ಚಂದ್ರವಳ್ಳಿ ನ್ಯೂಸ್, ಮೈಸೂರು:
ರಾಜ್ಯ ಕಾಂಗ್ರೆಸ್‌ನಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಹುಟ್ಟಿಕೊಂಡಿರುವ ಅಸಮಾಧಾನದ ಬೆಂಕಿ ತಣ್ಣಗಾದಂತೆ ಕಾಣುತ್ತಿಲ್ಲ. ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಮೂವರು ಹಿರಿಯ ನಾಯಕರಾದ ಡಾ. ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್ ಹಾಗೂ ತನ್ವೀರ್ ಸೇಠ್ ಮೈಸೂರಿನಲ್ಲಿ ಶಕ್ತಿ ಪ್ರದರ್ಶನ ರೂಪದ ರಹಸ್ಯ ಸಭೆ ನಡೆಸಿರುವುದು ತೀವ್ರ ಕುತೂಹಲ ಮೂಡಿಸಿದೆ.
ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲೇ ಗುರುತಿಸಿಕೊಂಡಿದ್ದ ಈ ಮೂವರು ನಾಯಕರ ಅಸಮಾಧಾನ ಶಮನಗೊಳಿಸಲು, ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸಭೆ ನಡೆದ ಸ್ಥಳಕ್ಕೆ ಧಾವಿಸಿ ಮಾತುಕತೆ ನಡೆಸಿದ್ದಾರೆ.
‘ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ, ನಮಗೆ ಅನ್ಯಾಯವಾಗಿದೆ’:
ಸಭೆಯ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ತನ್ವೀರ್ ಸೇಠ್, "ಪಕ್ಷದಲ್ಲಿ ಎಲ್ಲವೂ ಸರಿಯಾಗಿದೆ ಎಂದೂ ಹೇಳುವುದಿಲ್ಲ, ಸರಿಯಿಲ್ಲ ಎಂದೂ ಹೇಳುವುದಿಲ್ಲ. ಆದರೆ ನಮಗೆ ಅನ್ಯಾಯವಾಗಿರುವುದು ನಿಜ" ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು. "ನಮ್ಮ ಶಕ್ತಿಯನ್ನು ನಿರೂಪಿಸಲು ನಾವು ಸಚಿವರಾಗಬೇಕಿಲ್ಲ. ನಮ್ಮ ಬೆನ್ನಿಗೆ ನಮ್ಮ ಸಮುದಾಯಗಳ ಶಕ್ತಿಯಿದೆ. ಈ ಅನ್ಯಾಯದ ಬಗ್ಗೆ ಹೈಕಮಾಂಡ್ ಬಳಿ ಪ್ರಶ್ನಿಸುತ್ತೇವೆ" ಎಂದು ಹರಿಹಾಯ್ದರು.
ಎಚ್ಚರಿಕೆಯ ಹೆಜ್ಜೆ ಎಂದ ಮಹದೇವಪ್ಪ:
ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಮಾತನಾಡಿ, "ನಾವು ಮೂವರೂ ಒಟ್ಟಾಗಿ ಕುಳಿತು ನಮಗೆ ಎಲ್ಲಿ ತಪ್ಪಾಗಿದೆ ಎಂಬುದರ ಕುರಿತು ವಿಸ್ತೃತ ಚರ್ಚೆ ಮಾಡಿದ್ದೇವೆ. ಇದು ಹೊಸ ಆರಂಭ" ಎಂದು ಸೂಚ್ಯವಾಗಿ ಹೇಳಿದರು.
ಮಾರ್ಗದರ್ಶನ ಪಡೆಯಲು ಬಂದಿದ್ದೆ ಎಂದ ಡಾ. ಯತೀಂದ್ರ:
ಅಸಮಾಧಾನಿತ ನಾಯಕರನ್ನು ಭೇಟಿಯಾದ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, "ತಾವು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ನಿಯೋಜನೆಗೊಳ್ಳುತ್ತಿದ್ದು, ಜಿಲ್ಲೆಯ ಹಿರಿಯ ನಾಯಕರ ಮಾರ್ಗದರ್ಶನ ಹಾಗೂ ಆಶೀರ್ವಾದ ಪಡೆಯಲು ಭೇಟಿಯಾಗಿದ್ದೇನೆ" ಎಂದು ಸಮಜಾಯಿಷಿ ನೀಡಿದ್ದಾರೆ.




