ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತ ತೀವ್ರಗೊಂಡ ಲಕ್ಷಣಗಳು ಕಾಣಿಸುತ್ತಿವೆ. ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೈರಾಗುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕಾವು ಪಡೆದುಕೊಂಡಿದೆ.
ತಮ್ಮ ಆಪ್ತ ಶಾಸಕರಿಗೆ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ಸಿಗದಿರುವುದೇ ಸಿದ್ದರಾಮಯ್ಯ ಅವರ ಈ ನಡೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಸಂಪುಟ ರಚನೆ ಹಾಗೂ ವಿಸ್ತರಣೆಯ ವಿಚಾರವಾಗಿ ಹಲವು ಶಾಸಕರಲ್ಲಿ ಈಗಾಗಲೇ ಅಸಮಾಧಾನ ಹೊಗೆಯಾಡುತ್ತಿರುವ ಬೆನ್ನಲ್ಲೇ, ಹಿರಿಯ ನಾಯಕ ಸಿದ್ದರಾಮಯ್ಯ ಅವರ ಗೈರುಹಾಜರಿ ಕಾಂಗ್ರೆಸ್ ಪಾಳೆಯದಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸಿದೆ.
ಇನ್ನೊಂದೆಡೆ, ಸಿದ್ದರಾಮಯ್ಯ ಅವರ ಗೈರುಹಾಜರಿಯ ಕುರಿತು ಉದ್ಭವಿಸಿರುವ ಗೊಂದಲಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಅವರು ಸ್ಪಷ್ಟನೆ ನೀಡಿದ್ದು, ಅವರು ಸಮಾರಂಭಕ್ಕೆ ಬಾರದಿರಲು ಇರುವ ನೈಜ ಕಾರಣವನ್ನು ಹಂಚಿಕೊಂಡಿದ್ದಾರೆ.



