿಕೆಗೆ ಕಡೆ ದಿನ. ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಲು ಜೂನ್ 8 ಕೊನೆಯ ದಿನಾಂಕವಾಗಿದೆ ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಕರ್ನಾಟಕದ ಮಟ್ಟಿಗೆ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿರುವುದರಿಂದ, ವಿಧಾನಸಭೆಯ ಸಂಖ್ಯಾಬಲದ ಆಧಾರದ ಮೇಲೆ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ನಡುವೆ ತಮ್ಮ ಅಭ್ಯರ್ಥಿಗಳನ್ನು ಮೇಲ್ಮನೆಗೆ ಕಳುಹಿಸಲು ರಾಜಕೀಯ ತಂತ್ರಗಾರಿಕೆಗಳು ಈಗಾಗಲೇ ಆರಂಭವಾಗಿವೆ. ಜೂನ್ 18ರಂದು ಮತದಾನ ಮುಕ್ತಾಯಗೊಂಡ ತಕ್ಷಣವೇ ಫಲಿತಾಂಶ ಹೊರಬೀಳಲಿದೆ.



