ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಕಾಂಗ್ರೆಸ್ ಸರ್ಕಾರವು ಕಟ್ಟಡ ಕಾರ್ಮಿಕರ ಸುರಕ್ಷತಾ ಕಿಟ್ ವಿತರಣೆಯಲ್ಲಿ ನೂರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆಸಿದೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿರುವ ಜೆಡಿಎಸ್, ಕಾರ್ಮಿಕ ಇಲಾಖೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಕಾರ್ಮಿಕರಿಗೆ ವಿತರಿಸಲಾಗಿರುವ ಸುರಕ್ಷತಾ ಕಿಟ್‌ಗಳು ಅತ್ಯಂತ ಕಳಪೆಯಾಗಿದ್ದು, ಕಾರ್ಮಿಕರ ಜೀವದ ಜೊತೆ ಚೆಲ್ಲಾಟವಾಡಲಾಗುತ್ತಿದೆ ಎಂದು ಜೆಡಿಎಸ್ ದೂರಿದೆ.
ಕಳಪೆ ಗುಣಮಟ್ಟದ ಸಾಮಗ್ರಿ: ಕಾರ್ಮಿಕರಿಗೆ ನೀಡಿರುವ ಬೂಟುಗಳು ಎರಡೇ ದಿನಕ್ಕೆ ಕಿತ್ತುಹೋಗುತ್ತಿವೆ. ಹ್ಯಾಂಡ್ ಗ್ಲೌಸ್‌ಗಳು ಸಹ ಸಂಪೂರ್ಣ ಕಳಪೆ ಗುಣಮಟ್ಟದ್ದಾಗಿದ್ದು, ಸುರಕ್ಷತೆಯ ಹೆಸರಿನಲ್ಲಿ ಕಾರ್ಮಿಕರನ್ನು ಅಪಾಯಕ್ಕೆ ತಳ್ಳಲಾಗುತ್ತಿದೆ.
ದುಪ್ಪಟ್ಟು ಬಿಲ್ ಲೂಟಿ: ಕಳಪೆ ಕಿಟ್‌ಗಳನ್ನು ವಿತರಿಸಿ, ಅವುಗಳಿಗೆ ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ಬಿಲ್ ಸೃಷ್ಟಿಸುವ ಮೂಲಕ ನೂರಾರು ಕೋಟಿ ರೂಪಾಯಿಗಳನ್ನು ಲೂಟಿ ಮಾಡಲಾಗಿದೆ.
ಸಚಿವ ಸಂತೋಷ್ ಲಾಡ್‌ಗೆ ತರಾಟೆ: "ನಿಕಟಪೂರ್ವ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರೇ, ಕಾರ್ಮಿಕರ ಹೆಸರಿನಲ್ಲಿ ತಿಂದು ತೇಗಿರುವುದೇ ನಿಮ್ಮ ಸಾಧನೆಯೇ?" ಎಂದು ಜೆಡಿಎಸ್ ನೇರವಾಗಿ ಪ್ರಶ್ನಿಸಿದೆ.
ಮಾಜಿ ಸಿಎಂ ಸಿದ್ದರಾಮಯ್ಯಗೆ ಜೆಡಿಎಸ್ ಆಗ್ರಹ:
ಸುರಕ್ಷತೆಯ ಹೆಸರಿನಲ್ಲಿ ನಡೆದಿರುವ ಈ ಬೃಹತ್ ಲೂಟಿಯ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣವೇ ಮಧ್ಯಪ್ರವೇಶಿಸಿ ಉತ್ತರ ನೀಡಬೇಕು. ಕಾರ್ಮಿಕ ಇಲಾಖೆಯಲ್ಲಿ ನಡೆದಿರುವ ಈ ಹಗರಣದ ವಿರುದ್ಧ ತಕ್ಷಣವೇ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ಜೆಡಿಎಸ್ ಒತ್ತಾಯಿಸಿದೆ.



