ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಾಗತಿಕ ಸೆಮಿಕಂಡಕ್ಟರ್ ಭೂಪಟದಲ್ಲಿ ಕರ್ನಾಟಕದ ಸ್ಥಾನವನ್ನು ಮತ್ತಷ್ಟು ಎತ್ತರಕ್ಕೇರಿಸುವ ನಿಟ್ಟಿನಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಸಿಂಗಾಪುರ ಸೆಮಿಕಂಡಕ್ಟರ್ ಇಂಡಸ್ಟ್ರಿ ಅಸೋಸಿಯೇಷನ್ ಕಾರ್ಯನಿರ್ವಾಹಕ ನಿರ್ದೇಶಕ ಆಂಗ್ ವೀ ಸೆಂಗ್ ಅವರೊಂದಿಗೆ ಮಹತ್ವದ ಸಭೆ ನಡೆಸಿದರು.
ಸಭೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಕರ್ನಾಟಕದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆ ಹಾಗೂ ಉಭಯ ಪ್ರದೇಶಗಳ ನಡುವೆ ದೀರ್ಘಕಾಲಿಕ ಸಾಂಸ್ಥಿಕ ಸಹಭಾಗಿತ್ವ ಏರ್ಪಡಿಸುವ ಕುರಿತು ವಿಸ್ತೃತ ಸಂವಾದ ನಡೆಯಿತು.
ಕರ್ನಾಟಕದ ಸಾಮರ್ಥ್ಯ ಪ್ರದರ್ಶನ: ಸೆಮಿಕಂಡಕ್ಟರ್ ವಿನ್ಯಾಸ, ಉಪಕರಣಗಳು, ಕಚ್ಚಾವಸ್ತುಗಳು, ಉತ್ಪಾದನೆ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ರಾಜ್ಯ ಹೊಂದಿರುವ ಅಪ್ರತಿಮ ಸಾಮರ್ಥ್ಯವನ್ನು ಸಚಿವರು ವಿವರವಾಗಿ ಮಂಡಿಸಿದರು.
ಮಾನವ ಸಂಪನ್ಮೂಲ ಹಾಗೂ ಶೈಕ್ಷಣಿಕ ವಿನಿಮಯ: ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮ-ಶೈಕ್ಷಣಿಕ ಸಹಭಾಗಿತ್ವವನ್ನು ಬಲಪಡಿಸಲು ವಿಶೇಷ ಒತ್ತು ನೀಡಲಾಯಿತು. ಮುಖ್ಯವಾಗಿ ಬೆಂಗಳೂರಿನ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ 'ಸ್ಟೂಡೆಂಟ್ ಎಕ್ಸ್‌ಚೇಂಜ್' ಕಾರ್ಯಕ್ರಮಗಳನ್ನು ವಿಸ್ತರಿಸುವ ಬಗ್ಗೆ ವಿಚಾರ ವಿನಿಮಯ ನಡೆಯಿತು.
ಜಾಗತಿಕ ಹೂಡಿಕೆಗಳ ಬಲ: ಬೆಂಗಳೂರಿನಲ್ಲಿ ಲ್ಯಾಮ್ ರಿಸರ್ಚ್ ಮತ್ತು ಅಪ್ಲೈಡ್ ಮೆಟೀರಿಯಲ್ಸ್ ನಂತಹ ಜಾಗತಿಕ ಸೆಮಿಕಂಡಕ್ಟರ್ ದೈತ್ಯ ಸಂಸ್ಥೆಗಳು ಕೈಗೊಳ್ಳಲಿರುವ ಮುಂಬರುವ ಬೃಹತ್ ಹೂಡಿಕೆಗಳು ರಾಜ್ಯದ ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಹೊಸ ಶಕ್ತಿ ತುಂಬಲಿವೆ ಎಂದು ಸಚಿವರು ಉಲ್ಲೇಖಿಸಿದರು.
GIM 2027ಗೆ ಆಹ್ವಾನ: ಕರ್ನಾಟಕದಲ್ಲಿ ಹೂಡಿಕೆ ಅವಕಾಶಗಳನ್ನು ಪರಿಶೀಲಿಸಲು ಮತ್ತು ಸಹಭಾಗಿತ್ವ ಬೆಳೆಸಲು SSIA ಸಂಸ್ಥೆಯ ಎಲ್ಲಾ ಸದಸ್ಯರಿಗೆ ಮುಂಬರುವ 'ಜಾಗತಿಕ ಹೂಡಿಕೆದಾರರ ಸಮಾವೇಶ-2027' ಕ್ಕೆ (GIM 2027) ಸಚಿವರು ಅಧಿಕೃತ ಆಹ್ವಾನ ನೀಡಿದರು.




