ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಹೊರತು ಉರ್ದು ಅಲ್ಲ ಎಂದು ಸ್ಪಷ್ಟಪಡಿಸಿರುವ ಬಿಜೆಪಿ ಮುಖಂಡ ಸಿ.ಟಿ. ರವಿ, ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’ ಆಚರಿಸಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ್ದಾರೆ.
ವೋಟ್ ಬ್ಯಾಂಕ್ ಮತ್ತು ಒಂದು ನಿರ್ದಿಷ್ಟ ಕೋಮಿನ ಓಲೈಕೆಗಾಗಿ ಕಾಂಗ್ರೆಸ್ ಸರ್ಕಾರ ಯಾವ ಹಂತಕ್ಕಾದರೂ ಇಳಿಯಬಲ್ಲದು ಎಂಬುದಕ್ಕೆ ಈ ತೀರ್ಮಾನವೇ ಸಾಕ್ಷಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೂರದರ್ಶನ ಗಲಭೆಯ ನೆನಪು: ಈ ಹಿಂದೆ ದೂರದರ್ಶನದಲ್ಲಿ ಉರ್ದು ವಾರ್ತೆ ಪ್ರಸಾರ ಮಾಡಲು ಹೊರಟಾಗ ತೀವ್ರ ಪ್ರತಿರೋಧ ವ್ಯಕ್ತವಾಗಿ ಗಲಭೆ ಸಂಭವಿಸಿದ್ದನ್ನು ನೆನಪಿಸಿದ ಸಿ.ಟಿ. ರವಿ, "ವಿಧಾನಸೌಧದಲ್ಲಿ ಉರ್ದು ಹಬ್ಬ ಮಾಡಿ ಎಂದು ಕೇಳಿದವರು ಯಾರು? ಸರ್ಕಾರ ಆ ಹಳೆಯ ಘಟನೆಯನ್ನು ಮರೆತಿದೆಯೇ?" ಎಂದು ಪ್ರಶ್ನಿಸಿದ್ದಾರೆ. ಇಂದು ಉರ್ದು ಹಬ್ಬ ಮಾಡಲು ಹೊರಟು, ನಾಳೆ ಅದು ಕೋಮು ಸ್ವರೂಪ ತಳೆಯುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ನೆಮ್ಮದಿ ಭಂಗ ತರುವ ಯತ್ನ: ರಾಜ್ಯದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲಸುವುದು ಕಾಂಗ್ರೆಸ್‌ಗೆ ಇಷ್ಟವಿಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸರ್ಕಾರದ ಉದ್ದೇಶವೇ ತನ್ನ ಮತಬ್ಯಾಂಕ್‌ಗಾಗಿ ರಾಜ್ಯದ ನೆಮ್ಮದಿ ಭಂಗ ಮಾಡುವುದಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಕನ್ನಡ ಪರ ಸಂಘಟನೆಗಳ ಹೋರಾಟಕ್ಕೆ ಬೆಂಬಲ:
ಕನ್ನಡಿಗರ ಅಸ್ಮಿತೆಯ ಸಂಕೇತವಾಗಿರುವ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ ಆಚರಿಸುವುದನ್ನು ಯಾವುದೇ ಕನ್ನಡಿಗನೂ ಒಪ್ಪಲು ಸಾಧ್ಯವಿಲ್ಲ. ಈಗಾಗಲೇ ಈ ನಿರ್ಧಾರದ ವಿರುದ್ಧ ಧ್ವನಿ ಎತ್ತಿರುವ ಕನ್ನಡ ಪರ ಸಂಘಟನೆಗಳ ವಿರೋಧಕ್ಕೆ ನಮ್ಮ ಪೂರ್ಣ ಬೆಂಬಲವಿದೆ ಎಂದು ಅವರು ತಿಳಿಸಿದ್ದಾರೆ.
ತಕ್ಷಣವೇ ಸರ್ಕಾರ ಈ ವಿವೇಚನಾರಹಿತ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಈ ದುಸ್ಸಾಹಸಕ್ಕೆ ಸರ್ಕಾರ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಸಿ.ಟಿ. ರವಿ ಎಚ್ಚರಿಕೆ ನೀಡಿದ್ದಾರೆ.




