ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಪೂರ್ವ ಮುಂಗಾರು ಮಾರುತಗಳ ತೀವ್ರತೆ ಹೆಚ್ಚಾಗಿರುವುದರಿಂದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈಗಾಗಲೇ ರಾಜ್ಯದ ಕೆಲವು ಭಾಗಗಳಲ್ಲಿ ಸಿಡಿಲು-ಗುಡುಗು ಸಹಿತ ಸುರಿದ ಮಳೆಗೆ ಪ್ರಾಣಹಾನಿ ಹಾಗೂ ಭಾರಿ ಗಾಳಿಯಿಂದಾಗಿ ವ್ಯಾಪಕ ಬೆಳೆ ಹಾನಿಯಾಗಿರುವ ವರದಿಯಾಗಿದೆ.
ಆರೆಂಜ್ ಅಲರ್ಟ್: ತೀವ್ರ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ರಾಯಚೂರು, ಯಾದಗಿರಿ, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಿಗೆ ಹವಾಮಾನ ಇಲಾಖೆ 'ಆರೆಂಜ್ ಅಲರ್ಟ್' ಘೋಷಿಸಿದೆ.
ಕರಾವಳಿ ಹಾಗೂ ಉತ್ತರ ಒಳನಾಡು (ಮೇ 23ರ ಮುನ್ಸೂಚನೆ): ಇಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ.
ಇನ್ನು ಉತ್ತರ ಒಳನಾಡಿನ ರಾಯಚೂರು, ಕೊಪ್ಪಳ, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲಿ ಗಂಟೆಗೆ 50 ರಿಂದ 60 ಕಿ.ಮೀ ವೇಗದಲ್ಲಿ ಭಾರಿ ಬಿರುಗಾಳಿ ಬೀಸಲಿದ್ದು, ಸಾಧಾರಣ ಮಳೆಯಾಗಲಿದೆ.
ಬಿರುಗಾಳಿ ಸಹಿತ ಸಾಧಾರಣ ಮಳೆ:
ದಕ್ಷಿಣ ಒಳನಾಡಿನ ಚಿತ್ರದುರ್ಗ, ಹಾಸನ, ಕೋಲಾರ, ರಾಮನಗರ, ಕೊಡಗು, ಮಂಡ್ಯ, ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲೂ ಬಿರುಗಾಳಿ ಸಹಿತ ಮಳೆ ಮುಂದುವರಿಯಲಿದೆ.
ರಾಜಧಾನಿಯಲ್ಲಿ ಮಳೆ ಅವಾಂತರ:
ಬೆಂಗಳೂರಿನಲ್ಲಿ ಮುಂದಿನ 48 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿ ವೇಳೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಮುಂದಿನ ಐದು ದಿನಗಳ ಕಾಲ ಮಳೆ ಅಬ್ಬರ ಇರುವುದರಿಂದ ಸಾರ್ವಜನಿಕರು ಹವಾಮಾನ ಮುನ್ಸೂಚನೆ ಗಮನಿಸಿ, ಸುರಕ್ಷಿತವಾಗಿ ಸಂಚರಿಸುವಂತೆ ಕೋರಲಾಗಿದೆ.



