ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ರಾಜಕಾರಣದಲ್ಲಿ ಹಠಾತ್ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಕರ್ನಾಟಕ ರಾಜಕೀಯದಲ್ಲಿ ಹೊಸದೊಂದು ಸಂಚಲನ ಸೃಷ್ಟಿಯಾಗಿದೆ.
ರಾಜೀನಾಮೆ ನೀಡಿದ ತಕ್ಷಣವೇ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ತಮ್ಮ ನಿರ್ಧಾರದ ಹಿಂದಿನ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ.
ರಾಜೀನಾಮೆ ಪತ್ರ ವಿಶೇಷ ಕಾರ್ಯದರ್ಶಿಗೆ ಹಸ್ತಾಂತರ:
ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ಅವರು, "ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಸದ್ಯ ನಗರದಲ್ಲಿ ಇಲ್ಲದ ಕಾರಣ, ನಾನು ನನ್ನ ರಾಜೀನಾಮೆ ಪತ್ರವನ್ನು ಅವರ ವಿಶೇಷ ಕಾರ್ಯದರ್ಶಿಗೆ ತಲುಪಿಸಿದ್ದೇನೆ. ಸಾಂವಿಧಾನಿಕ ನಿಯಮಾವಳಿಗಳ ಪ್ರಕಾರ ರಾಜ್ಯಪಾಲರು ಶೀಘ್ರದಲ್ಲೇ ನನ್ನ ರಾಜೀನಾಮೆಯನ್ನು ಅಂಗೀಕರಿಸಲಿದ್ದಾರೆ ಎಂಬ ವಿಶ್ವಾಸ ನನಗಿದೆ" ಎಂದು ಸ್ಪಷ್ಟಪಡಿಸಿದರು.
ಹೈಕಮಾಂಡ್ ಆದೇಶಕ್ಕೆ ತಲೆಬಾಗಿದ 'ಸಿದ್ದು':
"ಹೈಕಮಾಂಡ್ ಸೂಚಿಸಿದ ತಕ್ಷಣ ನಾನು ರಾಜೀನಾಮೆ ನೀಡುತ್ತೇನೆ ಎಂದು ಈ ಹಿಂದೆಯೇ ಹಲವು ಬಾರಿ ಹೇಳಿದ್ದೆ. ಎರಡು ದಿನಗಳ ಹಿಂದೆಯಷ್ಟೇ ಹೈಕಮಾಂಡ್‌ನಿಂದ ನನಗೆ ನಿರ್ದೇಶನ ಬಂದಿತ್ತು. ಅದರಂತೆ ಇಂದು ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ" ಎಂದು ಸಿದ್ದರಾಮಯ್ಯ ತಿಳಿಸಿದರು. ಇದೇ ವೇಳೆ ತಮಗೆ ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.
ಸಾಧನೆಗಳ ಮೆಲುಕು: 'ನನ್ನ ಜೀವನ ತೆರೆದ ಪುಸ್ತಕ':
ತಮ್ಮ ಆಡಳಿತಾವಧಿಯ ಸಾಧನೆಗಳನ್ನು ಸ್ಮರಿಸಿದ ಸಿದ್ದರಾಮಯ್ಯ, "ನಾವು ನೀಡಿದ್ದ 550 ಭರವಸೆಗಳಲ್ಲಿ ಸುಮಾರು 300 ಭರವಸೆಗಳನ್ನು ಈಗಾಗಲೇ ಈಡೇರಿಸಿದ್ದೇವೆ. ಇದರೊಂದಿಗೆ ಐದು ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆ. ಜನರಿಗೆ ನೀಡಿದ ಯಾವುದೇ ಮಾತಿನಿಂದ ನಾನು ಹಿಂದೆ ಸರಿದಿಲ್ಲ" ಎಂದರು.
"ವಿರೋಧ ಪಕ್ಷಗಳು ನನ್ನ ವಿರುದ್ಧ ಹತ್ತಾರು ಸುಳ್ಳು ಕಥೆಗಳನ್ನು ಕಟ್ಟಿ ಅಪಪ್ರಚಾರ ಮಾಡಿದವು. ಆದರೆ ನಾನು ಎಂದಿಗೂ ಹಣದ ಹಿಂದೆ ಬಿದ್ದವನಲ್ಲ, ಅಕ್ರಮ ಆಸ್ತಿ ಗಳಿಸುವ ಹಪಾಹಪಿಯೂ ನನಗಿಲ್ಲ. ನನ್ನ ಇಡೀ ರಾಜಕೀಯ ಜೀವನ ಒಂದು ತೆರೆದ ಪುಸ್ತಕ."
ಸಿದ್ದರಾಮಯ್ಯ.
ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲ ಈಗ ಇಡೀ ರಾಜ್ಯಾದ್ಯಂತ ಮನೆಮಾಡಿದ್ದು, ಹೈಕಮಾಂಡ್ ಮುಂದಿನ ನಡೆ ಏನಿರಬಹುದು ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿವೆ.



