ಚಂದ್ರವಳ್ಳಿ ನ್ಯೂಸ್ ಚಿತ್ರದುರ್ಗ: ಇಂದಿನ ದಿನಮಾನಗಳಲ್ಲಿ ಕುಟುಂಬದವರು ಜನಪ್ರತಿನಿಧಿಗಳಾದರೆ ಅವರ ಹೆಸರನ್ನು ಬಳಸಿಕೊಂಡು ಸ್ವಾರ್ಥ ಸಾಧನೆ ಮಾಡುವವರ ಮಧ್ಯೆ, ತಮ್ಮ ಮಗ ಶಾಸಕರಾಗಿದ್ದರೂ ಎಲ್ಲೂ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳದೆ ಸಮಾಜಮುಖಿಯಾಗಿ ಬದುಕಿದವರು ದಿವಂಗತ ಕೆ.ಆರ್. ಶಿವಪ್ರಕಾಶ್ ಎಂದು ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮೀಜಿ ಶ್ಲಾಘಿಸಿದರು.
ಇತ್ತೀಚೆಗೆ ನಿಧನರಾದ ವೀರಶೈವ ಸಮಾಜದ ಮಾಜಿ ಅಧ್ಯಕ್ಷರು ಹಾಗೂ ಜಯಪದ್ಮ ಮೋಟಾರ್ ಸರ್ವಿಸ್ ಮಾಲೀಕರಾದ ಕೆ.ಆರ್. ಶಿವಪ್ರಕಾಶ್ ಅವರ ಸ್ಮರಣೆ ಕಾರ್ಯಕ್ರಮವನ್ನು ಭಾನುವಾರ ನಗರದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು. ಶಿವಪ್ರಕಾಶ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಶ್ರೀಗಳು, "ಅವರೊಂದಿಗೆ ನಮಗೆ ನೇರ ಒಡನಾಟ ಕಡಿಮೆ ಇದ್ದರೂ, ಅವರ ಸರಳತೆ ಮತ್ತು ಸಜ್ಜನಿಕೆ ಎಲ್ಲರಿಗೂ ಮಾದರಿಯಾಗಿತ್ತು. ಸದಾ ಒಳಿತನ್ನೇ ಬಯಸುತ್ತಿದ್ದ ಅವರು ತಮ್ಮ ಮಕ್ಕಳಿಗೆ ಅತ್ಯುತ್ತಮ ಮಾರ್ಗದರ್ಶನ ನೀಡಿದ್ದಾರೆ. ಅವರ ಆದರ್ಶಗಳನ್ನು ಕುಟುಂಬಸ್ಥರು ಮುಂದುವರೆಸಿಕೊಂಡು ಹೋಗಬೇಕು" ಎಂದರು.
ಸಾಧನೆ ಮತ್ತು ಸಮಾಜಮುಖಿ ಕಾರ್ಯಗಳು ಶಾಶ್ವತ: ಕಬೀರಾನಂದ ಆಶ್ರಮದ
ಶ್ರೀ ಶಿವಲಿಂಗಾನಂದ ಮಹಾಸ್ವಾಮೀಜಿ : "ಶಿವಪ್ರಕಾಶ್ ಅವರು ಆಶ್ರಮದ ಪರಮ ಭಕ್ತರಾಗಿದ್ದರು. ಮಗನನ್ನು ಎಂಎಲ್‍ಸಿ ಮಾಡುವ ಛಲದ ಕನಸನ್ನು ಕಂಡು, ಅದರಂತೆ ಶಾಸಕರನ್ನಾಗಿಯೂ ಮಾಡಿದರು. ನಗರದ ನೀಲಕಂಠೇಶ್ವರ ದೇವಾಲಯದ ಅಭಿವೃದ್ಧಿ ಹಾಗೂ ಪಂಚಾಚಾರ್ಯ ಕಲ್ಯಾಣ ಮಂಟಪ ನಿರ್ಮಾಣದಲ್ಲಿ ಅವರ ಪಾತ್ರ ದೊಡ್ಡದಿದೆ. ಯಾವುದೇ ಪ್ರಚಾರ ಬಯಸದೆ ಸೇವೆ ಸಲ್ಲಿಸಿದ ಅವರ ಕಾರ್ಯಗಳನ್ನು ಮಗ ನವೀನ್ ಮುಂದುವರೆಸಿಕೊಂಡು ಹೋಗಬೇಕಿದೆ" ಎಂದು ತಿಳಿಸಿದರು.
ಶ್ರೀ ಡಾ. ಬಸವಪ್ರಭು ಮಹಾಸ್ವಾಮೀಜಿ (ದಾವಣಗೆರೆ ವಿರಕ್ತಮಠ): "ಶಿವಪ್ರಕಾಶ್ ಅವರು ಮುರುಘಾ ಮಠದೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದರು. ಇಂದಿನ ದಿನಗಳಲ್ಲಿ ಪರೋಪಕಾರ ಮಾಡುವವರ ಸಂಖ್ಯೆ ಕಡಿಮೆ ಇದೆ. ಅಂತಹದರಲ್ಲಿ ಶಿವಪ್ರಕಾಶ್ ಅವರು ಸಮಾಜಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ್ದಾರೆ."
