ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ವ್ಯಾಪ್ತಿಯ ನಾರಾಯಣಪುರ ಎಡದಂಡೆ ಕಾಲುವೆ ಜಾಲದಲ್ಲಿ ಅಳವಡಿಸಲಾಗಿರುವ ಆಧುನಿಕ 'ಸ್ಕಾಡಾ' ತಂತ್ರಜ್ಞಾನದ ಮೂಲಕ ರೈತರಿಗೆ ಸಮರ್ಪಕವಾಗಿ ನೀರು ಪೂರೈಸುವ ಕಾರ್ಯವೈಖರಿಯ ಕುರಿತು ಸಮಗ್ರ ಮಾಹಿತಿ ನೀಡುವಂತೆ ಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರರಾದ ಡಾ. ಕೆ. ಜೈಪ್ರಕಾಶ್ ಅವರು ನಿಗಮದ ತಾಂತ್ರಿಕ ನಿರ್ದೇಶಕರಾದ ರಾಜೇಶ್ ಅವರಿಗೆ ಸೂಚಿಸಿದ್ದಾರೆ.
ನವೆಂಬರ್ 21ರಂದು ಬೆಂಗಳೂರಿನ ಆನಂದರಾವ್ ವೃತ್ತದಲ್ಲಿರುವ ಕೆಇಬಿ ಸಭಾಂಗಣದಲ್ಲಿ 'ನಕ್ಷಾಟೆಕ್' ವತಿಯಿಂದ ಆಯೋಜಿಸಲಾಗಿರುವ 'ಜಿಐಎಸ್ ದಿನ' ಕಾರ್ಯಕ್ರಮದಲ್ಲಿ ಡಾ. ಕೆ. ಜೈಪ್ರಕಾಶ್ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ, ಕಾಲುವೆ ನೀರಿನ ಬೇಡಿಕೆ ಅಂದಾಜು ಮತ್ತು ವಿತರಣಾ ವ್ಯವಸ್ಥೆಯ ಸಂಪೂರ್ಣ ಚಿತ್ರಣವನ್ನು ಒಳಗೊಂಡ ಪಿಪಿಟಿ ಸ್ಲೈಡ್ಗಳನ್ನು ಸಿದ್ಧಪಡಿಸಿ ನವೆಂಬರ್ 20ರ ಮಧ್ಯಾಹ್ನ 3 ಗಂಟೆಯೊಳಗೆ ಕಳುಹಿಸಿಕೊಡುವಂತೆ ಅವರು ಪತ್ರದ ಮೂಲಕ ಕೋರಿದ್ದಾರೆ.
ನೀರಿನ ಜಾಲದ ಸಾಮರ್ಥ್ಯ: ಯುಕೆಪಿ ಯೋಜನೆಯಡಿ ನಾರಾಯಣಪುರ ಜಲಾಶಯದ 10,000 ಕ್ಯೂಸೆಕ್ ಸಾಮರ್ಥ್ಯದ ಮುಖ್ಯ ಕಾಲುವೆಯಿಂದ ಆರಂಭವಾಗಿ ಶಾಖಾ ಕಾಲುವೆಗಳು, ವಿತರಣಾ ಕಾಲುವೆಗಳು, ಲ್ಯಾಟರಲ್ಗಳು ಹಾಗೂ ಅಂತಿಮ ಹಂತದ ತೂಬುಗಳ ಮೂಲಕ ಅಚ್ಚುಕಟ್ಟು ಪ್ರದೇಶದ ರೈತರ ಜಮೀನಿಗೆ ನೀರು ತಲುಪುವ ವ್ಯವಸ್ಥೆ ಮಾಡಲಾಗಿದೆ.
ಬೇಡಿಕೆ ಸಂಗ್ರಹಣೆ ಮತ್ತು ಕ್ರೋಢೀಕರಣ: ಅಚ್ಚುಕಟ್ಟು ಪ್ರದೇಶದ ರೈತರಿಂದ ನೀರಾವರಿ ಬೇಡಿಕೆಯನ್ನು ಹೇಗೆ ಪಡೆಯಲಾಗುತ್ತದೆ ಹಾಗೂ ವಿವಿಧ ಹಂತಗಳಲ್ಲಿ ಅವುಗಳನ್ನು ಹೇಗೆ ಪರಿಶೀಲಿಸಿ, ಆದ್ಯತೆಯ ಮೇರೆಗೆ ಕ್ರೋಢೀಕರಿಸಲಾಗುತ್ತದೆ ಎಂಬ ವಿವರ ಒಳಗೊಂಡಿರಲಿ ಎಂದು ಅವರು ಸಲಹೆ ನೀಡಿದ್ದಾರೆ.
ಸ್ಕಾಡಾ ಮೂಲಕ ನೀರು ಹಂಚಿಕೆ: ಕ್ರೋಢೀಕೃತ ಬೇಡಿಕೆಯನ್ನು ಲಭ್ಯವಿರುವ ನೀರಿನ ಪ್ರಮಾಣ ಮತ್ತು ಕಾಲುವೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ಹೇಗೆ ಸಂಸ್ಕರಿಸಲಾಗುತ್ತದೆ. ಅನುಮೋದಿತ ಬೇಡಿಕೆಯನ್ನು ಗೇಟ್ ನಿಯಂತ್ರಣ, ನೀರು ಬಿಡುಗಡೆ ಹಾಗೂ ತೂಬುಗಳ ವಿತರಣೆಗಾಗಿ ಸ್ಕಾಡಾ ಸಂಕೇತಗಳಾಗಿ ಹೇಗೆ ಪರಿವರ್ತಿಸಲಾಗುತ್ತದೆ ಮತ್ತು ನೈಜ ನೀರು ಪೂರೈಕೆಯನ್ನು ಹೇಗೆ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂಬ ತಾಂತ್ರಿಕ ಮಾಹಿತಿ ಕೂಡ ಇರಲಿದೆ ಎಂದು ಜೈಪ್ರಕಾಶ್ ತಿಳಿಸಿದರು.
ರೈತರ ಬೇಡಿಕೆಯಿಂದ ಹಿಡಿದು ಜಮೀನಿನ ತೂಬುಗಳಿಗೆ ನೀರು ತಲುಪುವವರೆಗಿನ ಸಂಪೂರ್ಣ ಪ್ರಕ್ರಿಯೆಯನ್ನು ಒಂದು ಸರಳ ರೇಖಾಚಿತ್ರ ಮತ್ತು ಪ್ರಾಯೋಗಿಕ ಉದಾಹರಣೆಯೊಂದಿಗೆ ವಿವರಿಸುವಂತೆ ಡಾ. ಜೈಪ್ರಕಾಶ್ ಅವರು ನಿರ್ದೇಶಿಸಿದ್ದಾರೆ.




