ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಗರದ ಅರಮನೆ ರಸ್ತೆಯಲ್ಲಿರುವ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ದಮನಿತ ಹಿಂದುಳಿದ ಜಾತಿಗಳ ಒಕ್ಕೂಟ ವತಿಯಿಂದ 197 ಜಾತಿಗಳ ರಾಜ್ಯಮಟ್ಟದ ಪದಾಧಿಕಾರಿಗಳ ಮಹತ್ವದ ಕಾರ್ಯಕಾರಿಣಿ ಸಭೆ ಹಮ್ಮಿಕೊಳ್ಳಲಾಗಿತ್ತು.
ಒಕ್ಕೂಟದ ರಾಜ್ಯಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಅವರ ಅಧ್ಯಕ್ಷತೆಯಲ್ಲಿ ಈ ಸಭೆ ಜರುಗಿತು. ಸಭೆಯಲ್ಲಿ ದಮನಿತ ಸಮುದಾಯಗಳ ಶಿಕ್ಷಣ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದಂತೆ ಹಾಗೂ ಈ ಸಮುದಾಯಗಳನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.
ಜಿಲ್ಲಾ ಮಟ್ಟದಲ್ಲಿ ಸಂಘಟನೆಗೆ ನಿರ್ಧಾರ:
ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಮಟ್ಟದ ಸಭೆಗಳನ್ನು ಹಮ್ಮಿಕೊಳ್ಳಲಾಗುವುದು. ಆ ಮೂಲಕ ಎಲ್ಲಾ ದಮನಿತ ಜಾತಿಗಳನ್ನು ಒಂದೇ ವೇದಿಕೆಯಡಿ ತಂದು ಸಂಘಟಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶಕ್ಕೆ ಪ್ರಸ್ತಾಪ:
ಕರ್ನಾಟಕ ರಾಜ್ಯ ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಸಿ. ಶಿವು ಯಾದವ್ ಮಾತನಾಡಿ, "ಚಿತ್ರದುರ್ಗ ಜಿಲ್ಲೆಯು ಬಹುತೇಕ ಹಿಂದುಳಿದ ಮತ್ತು ದಮನಿತ ಜಾತಿಗಳ ಜನರನ್ನು ಅತಿ ಹೆಚ್ಚು ಹೊಂದಿರುವ ಜಿಲ್ಲೆಯಾಗಿದೆ. ಇಲ್ಲಿ ಕಾಡುಗೊಲ್ಲ, ಉಪ್ಪಾರ, ಮಡಿವಾಳ, ವಿಶ್ವಕರ್ಮ, ಹೆಳವ, ಜೋಗಿ, ಹಕ್ಕಿಪಿಕ್ಕಿ, ದೊಂಬಿದಾಸರು, ಸವಿತಾ ಸಮಾಜ, ಬೆಸ್ತರು ಸೇರಿದಂತೆ ಇನ್ನೂ ಅನೇಕ ಸಣ್ಣ ಸಣ್ಣ ಸಮುದಾಯಗಳು ಅತ್ಯಂತ ನಿಷ್ಕೃಷ್ಟವಾಗಿ ಜೀವನ ಸಾಗಿಸುತ್ತಿದ್ದಾರೆ. ಇವರೆಲ್ಲರನ್ನೂ ಒಂದೆಡೆ ಸೇರಿಸಿ ಚಿತ್ರದುರ್ಗದಲ್ಲಿ ಶೀಘ್ರದಲ್ಲೇ ಒಂದು ದೊಡ್ಡ ಮಟ್ಟದ ಬೃಹತ್ ಸಭೆ ಆಯೋಜಿಸಬೇಕು" ಎಂದು ಪ್ರಸ್ತಾಪಿಸಿದರು.
ಈ ಮಹತ್ತರ ಸಭೆಯಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ನೂರಾರು ಪದಾಧಿಕಾರಿಗಳಲ್ಲದೆ, ಹಲವು ಗಣ್ಯರು ಭಾಗವಹಿಸಿದ್ದರು.
ನಿವೃತ್ತ ಐಎಎಸ್ ಅಧಿಕಾರಿ ಹಾಗೂ ರಾಜ್ಯ ಮಾಜಿ ಮುಖ್ಯ ಚುನಾವಣಾಧಿಕಾರಿ ಶ್ರೀನಿವಾಸ್ ಆಚಾರಿ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕನಾಥ್, ನಿವೃತ್ತ ಜಿಲ್ಲಾಧಿಕಾರಿ ಕೆ.ಎಂ. ಲಿಂಗಪ್ಪ, ದಮನಿತ ಜಾತಿಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಆಪಲ್ ನಾಗರಾಜ, ಕುಂಚಿಗನಾಳ್ ಲಕ್ಷ್ಮಿಕಾಂತ.ಎಸ್, ಹರೀಶ್ ಪೂಜಾರ್ ಸೇರಿದಂತೆ ಪ್ರಮುಖ ಮುಖಂಡರು ಹಾಜರಿದ್ದರು.
ಗೌರವ ಸಮರ್ಪಣೆ: ಇದೇ ಸಂದರ್ಭದಲ್ಲಿ ಒಕ್ಕೂಟದ ಹಿರಿಯರು ಹಾಗೂ ರಾಜ್ಯ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಸೇರಿದಂತೆ ಇತರೆ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.