ಶ್ರೀ ಡಾ. ಬಸವಕುಮಾರ ಮಹಾಸ್ವಾಮೀಜಿ (ಮುರುಘಾಮಠ ಆಡಳಿತ ಮಂಡಳಿ ಸದಸ್ಯರು): "ಸಮಾಜದಲ್ಲಿ ಉತ್ತಮ ಮೌಲ್ಯಗಳನ್ನು ಬಿತ್ತಿದ ಶಿವಪ್ರಕಾಶ್ ಅವರ ಕುಟುಂಬದ ಹಾದಿ ಶ್ಲಾಘನೀಯ. ಅವರ ಪುತ್ರ ನವೀನ್ ಅವರು ಯುವ ನಾಯಕರಾಗಿ ರಾಜಕೀಯದಲ್ಲಿ ಜನಸೇವೆ ಮಾಡುತ್ತಾ ಉತ್ತಮವಾಗಿ ಬೆಳೆಯುತ್ತಿದ್ದಾರೆ."
ಗಣ್ಯರ ನುಡಿನಮನ
ಗೋವಿಂದ ಎಂ. ಕಾರಜೋಳ (ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದರು):
"ಹುಟ್ಟಿದ ಮಾನವ ಸತ್ತ ಮೇಲೂ ಜನ ನೆನೆಯುವಂತಹ ಕೆಲಸ ಮಾಡಬೇಕು. ಶಿವಪ್ರಕಾಶ್ ಅವರು ಬದುಕಿದ್ದಾಗ ಮಾಡಿದ ಉತ್ತಮ ಕಾರ್ಯಗಳೇ ಇಂದು ಇಷ್ಟೊಂದು ಜನ ಸೇರಲು ಕಾರಣ. ನಾವೆಲ್ಲರೂ ಜಾತಿ, ಉಪಜಾತಿಗಳನ್ನು ಮರೆತು ಬಸವ ತತ್ವದ ಮೂಲಕ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಬೇಕಿದೆ."
ಹೆಚ್. ಏಕಾಂತಯ್ಯ (ಮಾಜಿ ಸಚಿವರು - ಕಾರ್ಯಕ್ರಮದ ಅಧ್ಯಕ್ಷತೆ):
"ಬಸವಣ್ಣನವರ ವಚನಗಳನ್ನು ಕೇವಲ ಹೇಳುವುದಷ್ಟೇ ಅಲ್ಲ, ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಕಲ್ಯಾಣ ರಾಜ್ಯ ನಿರ್ಮಾಣ ಸಾಧ್ಯ. ಇಂದಿನ ದಿನಗಳಲ್ಲಿ ಶೋಷಿತರ, ಬಡವರ ಧ್ವನಿಯಾಗಿ ನಿಲ್ಲುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ."
ದಿವ್ಯ ಸಾನಿಧ್ಯ ಮತ್ತು ಗಣ್ಯರ ಉಪಸ್ಥಿತಿ
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚಿತ್ರದುರ್ಗದ ಪ್ರಮುಖ ಮಠಾಧೀಶರಾದ ಶ್ರೀ ಡಾ. ಶಾಂತವೀರ ಮಹಾಸ್ವಾಮೀಜಿ (ಕುಂಚಿಟಿಗ ಸಂಸ್ಥಾನ), ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮೀಜಿ (ಭೋವಿ ಗುರುಪೀಠ), ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿ (ಹರಿಹರ ವಾಲ್ಮೀಕಿ ಪೀಠ), ಶ್ರೀ ಬಸವ ಮಾಚಿದೇವ ಮಹಾಸ್ವಾಮೀಜಿ (ಮಡಿವಾಳ ಗುರುಪೀಠ), ಶ್ರೀ ಸರ್ದಾರ್ ಸೇವಾಲಾಲ್ ಮಹಾಸ್ವಾಮೀಜಿ (ಬಂಜಾರ ಗುರುಪೀಠ) ಹಾಗೂ ಶ್ರೀ ಬಸವ ಇಮ್ಮಡಿ ಕೇತೇಶ್ವರ ಮಹಾಸ್ವಾಮೀಜಿ (ಕೇತೇಶ್ವರ ಗುರುಪೀಠ) ಅವರು ವಹಿಸಿದ್ದರು.
ಹಿರಿಯ ಪತ್ರಕರ್ತ ಜಿ.ಎಸ್. ಉಜ್ಜನಪ್ಪ ಅವರು ಸ್ಮರಣಾ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ, ಮಾಜಿ ಶಾಸಕ ಎಸ್.ಕೆ. ಬಸವರಾಜನ್, ಮನೋಹರ ಮಸ್ಕಿ ಉಪಸ್ಥಿತರಿದ್ದರು.
ತೋಟಪ್ಪ ಉತ್ತಂಗಿ ಹಾಗೂ ಕೋಕಿಲ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ, ದಿವಂಗತರ ಪುತ್ರ ಹಾಗೂ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ನವೀನ್ ಕೆ.ಎಸ್. ಎಲ್ಲರನ್ನೂ ಸ್ವಾಗತಿಸಿದರು. ನವೀನ್ ಮಸ್ಕಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.



