ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ‘ಸೇವಾ ಸಂಕಲ್ಪ ಅಭಿಯಾನ’ದ ಅಂಗವಾಗಿ ನಗರ ಸಮೀಪದ ಇಂದಾವರ ವೃದ್ಧಾಶ್ರಮಕ್ಕೆ ಭೇಟಿ ನೀಡಿ, ಆಶ್ರಮದ ಹಿರಿಯರಿಗೆ ಅನ್ನದಾನ ನೆರವೇರಿಸಲಾಯಿತು. ಬಳಿಕ ಅವರೊಂದಿಗೆ ಕುಳಿತು ಉಪಹಾರ ಸೇವಿಸುವ ಮೂಲಕ ಹಿರಿಯ ಜೀವಗಳಿಗೆ ಆತ್ಮೀಯತೆ ಮೆರೆಯಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, "ಪ್ರಧಾನಿ ನರೇಂದ್ರ ಮೋದಿ ಅವರ ನಿಸ್ವಾರ್ಥ ಸೇವಾ ಮನೋಭಾವ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕ್ಷೇಮಾಭಿವೃದ್ಧಿಯ ಚಿಂತನೆಯೇ ಈ ಸೇವಾ ಸಂಕಲ್ಪ ಅಭಿಯಾನಕ್ಕೆ ಮುಖ್ಯ ಪ್ರೇರಣೆಯಾಗಿದೆ. ಸುದೀರ್ಘ ಅನುಭವ ಹಾಗೂ ವಾತ್ಸಲ್ಯದ ಗಣಿಯಾಗಿರುವ ನಮ್ಮ ಹಿರಿಯರ ಮುಖದಲ್ಲಿ ಮೂಡಿದ ಕಿರುನಗೆ ಮತ್ತು ಅವರು ನೀಡಿದ ಹಾರೈಕೆಗಳು ಮನಸ್ಸಿಗೆ ಅಪಾರ ತೃಪ್ತಿ ತಂದಿವೆ.
ಮೋದಿ ಅವರ ಸೇವಾ ತತ್ವದಂತೆ ಸಮಾಜದ ಪ್ರತಿಯೊಬ್ಬರಿಗೂ ಆಸರೆಯಾಗುವಂತಹ ಕಾರ್ಯಕ್ರಮಗಳು ಮುಂಬರುವ ದಿನಗಳಲ್ಲಿಯೂ ನಿರಂತರವಾಗಿ ಮುಂದುವರಿಯಲಿವೆ" ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಎಂ.ಆರ್. ದೇವರಾಜ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ಬಿ.ಜಿ. ಸೋಮಶೇಖರ್, ನಗರ ಮಂಡಲ ಅಧ್ಯಕ್ಷರಾದ ಕೆ.ಎಸ್. ಪುಷ್ಪರಾಜ್, ಹಿರಿಯ ಮುಖಂಡರಾದ ಕೋಟೆ ರಂಗನಾಥ್, ನಗರಸಭಾ ಅಧ್ಯಕ್ಷರಾದ ಶ್ರೀಮತಿ ಭವ್ಯ ಮಂಜುನಾಥ್, ಉಪಾಧ್ಯಕ್ಷರಾದ ಶ್ರೀಮತಿ ಲಲಿತಾ ರವಿ ನಾಯ್ಕ್ ಹಾಗೂ ಮುಖಂಡರಾದ ಮಂಜುನಾಥ್ ಸೇರಿದಂತೆ ಹಲವು ಪ್ರಮುಖ ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.




