ಚಂದ್ರವಳ್ಳಿ ನ್ಯೂಸ್, ನವದೆಹಲಿ:
ನವದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಲಾಗಿದ್ದ ‘ಸೇವಾ ಸಂಕಲ್ಪ ಅಭಿಯಾನ – ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಎಲೆಕ್ಟ್ರಿಕ್ ವಾಹನ (ಇವಿ) ಫಲಾನುಭವಿಗಳು ಹಾಗೂ ಉದ್ಯಮದ ಪ್ರಮುಖರೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಇ-ದ್ವಿಚಕ್ರ, ಇ-ತ್ರಿಚಕ್ರ, ಎಲೆಕ್ಟ್ರಿಕ್ ಕಾರು, ಬಸ್ ಹಾಗೂ ಟ್ರಕ್ ಬಳಕೆದಾರರು ತಮ್ಮ ಇವಿ ಬಳಕೆಯ ಅನುಭವಗಳನ್ನು ಹಂಚಿಕೊಂಡರು. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ನೆಲಮಟ್ಟದಲ್ಲಿ ಯಶಸ್ವಿಯಾಗಿ ಸಾಕಾರಗೊಳ್ಳುತ್ತಿರುವುದಕ್ಕೆ ಸಚಿವರು ಸಂತಸ ವ್ಯಕ್ತಪಡಿಸಿದರು.
PM E-DRIVE ಯೋಜನೆ: ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಂತೆ 11,900 ಕೋಟಿ ವೆಚ್ಚದಲ್ಲಿ ‘ಪಿಎಂ ಇ-ಡ್ರೈವ್’ ಯೋಜನೆ ಜಾರಿಯಲ್ಲಿದ್ದು, ಸುಮಾರು 24 ಲಕ್ಷ ಇ-ದ್ವಿಚಕ್ರ ವಾಹನಗಳು, 5 ಲಕ್ಷ ಇ-ತ್ರಿಚಕ್ರ ವಾಹನಗಳು, 14,000 ಇ-ಬಸ್‌ಗಳು ಸೇರಿದಂತೆ ಇ-ಆಂಬ್ಯುಲೆನ್ಸ್ ಹಾಗೂ ಇ-ಟ್ರಕ್‌ಗಳಿಗೆ ಚಾಲನೆ ಮತ್ತು ಬೆಂಬಲ ನೀಡಲಾಗುತ್ತಿದೆ.
ಚಾರ್ಜಿಂಗ್ ಮೂಲಸೌಕರ್ಯ: ಎಲೆಕ್ಟ್ರಿಕ್ ವಾಹನಗಳ ಸುಲಭ ಬಳಕೆಗೆ ನೆರವಾಗಲು ಸಾರ್ವಜನಿಕ ಚಾರ್ಜಿಂಗ್ ವ್ಯವಸ್ಥೆ ಅಭಿವೃದ್ಧಿಪಡಿಸಲು ₹2,000 ಕೋಟಿ ಅನುದಾನ ಕಾಯ್ದಿರಿಸಲಾಗಿದೆ.
ಆತ್ಮನಿರ್ಭರ ಭಾರತಕ್ಕೆ ಒತ್ತು: ದೇಶೀಯ ಉತ್ಪಾದನೆಗೆ ವೇಗ ನೀಡಲು ಮತ್ತು ಆಮದು ಮೇಲಿನ ಅವಲಂಬನೆ ಕಡಿಮೆ ಮಾಡಲು ಆಟೋಮೊಬೈಲ್ ವಲಯಕ್ಕೆ ₹25,938 ಕೋಟಿ ಹಾಗೂ ಅಡ್ವಾನ್ಸ್ಡ್ ಕೆಮಿಸ್ಟ್ರಿ ಸೆಲ್ ಬ್ಯಾಟರಿಗಳಿಗೆ ₹18,100 ಕೋಟಿ ಮೌಲ್ಯದ ಪಿಎಲ್‌ಐ ಯೋಜನೆಗಳನ್ನು ಜಾರಿಗೊಳಿಸಲಾಗಿದೆ.
ಫಾಡಾ, ಸಿಯಾಮ್, ಅಕ್ಮಾ ಸೇರಿದಂತೆ ವಿವಿಧ ಉದ್ಯಮ ಸಂಸ್ಥೆಗಳು ಹಾಗೂ ಫಲಾನುಭವಿಗಳ ಸಹಭಾಗತ್ವವನ್ನು ಕುಮಾರಸ್ವಾಮಿ ಅವರು ಶ್ಲಾಘಿಸಿದರು. ಭಾರತವನ್ನು ಕೈಗೆಟುಕುವ, ಸುಲಭ ಲಭ್ಯತೆಯ ಹಾಗೂ ಜಾಗತಿಕ ಮಟ್ಟದ ಇವಿ ವ್ಯವಸ್ಥೆಯನ್ನಾಗಿ ರೂಪಿಸಿ 'ವಿಕಸಿತ ಭಾರತ 2047' ಕನಸನ್ನು ನನಸು ಮಾಡಲು ಶ್ರಮಿಸುವುದಾಗಿ ಅವರು ತಿಳಿಸಿದರು.




